ರಸ್ತೆಗಳ ದುಃಸ್ಥಿತಿಯನ್ನು ಪ್ರಶ್ನಿಸಿದ್ದಕ್ಕೆ ವಿದ್ಯುತ್, ನೀರು ಕಡಿತಗೊಳಿಸಲು ಯತ್ನಿಸಿದ್ದರು: ರಾಜಸ್ಥಾನ ಸಚಿವರ ವಿರುದ್ಧ ಗ್ರಾಮಸ್ಥರ ಆರೋಪ

ರಾಜಸ್ಥಾನ ಸಚಿವ ಜೋರಾರಾಮ ಕುಮಾವತ್ (Photo: X.com/@JoraramKumawat)
ಜೈಪುರ: ರಾಜಸ್ಥಾನದ ಸಂಪುಟ ದರ್ಜೆ ಸಚಿವ ಜೋರಾರಾಮ ಕುಮಾವತ್ ಅವರು ಕಾರ್ಯಕ್ರಮವೊಂದರಲ್ಲಿ ಕೆಲವು ಸ್ಥಳೀಯರಿಂದ ‘ಅಹಿತಕರ’ ಪ್ರಶ್ನೆಗಳನ್ನು ಎದುರಿಸಿದ ರವಿವಾರ ತಮ್ಮ ನೀರು ಮತ್ತು ವಿದ್ಯುತ್ ಸಂಪರ್ಕಗಳನ್ನು ಕಡಿತಗೊಳಿಸಲು ಅಧಿಕಾರಿಗಳನ್ನು ತಮ್ಮ ಗ್ರಾಮಕ್ಕೆ ಕಳುಹಿಸಿದ್ದರು ಎಂದು ಪಾಲಿ ಜಿಲ್ಲೆಯ ಗುರ್ಡಾಯಿ ಗ್ರಾಮಸ್ಥರು ಆರೋಪಿಸಿದ್ದಾರೆ.
ಶನಿವಾರ ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಕುಮಾವತ್ ಅವರು ಹಲವು ಅಭಿವೃದ್ಧಿ ಯೋಜನೆಗಳ ಶಿಲಾನ್ಯಾಸ ಮತ್ತು ಉದ್ಘಾಟನೆಗಾಗಿ ತನ್ನ ವಿಧಾನಸಭಾ ಕ್ಷೇತ್ರವಾದ ಸುಮೇರ್ಪುರದ ಗುರ್ಡಾಯಿ ಭೇಟಿ ನೀಡಿದ್ದರು. ಈ ವೇಳೆ ಕೆಲವು ಗ್ರಾಮಸ್ಥರು ರಸ್ತೆಗಳ ದುಃಸ್ಥಿತಿಯ ಬಗ್ಗೆ ಅವರನ್ನು ಪ್ರಶ್ನಿಸಿದ್ದರು. ರಸ್ತೆಗಳ ನಿರ್ಮಾಣ ಕಾರ್ಯ ಇನ್ನೂ ಆರಂಭಗೊಂಡಿಲ್ಲ,ರಸ್ತೆಗಳೆಲ್ಲ ಕೊಳಕಾಗಿವೆ ಎಂದು ಬೆಟ್ಟು ಮಾಡಿದ್ದರು. ಈ ವೇಳೆ ಮಧ್ಯಪ್ರವೇಶಿಸಿದ ಸಚಿವರ ಕೆಲವು ಬೆಂಬಲಿಗರು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಸಚಿವರಿಗೆ ಇತರ ಕಾರ್ಯಕ್ರಮಗಳಿವೆ ಎಂದು ಹೇಳಿದ್ದರು. ಇಷ್ಟಾದ ಬಳಿಕ ಕುಮಾವತ್ ಭಾಷಣವನ್ನು ಮಾಡದೆ ಅಲ್ಲಿಂದ ನಿರ್ಗಮಿಸಿದ್ದರು.
ಗುರ್ಡಾಯಿಯಲ್ಲಿ ಸಂಪರ್ಕಗಳನ್ನು ಕಡಿತಗೊಳಿಸಲು ಜಲ ಮತ್ತು ವಿದ್ಯುತ್ ಇಲಾಖೆಗಳ ಅಧಿಕಾರಿಗಳನ್ನು ರವಿವಾರ ಕಳಹಿಸಲಾಗಿತ್ತು ಎಂದು ಆರೋಪಿಸಲಾಗಿದೆ.
‘ನಿನ್ನೆ ನಾವು ಸಚಿವರೆದುರು ನಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದವು. ಇಂದು ಅವರು ಸಂಪರ್ಕಗಳನ್ನು ಕಡಿತಗೊಳಿಸಿ ನಮಗೆ ತೊಂದರೆಯನ್ನು ನೀಡಲು ಅಧಿಕಾರಿಗಳನ್ನು ಕಳುಹಿಸಿದ್ದಾರೆ ’ಎಂದು ವೈರಲ್ ಆಗಿರುವ ವೀಡಿಯೊದಲ್ಲಿ ಸ್ಥಳೀಯ ನಿವಾಸಿ ಹಾಗೂ ವಕೀಲ ಕಿರಣಕುಮಾರ ಮೀನಾ ಹೇಳಿದ್ದಾರೆ.
‘ಇಲ್ಲಿ ಎಸ್ಸಿ/ಎಸ್ಟಿಗಳ ಸುಮಾರು 200 ಮನೆಗಳಿವೆ. ಸ್ಥಳೀಯ ಶಾಲೆಯ ಛಾವಣಿ ಸೋರುತ್ತಿದೆ. ನಮಗೆ ಕಾಂಕ್ರೀಟ್ ರಸ್ತೆಗಳಿಲ್ಲ. ನಾವು ಸಚಿವರಿಗೆ ಅಹವಾಲು ಸಲ್ಲಿಸಲು ಬಯಸಿದ್ದೆವು,ಆದರೆ ಅವರು ಅದನ್ನು ಸ್ವೀಕರಿಸಲಿಲ್ಲ ಮತ್ತು ನಮ್ಮನ್ನು ಹೊರಗೆ ತಳ್ಳಿದ್ದರು. ಇದಕ್ಕೆ ರಾಜಕೀಯ ಬಣ್ಣ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.
ರವಿವಾರ ಬೆಳಿಗ್ಗೆ ನಾವು ಅಕ್ರಮ ನೀರು ಮತ್ತು ವಿದ್ಯುತ್ ಸಂಪರ್ಕಗಳನ್ನು ಹೊಂದಿದ್ದೇವೆ ಎಂದು ಆರೋಪಿಸಿ ಸಂಪರ್ಕಗಳನ್ನು ಕಡಿತಗೊಳಿಸಲು ಅಧಿಕಾರಿಗಳ ತಂಡ ಬಂದಿತ್ತು. ಅದು ಅಕ್ರಮವಾಗಿದ್ದರೆ ನಮಗೆ ನೋಟಿಸ್ ನೀಡಿ. ಕಳೆದ ಐದು ವರ್ಷಗಳಿಂದಲೂ ನಾವು ನೀರಿನ ಸಂಪರ್ಕ ಹೊಂದಿದ್ದೇವೆ ’ ಎಂದರು.
ಸಚಿವ ಕುಮಾವತ್ ಪ್ರತಿಕ್ರಿಯೆಗೆ ಲಭ್ಯವಾಗಿಲ್ಲ ಎಂದು ವರದಿಯಾಗಿದೆ.







