ಮಸೀದಿಗಳು ವಕ್ಫ್ ಆಸ್ತಿಗಳಾಗಿದ್ದು, ವಕ್ಫ್ ನ್ಯಾಯಾಧೀಕರಣಗಳು ಮಾತ್ರ ವ್ಯಾಜ್ಯಗಳ ವಿಚಾರಣೆ ನಡೆಸಬಹುದಾಗಿದೆ: ರಾಜಸ್ಥಾನ ಹೈಕೋರ್ಟ್ ಮಹತ್ವದ ತೀರ್ಪು

ರಾಜಸ್ಥಾನ ಹೈಕೋರ್ಟ್ | PC : PTI
ಜೈಪುರ: ರಾಜಸ್ಥಾನ ಹೈಕೋರ್ಟ್ ನೀಡಿರುವ ಮಹತ್ವದ ತೀರ್ಪೊಂದರಲ್ಲಿ, ಮಸೀದಿಗಳು ವಕ್ಫ್ ಆಸ್ತಿಗಳಾಗಿದ್ದು, ನ್ಯಾಯಾಧೀಕರಣಗಳು ಮಾತ್ರ ಅವುಗಳಿಗೆ ಸಂಬಂಧಿಸಿದ ವ್ಯಾಜ್ಯಗಳ ವಿಚಾರಣೆ ನಡೆಸಬಹುದಾಗಿದೆ ಎಂದು ಹೇಳಲಾಗಿದೆ.
ಮದೀನಾ ಜಾಮಾ ಮಸೀದಿಯ ಕುರಿತು ಸಿವಿಲ್ ನ್ಯಾಯಾಲಯ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಶಾಕುರ್ ಶಾ ಹಾಗೂ ಮತ್ತೊಬ್ಬ ಅರ್ಜಿದಾರರು ರಾಜಸ್ಥಾನ ಹೈಕೋರ್ಟ್ ನಲ್ಲಿ ಪರಾಮರ್ಶೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾ. ಬಿರೇಂದ್ರ ಕುಮಾರ್, “ಮಸೀದಿಗಳು ಪ್ರಾರ್ಥನೆ (ನಮಾಝ್) ಸಲ್ಲಿಸುವಂಥ ಧಾರ್ಮಿಕ ಸ್ಥಳಗಳಾಗಿರುವುದರಿಂದ, ವಕ್ಫ್ ಕಾಯ್ದೆ, 1995ರ ಸೆಕ್ಷನ್ 3(ಆರ್) ಅಡಿ ಅವನ್ನು ವಕ್ಫ್ ಎಂದು ವ್ಯಾಖ್ಯಾನಿಸಲಾಗಿದೆ. ಹೀಗಾಗಿ, ಇಂತಹ ಆಸ್ತಿಗಳಿಗೆ ಸಂಬಂಧಿಸಿದ ವ್ಯಾಜ್ಯಗಳನ್ನು ವಕ್ಫ್ ನ್ಯಾಯಾಧೀಕರಣ ಮಾತ್ರ ನಿರ್ವಹಿಸಬಹುದಾಗಿದೆ” ಎಂದು ಫೆಬ್ರವರಿ 22ರಂದು ನೀಡಿರುವ ತಮ್ಮ ತೀರ್ಪಿನಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.
ಇದಕ್ಕೂ ಮುನ್ನ, ಮದೀನಾ ಜಾಮಾ ಮಸೀದಿಯ ಹಕ್ಕುದಾರಿಕೆಗೆ ಸಂಬಂಧಿಸಿದಂತೆ ಫಲೋಡಿ ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು (ಶಾಕುರ್ ಶಾ ಮತ್ತಿತರರು Vs ಇಲಿಯಾಸ್ ಮತ್ತಿತರರು). ಮಸೀದಿಯ ಮೇಲೆ ನಮಗೆ ನ್ಯಾಯಬದ್ಧ ಹಕ್ಕಿದೆ ಎಂದು ಅರ್ಜಿದಾರರು ವಾದಿಸಿದ್ದರು. ಅದಕ್ಕೆ ಪ್ರತಿಯಾಗಿ, ಮಸೀದಿಯಲ್ಲಿ ಶಾಂತಿಯುತ ಧಾರ್ಮಿಕ ರೂಢಿಗಳು, ನಿರ್ದಿಷ್ಟವಾಗಿ ಪ್ರಾರ್ಥನೆ ಸಲ್ಲಿಸಲು ತೊಂದರೆ ನೀಡದಂತೆ ಅರ್ಜಿದಾರರನ್ನು ತಡೆಯಲು ತಡೆಯಾಜ್ಞೆ ನೀಡಬೇಕು ಎಂದು ಪ್ರತಿವಾದಿಗಳು ಮನವಿ ಮಾಡಿದ್ದರು. ಸಿವಿಲ್ ಪ್ರಕ್ರಿಯಾ ಸಂಹಿತೆಯ ಆದೇಶ 7ರ ನಿಯಮ 11ರ ಪ್ರಕಾರ, ಈ ವಿವಾದವನ್ನು ಸಿವಿಲ್ ಕೋರ್ಟ್ ಬದಲಿಗೆ ವಕ್ಫ್ ನ್ಯಾಯಾಧೀಕರಣ ಮಾತ್ರ ನಡೆಸಬಹುದಾಗಿದೆ. ಈ ವ್ಯಾಜ್ಯವು ವಕ್ಫ್ ಆಸ್ತಿಗೆ ಸಂಬಂಧಿಸಿದ್ದಾಗಿರುವುದರಿಂದ, ಈ ಪ್ರಕರಣ ಸಿವಿಲ್ ನ್ಯಾಯಾಲಯದ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಅವರು ವಾದಿಸಿದ್ದರು.
ಆದರೆ, ಪ್ರತಿವಾದಿಗಳ ಮನವಿಯನ್ನು ತಳ್ಳಿ ಹಾಕಿದ್ದ ಸಿವಿಲ್ ನ್ಯಾಯಾಲಯ, ವಕ್ಫ್ ದಾಖಲೆಯಲ್ಲಿ ಮಸೀದಿಗಳನ್ನು ಅಧಿಕೃತವಾಗಿ ದಾಖಲಿಸದೆ ಇರುವುದರಿಂದ, ಅದು ವಕ್ಫ್ ಆಸ್ತಿ ಎಂಬ ಮಾನ್ಯತೆ ಪಡೆಯುವುದಿಲ್ಲ ಎಂದು ತೀರ್ಪು ನೀಡಿತ್ತು. ಈ ತೀರ್ಪನ್ನು ಪ್ರಶ್ನಿಸಿ ಅರ್ಜಿದಾರರಾದ ಶಾಕುರ್ ಶಾ ಮತ್ತಿತರರು ರಾಜಸ್ಥಾನ ಹೈಕೋರ್ಟ್ ಗೆ ಪರಾಮರ್ಶೆ ಅರ್ಜಿ ಸಲ್ಲಿಸಿದ್ದರು.
ಸಿವಿಲ್ ನ್ಯಾಯಾಲಯದ ಈ ವ್ಯಾಖ್ಯಾನಕ್ಕೆ ಅಸಮ್ಮತಿ ವ್ಯಕ್ತಪಡಿಸಿದ ಹೈಕೋರ್ಟ್, ಮಸೀದಿಯೊಂದು ವಸ್ತುಶಃ ಪ್ರಾರ್ಥನೆಯಂಥ ಧಾರ್ಮಿಕ ಉದ್ದೇಶಗಳಿಗೆ ಬಳಕೆಯಾಗುವುದರಿಂದ, ವಕ್ಫ್ ದಾಖಲೆಗಳಲ್ಲಿ ಹಾಗೆಂದು ನೋಂದಾಯಿಸಿರದಿದ್ದರೂ, ಅದು ಮೂಲವಾಗಿ ವಕ್ಫ್ ಆಸ್ತಿಯಾಗಿದೆ ಎಂದು ತೀರ್ಪು ನೀಡಿದೆ.







