ರಾಜಸ್ಥಾನ: ಸಚಿವ ಮೀನಾ ಗೆ ಹಂಚಿಕೆ ಮಾಡಿದ್ದ ಬಂಗಲೆ ರದ್ದುಪಡಿಸಿದ ರಾಜ್ಯ ಸರ್ಕಾರ!

PC: PTI
ಜೈಪುರ: ರಾಜಸ್ಥಾನದ ಹಿರಿಯ ಸಚಿವ ಕಿರೋಡಿ ಲಾಲ್ ಮೀನಾ ಅವರ ಮನವಿಯನ್ನು ನಾಲ್ಕು ತಿಂಗಳ ಬಳಿಕ ಪುರಸ್ಕರಿಸಿದ ರಾಜ್ಯ ಸರ್ಕಾರ ಅವರಿಗೆ ಸರ್ಕಾರಿ ಬಂಗಲೆ ಹಂಚಿಕೆ ಮಾಡಿದ್ದ ಕ್ರಮವನ್ನು ರದ್ದುಪಡಿಸಿದೆ. ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಅವರಿಗೆ 2024ರ ಜುಲೈ ನಲ್ಲಿ ರಾಜೀನಾಮೆ ಪತ್ರ ಸಲ್ಲಿಸಿದ ಬೆನ್ನಲ್ಲೇ ನವೆಂಬರ್ ನಲ್ಲಿ ಸರ್ಕಾರಿ ಬಂಗಲೆ ರದ್ದುಪಡಿಸುವಂತೆ ಮೀನಾ ಸಾಮಾನ್ಯ ಆಡಳಿತ ವಿಭಾಗಕ್ಕೆ ಮನವಿ ಸಲ್ಲಿಸಿದ್ದರು. ಆದರೆ ಇದುವರೆಗೂ ಪಕ್ಷ ಅವರ ರಾಜೀನಾಮೆಯನ್ನು ಸ್ವೀಕರಿಸಿಲ್ಲ.
ಇದೀಗ ಬಂಗಲೆ ರದ್ದತಿ ನಿರ್ಧಾರವು ಸರ್ಕಾರ ಹಾಗೂ ಮೀನಾ ನಡುವಿನ ಸಂಘರ್ಷವನ್ನು ಮತ್ತಷ್ಟು ಉಲ್ಬಣಗೊಳಿಸಿದೆ. ತಮ್ಮ ಮೇಲೆ ರಾಜ್ಯ ಸರ್ಕಾರ ನಿಗಾ ಇರಿಸಿ ತಮ್ಮ ದೂರವಾಣಿ ಕರೆಗಳನ್ನು ಕದ್ದಾಲಿಸುತ್ತಿದೆ ಎಂದು ಮೀನಾ ತಮ್ಮದೇ ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ. ಈ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ, ಮೀನಾ ಅವರಿಗೆ ನೋಟಿಸ್ ನೀಡಿದೆ. "ನಾನು ತಪ್ಪು ಮಾಡಿದ್ದೇನೆ" ಎಂದು ನೋಟಿಸ್ ಗೆ ಉತ್ತರಿಸಿದ ಸಚಿವರು ಕಳೆದ ವಾರ ಮತ್ತೆ ಅದೇ ಅರೋಪ ಮಾಡಿದ್ದರು.
ಸಾಮಾನ್ಯ ಆಡಳಿತ ವಿಭಾಗವು ಸಿವಿಲ್ ಲೇನ್ಸ್ ನ ನಂ. 14 ಬಂಗಲೆಯನ್ನು ಹಂಚಿಕೆ ಮಾಡಿತ್ತು. ಆದರೆ ಈ ಬಂಗಲೆಯಲ್ಲಿ ಮಾಜಿ ಉಪ ರಾಷ್ಟ್ರಪತಿ ಭೈರೋನ್ ಸಿಂಗ್ ಶೇಖಾವತ್ ಕುಟುಂಬವಿದೆ. ಬಳಿಕ ಮೀನಾ ಅವರಿಗೆ ಎಸ್ಎಂಎಸ್ ಆಸ್ಪತ್ರೆ ರಸ್ತೆಯ 9ನೇ ನಂಬರ್ ಬಂಗಲೆಯನ್ನು ಹಂಚಿಕೆ ಮಾಡಲಾಗಿತ್ತು.
"ಖಾತೆ ಹಂಚಿಕೆ ಮತ್ತು ಬಂಗಲೆ ಹಂಚಿಕೆ ಎರಡೂ ನಿರ್ಧಾರಗಳಿಂದ ಅವರು ಅಸಮಾಧಾನಗೊಂಡಿದ್ದಾರೆ. ಮೀನಾ ಸಿವಿಲ್ ಲೇನ್ಸ್ ನಲ್ಲಿ ಬಂಗಲೆ ಬಯಸಿದ್ದರು" ಎಂದು ಮೂಲಗಳು ಹೇಳಿವೆ. ಮೀನಾ ಈ ಬಗ್ಗೆ ಪ್ರತಿಕ್ರಿಯೆಗೆ ಲಭ್ಯರಿಲ್ಲ.
"ಸರ್ಕಾರ ನನ್ನ ವಿರುದ್ಧ ಬೇಹುಗಾರಿಕೆ ನಡೆಸುತ್ತಿದೆ" ಎಂದು ಮೀನಾ ಆರೋಪ ಮಾಡಿದ ಹಿನ್ನೆಲೆಯಲ್ಲಿ ಮೀನಾ ಅವರ ಮನವಿಯನ್ನು ಪುರಸ್ಕರಿಸಿ ಅವರಿಗೆ ಹಂಚಿಕೆ ಮಾಡಿದ್ದ ಬಂಗಲೆಯನ್ನು ರದ್ದುಪಡಿಸಲಾಗಿದೆ. ಸರ್ಕಾರ ಅವರಿಗೆ ಬೇರೆ ಬಂಗಲೆ ಹಂಚಿಕೆ ಮಾಡುವ ಯೋಚನೆಯಲ್ಲಿಲ್ಲ ಎನ್ನುವುದನ್ನು ಈ ನಿರ್ಧಾರ ಸ್ಪಷ್ಟಪಡಿಸುತ್ತದೆ ಎಂದು ಬಿಜೆಪಿ ಮುಖಂಡರೊಬ್ಬರು ಹೇಳಿದ್ದಾರೆ. ಸರ್ಕಾರ ಹಂಚಿಕೆ ಮಾಡಿದ ನಿವಾಸಕ್ಕೆ ಮೀನಾ ಪ್ರವೇಶಿಸಿಲ್ಲ ಮಾತ್ರವಲ್ಲದೇ ಸರ್ಕಾರಿ ವಾಹನವನ್ನೂ ಅವರು ಹಿಂದುರುಗಿಸಿದ್ದಾರೆ.







