ನಾಳೆ ಭಾರತದ ಸಮಯ ಬರಬಹುದು: ರಾಜ್ ನಾಥ್

ರಕ್ಷಣಾ ಸಚಿವ ರಾಜ್ನಾಥ್ ಸಿಂಗ್ | Photo Credit : ANI
ಹೊಸದಿಲ್ಲಿ, ಎ. 22: ಪಶ್ಚಿಮ ಏಶ್ಯ ಬಿಕ್ಕಟ್ಟು ಸೇರಿದಂತೆ ಜಾಗತಿಕ ಸಂಘರ್ಷಗಳನ್ನು ಪರಿಹರಿಸುವಲ್ಲಿ ಭಾರತವು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಸಮತೋಲಿತ ರಾಜತಾಂತ್ರಿಕ ನೀತಿಯನ್ನು ಅನುಸರಿಸುತ್ತಿದೆ ಎಂದು ರಕ್ಷಣಾ ಸಚಿವ ರಾಜ್ನಾಥ್ ಸಿಂಗ್ ಬುಧವಾರ ಹೇಳಿದ್ದಾರೆ.
ಬರ್ಲಿನ್ ನ ಭಾರತೀಯ ರಾಯಭಾರ ಕಚೇರಿಯಲ್ಲಿ ನಡೆದ ಭಾರತೀಯ ಸಮುದಾಯದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಅಮೆರಿಕ-ಇರಾನ್ ಸಂಘರ್ಷವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಭಾರತವು ಪ್ರಯತ್ನಗಳನ್ನು ಮಾಡಿದೆ ಎಂದು ಹೇಳಿದರು. ಆದರೆ, ಫಲಿತಾಂಶವು ಸಮಯ ಮತ್ತು ಜಾಗತಿಕ ಸ್ಥಿತಿಗತಿಗಳನ್ನು ಅವಲಂಬಿಸಿದೆ ಎಂದರು.
‘‘ಭಾರತ ಪ್ರಯತ್ನಿಸಿದೆ. ಆದರೆ ಪ್ರತಿಯೊಂದಕ್ಕೂ ಅದರದ್ದೇ ಆದ ಸಮಯವಿದೆ. ನಾಳೆ ಆ ಸಮಯ ಬರಬಹುದು ಹಾಗೂ ಭಾರತವು ಈ ಶಾಂತಿ ಪ್ರಕ್ರಿಯೆಯಲ್ಲಿ ತನ್ನ ಪಾತ್ರ ವಹಿಸಿ ಯಶಸ್ಸು ಗಳಿಸಬಹುದು. ಈ ಸಾಧ್ಯತೆಯನ್ನು ನಾವು ಅಲ್ಲಗಳೆಯಲು ಸಾಧ್ಯವಿಲ್ಲ. ಯುದ್ಧವನ್ನು ನಿಲ್ಲಿಸುವಂತೆ ಪ್ರಧಾನಿ ಉಭಯ ಬಣಗಳಿಗೂ ಮನವಿ ಮಾಡಿದ್ದಾರೆ. ನಮ್ಮ ಪ್ರಧಾನಿ ರಾಜತಾಂತ್ರಿಕ ವಿಷಯಗಳಲ್ಲಿ ಅತ್ಯಂತ ಸಮತೋಲಿತ ದೃಷ್ಟಿಕೋನ ಹೊಂದಿದ್ದಾರೆ’’ ಎಂದು ರಕ್ಷಣಾ ಸಚಿವರು ಹೇಳಿದ್ದಾರೆ.




