Rajasthan | ಪಾಕಿಸ್ತಾನದ ಪರ ಬೇಹುಗಾರಿಕೆ : ಬಲವೀಂದರ್ ಸಿಂಗ್ ಬಂಧನ

Photo Credit: timesofindia
ಜೈಸಲ್ಮೇರ್: ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್ಐನ ಹ್ಯಾಂಡ್ಲರ್ಗಳಿಗಾಗಿ ಕೆಲಸ ಮಾಡುತ್ತಿದ್ದನೆನ್ನಲಾದ 45 ವರ್ಷ ವಯಸ್ಸಿನ ಭಾರತೀಯ ಪ್ರಜೆಯೊಬ್ಬನನ್ನು ರಾಜಸ್ಥಾನದ ಶ್ರೀಗಂಗಾನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಗಡಿಯಾಚೆಗಿನ ಐಎಸ್ಐ ಬೇಹುಗಾರರಿಗೆ 8 ಭಾರತೀಯ ಪೌರರ ಸಿಮ್ಕಾರ್ಡ್ಗಳನ್ನು ಕಳುಹಿಸಿದ ಆರೋಪವನ್ನು ಆತ ಎದುರಿಸುತ್ತಿದ್ದಾನೆ.
ಬಂಧಿತ ವ್ಯಕ್ತಿಯನ್ನು ಶ್ರೀಗಂಗಾನಗರ ಜಿಲ್ಲೆಯ ಅನೂಪ್ಗಢದ ನಿವಾಸಿ ಬಲವೀಂದರ್ ಸಿಂಗ್ ಯಾನೆ ಬಿಂದ್ರಾ ಎಂದು ಗುರುತಿಸಲಾಗಿದೆ.
ಪಾಕ್ ಮೂಲದ ಐಎಸ್ಐ ಹ್ಯಾಂಡ್ಲರ್ಗಳ ಜೊತೆ ಆತ ಸಂರ್ಕವಿರಿಸಿಕೊಂಡಿರುವ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಪೊಲೀಸರು ಆತನ ಮೇಲೆ ನಿಗಾವಿರಿಸಿದ್ದರು. ಬಲವೀಂದರ್ ಸಿಂಗ್, ಭಾರತೀಯ ಮೊಬೈಲ್ ಪೋನ್ ಸಂಖ್ಯೆಗಳನ್ನು ಹ್ಯಾಂಡ್ಲರ್ಗಳಿಗೆ ಒದಗಿಸಿದ್ದು, ಆ ಮೂಲಕ ಅವರು ಭಾರತಕ್ಕೆ ಕರೆ ಮಾಡಿ, ಸೂಕ್ಷ್ಮಸಂವೇದಿ ಹಾಗೂ ಆಯಕಟ್ಟಿನ ಮಾಹಿತಿಯನ್ನು ಪಡೆಯಲು ಸಹಕರಿಸುವ ಮೂಲಕ ದೇಶದ ಸಾರ್ವಭಾಮತ್ವಕ್ಕೆ ಬೆದರಿಕೆಯಾಗಿದ್ದನೆಂದು ಶ್ರೀಗಂಗಾನಗರ ಜಿಲ್ಲಾ ಪೊಲೀಸ್ ಆಧೀಕ್ಷಕ ಹರಿಶಂಕರ ಯಾದವ್ ಅವರು ತಿಳಿಸಿದ್ದಾರೆ.
ಭಾರತೀಯ ಸಿಮ್ಕಾರ್ಡ್ಗಳನ್ನು ಆತ ಪಾಕಿಸ್ತಾನಕ್ಕೆ ಕಳುಹಿಸುತ್ತಿದ್ದು, ಅಲ್ಲಿ ಐಎಸ್ಐ ಏಜೆಂಟರು, ಭಾರತೀಯ ಮೊಬೈಲ್ ಸಂಖ್ಯೆಗಳಿಗೆ ಲಿಂಕ್ ಆಗಿರುವ ವಾಟ್ಸಾಪ್ ಖಾತೆಗಳನ್ನು ಸಕ್ರಿಯಗೊಳಿಸಲು (ಆಕ್ಟಿವೇಟ್) ಒಟಿಪಿ ದೃಢೀಕರಣಕ್ಕಾಗಿ ಬಳಸಿಕೊಳ್ಳುತ್ತಿದ್ದರೆಂದು ಹರಿಶಂಕರ ಯಾದವ್ ತಿಳಿಸಿದ್ದಾರೆ.
ರೈಸಿಂಗ್ನಗರದ ಅಪರ ಪೊಲೀಸ್ ಆಧೀಕ್ಷಕ ನೀಲಂ ಚೌಧುರಿ ಹಾಗೂ ಅನೂಪ್ಗಢ ವೃತ್ತ ಉಪ ಅಧೀಕ್ಷಕ ಜೈಪ್ರಕಾಶ್ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆಯನ್ನು ನಡೆಸಲಾಗಿತ್ತೆಂದು ಅವರು ತಿಳಿಸಿದರು. ಅನೂಪ್ಗ ಪೊಲೀಸ್ ಠಾಣೆಯ ವರಿಷ್ಠ ಕರ್ತಾರ್ ಸಿಂಗ್, ಗುಪ್ತಚರ ಸಿಬ್ಬಂದಿಗಳಾದ ಪವನ್ಕುಮಾರ್,ಕೇಸರ್ ಸಿಂಗ್ ಹಾಗೂ ತುಕಾರಾಮ್ ಅವರು ಕೂಡಾ ಭಾಗವಹಿಸಿದ್ದ ಈ ಕಾರ್ಯಾಚರಣೆಯನ್ನು ಸಿಐಡಿ (ಬೇಹಗುಗಾರಿಕೆ) ಇಲಾಖೆಯ ಸಮನ್ವಯದೊಂದಿಗೆ ನಡೆಸಲಾಗಿತ್ತೆಂದು ಹರಿಶಂಕರ್ಯಾದವ್ ಅವರು ತಿಳಿಸಿದ್ದಾರೆ.






