13 ವರ್ಷದ ಅತ್ಯಾಚಾರ ಸಂತ್ರಸ್ತೆಯ ಗರ್ಭಪಾತಕ್ಕೆ ರಾಜಸ್ಥಾನ ಹೈಕೋರ್ಟ್ ಅಸ್ತು

PC: x.com/OpIndia_com
ಜೈಪುರ: ಹದಿಮೂರು ವರ್ಷ ವಯಸ್ಸಿನ ಅತ್ಯಾಚಾರ ಸಂತ್ರಸ್ತೆಯ 27 ವಾರಗಳ ಭ್ರೂಣದ ಗರ್ಭಪಾತಕ್ಕೆ ರಾಜಸ್ಥಾನ ಹೈಕೋರ್ಟ್ ಅನುಮತಿ ನೀಡಿದೆ. ಒಂದು ವೇಳೆ ಗರ್ಭದಲ್ಲಿರುವ ಮಗು ಉಳಿದುಕೊಂಡರೆ ಆಸ್ಪತ್ರೆ ಇನ್ಕ್ಯುಬೇಟರ್ನಲ್ಲಿ ಇದರ ಪೋಷಣೆಗೆ ಅಗತ್ಯ ವ್ಯವಸ್ಥೆ ಮಾಡಬೇಕು ಎಂದು ಏಕಸದಸ್ಯ ಪೀಠ ಆದೇಶ ನೀಡಿದೆ. ಜತೆಗೆ ಮಗುವಿನ ಪೋಷಣೆಯ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಬೇಕು ಎಂದು ಸ್ಪಷ್ಟಪಡಿಸಿದೆ. ಮಗು ಭ್ರೂಣ ಹಂತದಲ್ಲೇ ಮೃತಪಟ್ಟಲ್ಲಿ, ಡಿಎನ್ಎ ಪರೀಕ್ಷೆ ವರದಿಯನ್ನು ಸಂರಕ್ಷಿಸುವಂತೆ ಸೂಚಿಸಿದೆ.
ಆಸ್ಪತ್ರೆಯಲ್ಲಿ ತಪಾಸಣೆಗೆ ತೆರಳಿದ್ದ ವೇಳೆ 13 ವರ್ಷದ ಬಾಲಕಿ ಗರ್ಭಿಣಿಯಾಗಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಮಾರ್ಚ್ 3ರಂದು ಅತ್ಯಾಚಾರ ಪ್ರಕರಣ ದಾಖಲಿಸಲಾಗಿತ್ತು. ಈ ವಿಷಯವನ್ನು ಬಹಿರಂಗಪಡಿಸದಂತೆ ಆರೋಪಿ ಬೆದರಿಕೆ ಹಾಕಿದ್ದ ಎಂದು ಬಾಲಕಿಯ ಕುಟುಂಬದವರು ದೂರಿದ್ದಾರೆ.
ಬುಧವಾರ ವೈದ್ಯಕೀಯ ಮಂಡಳಿಯ ಮುಂದೆ ಪೋಷಕರ ಜತೆ ಹಾಜರಾಗುವಂತೆ ಅತ್ಯಾಚಾರ ಸಂತ್ರಸ್ತೆಗೆ ಸೂಚಿಸಲಾಗಿದೆ.
ಜೈಪುರದ ಸಂಗನೇರಿ ಗೇಟ್ ಮಹಿಳಾ ಚಿಕಿತ್ಸಾಲಯದ ವೈದ್ಯಕೀಯ ಅಧೀಕ್ಷಕರಿಗೆ ಈ ಬಗ್ಗೆ ಸೂಚನೆ ನೀಡಿರುವ ನ್ಯಾಯಮೂರ್ತಿ ಸಂದೇಶ್ ಬನ್ಸಾಲ್ ಅವರು, ಅಗತ್ಯ ವಿಧಿವಿಧಾನ ನೆರವೇರಿಸಲು ಆದೇಶಿಸಿದ್ದಾರೆ. ಅರ್ಜಿದಾರರ ಪರ ವಕೀಲ ಸೋನಿಯಾ ಶಾಂಡಿಲ್ಯ ಪ್ರಕರಣದ ಬಗ್ಗೆ ವಿವರ ನೀಡಿ, "ಅರ್ಜಿದಾರರು ಅಪ್ರಾಪ್ತ ವಯಸ್ಸಿನ ಬಾಲಕಿಯಾಗಿದ್ದು, ಆಕೆಯ ಪೋಷಕರು ಕೂಡಾ ಗರ್ಭಪಾತಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಅತ್ಯಂತ ಅಪಾಯಕಾರಿ ಶಸ್ತ್ರಚಿಕಿತ್ಸೆಗೆ ಕೂಡಾ ಪೋಷಕರು ಒಪ್ಪಿದ್ದಾರೆ. ಗರ್ಭಪಾತ ಮಾಡಲು ಅವಕಾಶ ನೀಡದಿದ್ದರೆ ಅದು ಆಕೆಯ ಮಾನಸಿಕ ಆರೋಗ್ಯಕ್ಕೂ ಘಾಸಿ ಮಾಡಬಹುದು ಎನ್ನುವುದು ನಮ್ಮ ವಾದ" ಎಂದು ಹೇಳಿದ್ದಾರೆ.
ಎಂಟಿಎ ಕಾಯ್ದೆಯ ಅಡಿಯಲ್ಲಿ ವಿವಾಹಿತ ಮಹಿಳೆ, ಅತ್ಯಾಚಾರ ಸಂತ್ರಸ್ತೆ, ಅಶಕ್ತ ಮಹಿಳೆ ಮತ್ತು ಅಪ್ರಾಪ್ತ ವಯಸ್ಸಿನ ಯುವತಿಯರಿಗೆ 24 ವಾರಗಳವರೆಗಿನ ಭ್ರೂಣದ ಗರ್ಭಪಾತಕ್ಕೆ ಅವಕಾಶವಿದೆ. ಆದರೆ 28 ವಾರಗಳ ಗರ್ಭಿಣಿಯರಿಗೆ ಕೂಡಾ ಗರ್ಭಪಾತಕ್ಕೆ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಅವಕಾಸ ಮಾಡಿಕೊಟ್ಟದ್ದನ್ನು ನಾವು ನ್ಯಾಯಾಲಯದ ಗಮನಕ್ಕೆ ತಂದಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.







