Rajasthan | ‘ಮದನ್ ದಿಲಾವರ್, ನಿಮಗೆ 48 ಗಂಟೆಗಳ ಸಮಯವಿದೆ’: ಬೇಡಿಕೆ ಈಡೇರದಿದ್ದರೆ ರಾಜೀನಾಮೆಗೆ CJP ಆಗ್ರಹ

ಅಭಿಜೀತ್ ದೀಪ್ಕೆ, ಮದನ್ ದಿಲಾವರ್ | Photo Credit : PTI
ಜೈಪುರ: ಜೈಪುರ ಜಿಲ್ಲೆಯ ರಾಂಪುರ ಕನ್ವರ್ಪುರ ಗ್ರಾಮದಲ್ಲಿ ಶಾಲಾ ತಪಾಸಣೆಗೆ ತೆರಳಿದ್ದ ತನ್ನ ಸ್ವಯಂಸೇವಕರ ಮೇಲೆ ದಾಳಿ ನಡೆದಿದೆ ಎಂದು ಆರೋಪಿಸಿರುವ ಕಾಕ್ರೋಚ್ ಜನತಾ ಪಾರ್ಟಿ(CJP), ಆರೋಪಿಗಳನ್ನು ಬಂಧಿಸುವಂತೆ ರಾಜಸ್ಥಾನ ಸರಕಾರಕ್ಕೆ 48 ಗಂಟೆಗಳ ಗಡುವು ನೀಡಿದೆ. ಬೇಡಿಕೆ ಈಡೇರದಿದ್ದರೆ ರಾಜ್ಯವ್ಯಾಪಿ ಆಂದೋಲನ ನಡೆಸುವುದಾಗಿ ಎಚ್ಚರಿಸಿರುವ ಪಕ್ಷ, ಶಿಕ್ಷಣ ಸಚಿವ ಮದನ್ ದಿಲಾವರ್ ಅವರ ರಾಜೀನಾಮೆಗೂ ಒತ್ತಾಯಿಸಿದೆ.
CJPಯ ‘ಶಾಲಾ ಥಿಕ್ ಕರೋ’ ಅಭಿಯಾನದ ಭಾಗವಾಗಿ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ಪರಿಶೀಲಿಸಲು ಪಕ್ಷದ ತಂಡ ಗ್ರಾಮಕ್ಕೆ ತೆರಳಿತ್ತು. ಈ ವೇಳೆ ಘರ್ಷಣೆ ನಡೆದಿದೆ ಎಂದು ಪಕ್ಷ ಹೇಳಿದೆ.
ತಮ್ಮ ತಂಡದ ಮೇಲೆ ಬಿಜೆಪಿಗೆ ಸಂಬಂಧಿಸಿದವರು ದಾಳಿ ನಡೆಸಿದ್ದಾರೆ ಎಂದು CJP ಸಹ ಸಂಚಾಲಕ ಅಶುತೋಷ್ ರಂಕಾ ಆರೋಪಿಸಿದ್ದಾರೆ. ಪೊಲೀಸರು ಮಧ್ಯಪ್ರವೇಶಿಸಲು ವಿಫಲರಾದರು ಎಂದೂ ದೂರಿದ್ದಾರೆ.
“ನಾವು ರಾಂಪುರ–ಕನ್ವರ್ಪುರ ಗ್ರಾಮದ ಶಾಲೆಯನ್ನು ಪರಿಶೀಲಿಸಲು ಹೋಗಿದ್ದೆವು. ಕಳೆದ ಹಲವು ವರ್ಷಗಳಿಂದ ಶಾಲೆಯು ಎಮ್ಮೆಗಳ ಕೊಟ್ಟಿಗೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಕಳೆದ ವರ್ಷವೂ ನಾವು ಪರಿಶೀಲನೆಗೆ ಹೋಗಿದ್ದೆವು. ಆಗಲೂ ಶಾಲೆ ಎಮ್ಮೆಗಳ ಕೊಟ್ಟಿಗೆಯಲ್ಲೇ ನಡೆಯುತ್ತಿತ್ತು” ಎಂದು ರಂಕಾ ಹೇಳಿದ್ದಾರೆ.
ಘರ್ಷಣೆ ಪೂರ್ವನಿಯೋಜಿತವಾಗಿತ್ತು. ಸ್ವಯಂಸೇವಕರು ಶಾಲೆಯನ್ನು ತಲುಪುವ ಮೊದಲೇ ಅವರ ಮೇಲೆ ಹಲ್ಲೆ ನಡೆಸಲಾಯಿತು ಎಂದು ಅವರು ಆರೋಪಿಸಿದ್ದಾರೆ.
“ವಾಹನದ ಕಿಟಕಿಗಳನ್ನು ಒಡೆದುಹಾಕಲಾಯಿತು, ಫೋನ್ ಗಳನ್ನು ಒಡೆದುಹಾಕಲಾಯಿತು. ಓರ್ವ ಮಹಿಳೆಯ ಮೇಲೆ ಹಲ್ಲೆ ನಡೆಸಲಾಯಿತು. ನನ್ನ ಶರ್ಟ್ ಹರಿದುಹೋಯಿತು. ನಮ್ಮ ತಂಡದ ಒಬ್ಬ ಸದಸ್ಯರ ಕೈ ಮುರಿಯಿತು. ನಮ್ಮ ಮೇಲೆ ಕಲ್ಲುಗಳಿಂದ ದಾಳಿ ನಡೆಸಲಾಯಿತು” ಎಂದು ಅವರು ಹೇಳಿದ್ದಾರೆ.
ದಿಲಾವರ್ ಅವರನ್ನು ನೇರವಾಗಿ ಗುರಿಯಾಗಿಸಿಕೊಂಡ ರಂಕಾ, “ಮದನ್ ದಿಲಾವರ್ ಅವರಿಗೆ ಒಂದೇ ಒಂದು ವಿಷಯ ಹೇಳಲು ಬಯಸುತ್ತೇನೆ. ನಿಮಗೆ 48 ಗಂಟೆಗಳ ಸಮಯವಿದೆ. ಈ ಗೂಂಡಾಗಳನ್ನು ಬಂಧಿಸಬೇಕು. ನೀವು ಆದೇಶವನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ರಾಜಸ್ಥಾನದಾದ್ಯಂತ ರಾಜ್ಯವ್ಯಾಪಿ ಆಂದೋಲನ ಆರಂಭಿಸುತ್ತೇವೆ. ಈ ಬಾರಿ ಅದು ಕೇವಲ ಶಾಲೆಗಳ ವಿಚಾರವಾಗಿರುವುದಿಲ್ಲ. ಮದನ್ ದಿಲಾವರ್ ಅವರ ರಾಜೀನಾಮೆಗೆ ಒತ್ತಾಯಿಸುತ್ತೇವೆ” ಎಂದು ಹೇಳಿದ್ದಾರೆ.
ಘಟನೆಯನ್ನು ‘ರಾಜಸ್ಥಾನದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಕರಾಳ ದಿನ’ ಎಂದು ಬಣ್ಣಿಸಿದ ರಂಕಾ, ಹಿಂಸಾಚಾರದ ಬಗ್ಗೆ ಮಾಹಿತಿ ನೀಡಿದ್ದರೂ ಪೊಲೀಸರು ನಿಷ್ಕ್ರಿಯರಾಗಿದ್ದರು ಎಂದು ಆರೋಪಿಸಿದ್ದಾರೆ.
CJP ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರು Xನಲ್ಲಿ ಪೋಸ್ಟ್ ಮಾಡಿ, ರಾಜಸ್ಥಾನ ಪೊಲೀಸರು ದಾಳಿ ನಡೆಯಲು ಅವಕಾಶ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಕಿಟಕಿ ಒಡೆದಿರುವ ವಾಹನದ ವೀಡಿಯೊವನ್ನೂ ಅವರು ಹಂಚಿಕೊಂಡಿದ್ದಾರೆ.
ಸರ್ಕಾರಿ ಶಾಲೆಗಳ ಸ್ಥಿತಿಗತಿಗಳನ್ನು ಪರಿಶೀಲಿಸುವುದು, ಮೂಲಸೌಕರ್ಯಗಳನ್ನು ನಿರ್ಣಯಿಸುವುದು ಹಾಗೂ ಶಿಕ್ಷಕರು ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸುವುದು CJPಯ ನಡೆಯುತ್ತಿರುವ ಅಭಿಯಾನದ ಉದ್ದೇಶವಾಗಿದೆ. ಇದರ ಭಾಗವಾಗಿ ತಂಡ ಗ್ರಾಮಕ್ಕೆ ಭೇಟಿ ನೀಡಿತ್ತು.
ರಾಂಪುರ ಕನ್ವರ್ಪುರದಲ್ಲಿರುವ ಶಾಲೆಯನ್ನು ಅಸುರಕ್ಷಿತ ಎಂದು ಘೋಷಿಸಲಾಗಿದೆ ಎಂದು ವರದಿಯಾಗಿದೆ. ಸದ್ಯ ಶಾಲಾ ಕಟ್ಟಡದ ಸಮೀಪದ ದನಗಳ ಕೊಟ್ಟಿಗೆಯ ಆವರಣದಲ್ಲಿ ತರಗತಿಗಳು ನಡೆಯುತ್ತಿವೆ ಎಂದು ತಿಳಿದುಬಂದಿದೆ.
ಶಾಲೆಯು ಸುಮಾರು ಒಂದು ವರ್ಷದಿಂದ ತಾತ್ಕಾಲಿಕ ಸೌಲಭ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪರಿಸ್ಥಿತಿಯನ್ನು ಪರಿಶೀಲಿಸಿ ದುರಸ್ತಿಗೆ ಒತ್ತಾಯಿಸುವ ಉದ್ದೇಶದಿಂದ ತಾವು ಅಲ್ಲಿಗೆ ತೆರಳಿದ್ದಾಗಿ CJP ನಿಯೋಗದ ಸದಸ್ಯರು ಹೇಳಿದ್ದಾರೆ.
ಗ್ರಾಮಸ್ಥರ ಆರೋಪ ಭಿನ್ನ
ಆದರೆ, ಸ್ಥಳೀಯ ನಿವಾಸಿಗಳು ಘಟನೆಯ ಕುರಿತು ಭಿನ್ನ ವಿವರಣೆ ನೀಡಿದ್ದಾರೆ. CJP ಕಾರ್ಯಕರ್ತರ ಮೇಲೆ ದಾಳಿ ನಡೆಸಿರುವುದನ್ನು ಅವರು ನಿರಾಕರಿಸಿದ್ದಾರೆ. ಬದಲಿಗೆ, ದೊಡ್ಡ ಗುಂಪಿನೊಂದಿಗೆ ಬಂದಿದ್ದ CJP ತಂಡ ಶಾಲೆಯ ರಚನೆಯನ್ನು ಕೆಡವಲು ಪ್ರಯತ್ನಿಸಿತು ಎಂದು ಆರೋಪಿಸಿದ್ದಾರೆ.
CJP ತಂಡದೊಂದಿಗೆ 200–250 ಜನರು ಬಂದಿದ್ದರು. ಸ್ಥಳೀಯರು ಅವರ ಮೇಲೆ ಹಲ್ಲೆ ನಡೆಸಿಲ್ಲ ಎಂದು ಗ್ರಾಮಸ್ಥ ಜುಗಲ್ ಕಿಶೋರ್ ಶರ್ಮಾ ಹೇಳಿದ್ದಾರೆ. ಶಾಲೆಯ ದುರಸ್ತಿಗಾಗಿ ಸ್ಥಳೀಯ ಶಾಸಕರ ಮೂಲಕ ಈಗಾಗಲೇ 12 ಲಕ್ಷ ರೂ. ಮಂಜೂರು ಮಾಡಲಾಗಿದೆ ಎಂದೂ ತಿಳಿಸಿದ್ದಾರೆ.
“ನಾವು ಏನೂ ಮಾಡಲಿಲ್ಲ. ಅವರು 200–250 ಜನರನ್ನು ತಮ್ಮೊಂದಿಗೆ ಕರೆತಂದಿದ್ದರು. ನಾವು ಅವರ ಮೇಲೆ ಹಲ್ಲೆ ನಡೆಸಿಲ್ಲ. ಅವರೊಂದಿಗೆ ಶಾಂತವಾಗಿ ಮಾತನಾಡಿದೆವು. ಆದರೆ, ಅವರು ತಮ್ಮದೇ ಕಾರನ್ನು ಒಡೆದುಕೊಂಡರು” ಎಂದು ಶರ್ಮಾ ಹೇಳಿದ್ದಾರೆ.
ಮತ್ತೊಬ್ಬ ಗ್ರಾಮಸ್ಥ ಅನು ಶರ್ಮಾ, 20–25 ವಿದ್ಯಾರ್ಥಿಗಳು ಅಲ್ಲಿ ಓದುತ್ತಿದ್ದ ಸಂದರ್ಭದಲ್ಲಿ ಶಾಲಾ ಕಟ್ಟಡವನ್ನು ಪರಿಶೀಲಿಸಲು ಅಥವಾ ಕೆಡವಲು CJP ತಂಡ ಮುಂದಾದುದನ್ನು ನಿವಾಸಿಗಳು ವಿರೋಧಿಸಿದರು ಎಂದು ಹೇಳಿದ್ದಾರೆ. ಘಟನೆಯನ್ನು ಅವರು ‘ಮಾತಿನ ಚಕಮಕಿ’ ಎಂದಷ್ಟೇ ಹೇಳಿದರು.
ಹೊರಗಿನವರ ಪ್ರವೇಶಕ್ಕೆ ನಿರ್ಬಂಧ
ರಾಜಸ್ಥಾನ ಶಿಕ್ಷಣ ಇಲಾಖೆಯು ಸರ್ಕಾರಿ ಶಾಲೆಗಳಿಗೆ ಹೊರಗಿನವರು ಮತ್ತು ಮಾಧ್ಯಮ ಪ್ರತಿನಿಧಿಗಳ ಪ್ರವೇಶದ ಮೇಲೆ ವಿಧಿಸಿರುವ ನಿರ್ಬಂಧಗಳ ಕುರಿತು ವ್ಯಾಪಕ ವಿವಾದ ನಡೆಯುತ್ತಿರುವ ಸಂದರ್ಭದಲ್ಲೇ ಈ ಘರ್ಷಣೆ ನಡೆದಿದೆ.
ಸರ್ಕಾರಿ ಶಾಲೆಗಳ ಸ್ಥಿತಿಗತಿಗಳನ್ನು ಪರಿಶೀಲಿಸುವುದನ್ನು ತಡೆಯುವ ಉದ್ದೇಶದಿಂದ ಈ ಆದೇಶ ಹೊರಡಿಸಲಾಗಿದೆ ಎಂದು CJP ಈ ಹಿಂದೆ ಟೀಕಿಸಿತ್ತು. ನಿರ್ಬಂಧಗಳ ನಡುವೆಯೂ ತನ್ನ ಶಾಲಾ ತಪಾಸಣಾ ಅಭಿಯಾನ ಮುಂದುವರಿಸುವುದಾಗಿ ರಂಕಾ ಹೇಳಿದ್ದರು.
ಘಟನೆಗೆ ರಾಜಕೀಯ ಪ್ರತಿಕ್ರಿಯೆಗಳೂ ವ್ಯಕ್ತವಾಗಿವೆ. ರಾಜಸ್ಥಾನದ ವಿರೋಧ ಪಕ್ಷದ ನಾಯಕ ಟಿಕಾ ರಾಮ್ ಜುಲ್ಲಿ ಹಿಂಸಾಚಾರವನ್ನು ಖಂಡಿಸಿದ್ದು, ಸರ್ಕಾರಿ ಶಾಲೆಗಳ ಕಳಪೆ ಸ್ಥಿತಿಯನ್ನು ಮರೆಮಾಚಲು ಸರಕಾರ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ ಗೋವಿಂದ್ ಸಿಂಗ್ ದೋತಾಸ್ರಾ ಕೂಡ ದಾಳಿಯನ್ನು ಖಂಡಿಸಿದ್ದಾರೆ. ಘಟನೆಯ ಹಿಂದೆ ಬಿಜೆಪಿ ಕಾರ್ಯಕರ್ತರ ಕೈವಾಡವಿದೆ ಎಂದು ಆರೋಪಿಸಿದ್ದಾರೆ.
ಆದರೆ, ಪೊಲೀಸರು ಈ ಆರೋಪಗಳನ್ನು ದೃಢಪಡಿಸಿಲ್ಲ. ವರದಿಯಾಗಿರುವ ಘರ್ಷಣೆಯ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ಬಗ್ರು ಡಿಎಸ್ಪಿ ಧರ್ಮೇಂದ್ರ ಶರ್ಮಾ ಹೇಳಿದ್ದಾರೆ ಎಂದು Times of India ವರದಿ ಮಾಡಿದೆ.






