ರಾಜಸ್ಥಾನ | ಧಾರ್ಮಿಕ ಮೆರವಣಿಗೆ ವೇಳೆ ದೇವಾಲಯ ಪ್ರವೇಶಿಸಲು ಯತ್ನಿಸಿದ ದಲಿತರ ಮೇಲೆ ಹಲ್ಲೆ : ಆರೋಪ

ಸಾಂದರ್ಭಿಕ ಚಿತ್ರ
ಜೈಪುರ: ಧಾರ್ಮಿಕ ಮೆರವಣಿಗೆಯ ವೇಳೆ ದಲಿತರ ಗುಂಪೊಂದು ದೇವಾಲಯ ಪ್ರವೇಶಿಸಲು ಪ್ರಯತ್ನಿಸಿದ್ದಕ್ಕೆ ಅವರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿರುವ ಘಟನೆ ರಾಜಸ್ಥಾನದ ಚುರು ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆ ರವಿವಾರ ಸದಾಸರ್ ಗ್ರಾಮದಲ್ಲಿ ನಡೆದಿದ್ದು, ಸೋಮವಾರ ಸ್ಥಳೀಯ ಪೊಲೀಸ್ ಠಾಣೆಯೆದುರು ಪ್ರತಿಭಟನೆಗಳು ನಡೆದಿವೆ.
ಕಾನಾರಾಮ್ ಮೇಘ್ವಾಲ್ ಎಂಬುವವರು ದಾಖಲಿಸಿರುವ ಎಫ್ಐಆರ್ ಪ್ರಕಾರ, ಈ ಘಟನೆ ರವಿವಾರ ಸಂಜೆ ಧಾರ್ಮಿಕ ಮೆರವಣಿಗೆ ವೇಳೆ ನಡೆದಿದೆ.
"ಭಾಗವತ ಕಥೆ ನಡೆದ ಸ್ಥಳದಿಂದ ಸಮೀಪದ ದೇವಾಲಯಕ್ಕೆ ಮೆರವಣಿಗೆ (ಶೋಭಾ ಯಾತ್ರೆ) ಹೊರಟಾಗ, ಕೆಲವರು ದೇವರ ದರ್ಶನ ಪಡೆಯಲು ದೇವಾಲಯಕ್ಕೆ ಪ್ರವೇಶಿಸಲು ಯತ್ನಿಸಿದ್ದಾರೆ. ಈ ವೇಳೆ, ಸೂರ್ದಾಸ್ ಸ್ವಾಮಿ, ಶಂಕರ್ ಲಾಲ್, ಹಿಮ್ಮತ್ ಕುಮಾರ್ ಹಾಗೂ ಅನಿಲ್ ಸೇರಿದಂತೆ ಕೆಲವು ಗ್ರಾಮಸ್ಥರು ನಾವು ದಲಿತರಾಗಿರುವುದರಿಂದ ನಮ್ಮನ್ನು ತಡೆದು ಹಲ್ಲೆ ನಡೆಸಿದ್ದಾರೆ ಎಂದು ಮೇಘ್ವಾಲ್ ಆರೋಪಿಸಿದ್ದಾರೆ.
ದೇವಾಲಯದ ಪ್ರವೇಶ ದ್ವಾರದಲ್ಲಿ ಜನದಟ್ಟಣೆ ಇತ್ತು. ಹೀಗಾಗಿ, ಮೇಘ್ವಾಲ್ ಹಾಗೂ ಇನ್ನಿತರರಿಗೆ ಕಾಯುವಂತೆ ಸೂಚಿಸಲಾಗಿದೆ. ಈ ವೇಳೆ ಎರಡು ಗುಂಪುಗಳ ನಡುವೆ ವಾಗ್ವಾದ ನಡೆದಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಸತ್ಯನಾರಾಯಣ್ ಗೊದಾರ ಹೇಳಿದ್ದಾರೆ.
ಈ ಸಂಬಂಧ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಅವರನ್ನು ಪತ್ತೆ ಹಚ್ಚಲು ಶೋಧ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.





