ರಾಜ್ಯಸಭೆ ಚುನಾವಣೆ | ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ 22 ಸಂಸದರು ಅವಿರೋಧ ಆಯ್ಕೆ

ಮಲ್ಲಿಕಾರ್ಜುನ ಖರ್ಗೆ | Photo Credit : PTI
ಹೊಸದಿಲ್ಲಿ: ಒಂಬತ್ತು ರಾಜ್ಯಗಳ 22 ಅಭ್ಯರ್ಥಿಗಳು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಾಮಪತ್ರ ಸಲ್ಲಿಕೆ ಮತ್ತು ಹಿಂಪಡೆಯುವಿಕೆ ಪೂರ್ಣಗೊಂಡ ಬಳಿಕ ಅಭ್ಯರ್ಥಿಗಳ ಸಂಖ್ಯೆ ಖಾಲಿ ಸ್ಥಾನಗಳಿಗೆ ಸಮವಾಗಿದ್ದುದರಿಂದ ವಿವಿಧ ರಾಜ್ಯಗಳ 22 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಲಾಯಿತು.
ಆದುದರಿಂದ ಜೂನ್ 18ರಂದು ಈ ರಾಜ್ಯಗಳಲ್ಲಿ ನಡೆಯಬೇಕಿದ್ದ ಮತದಾನ ರದ್ದಾಗಿದೆ. ಆದರೆ, ಇತರ ಕೆಲವು ಸ್ಥಾನಗಳಿಗೆ ಮಾತ್ರ ಸ್ಪರ್ಧೆ ನಡೆಯಲಿದೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ಕೇಂದ್ರ ಸಚಿವರು, ಪಕ್ಷದ ಹಿರಿಯ ತಂತ್ರಗಾರರು ಮತ್ತು ಪ್ರಾದೇಶಿಕ ನಾಯಕರು ರಾಜ್ಯಸಭೆಗೆ ಮರು ಆಯ್ಕೆಯಾಗುವ ಮೂಲಕ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.
ಯಾವುದೇ ಸ್ಪರ್ಧೆಯಿಲ್ಲದೆ ಕರ್ನಾಟಕದ ನಾಲ್ಕು ರಾಜ್ಯಸಭಾ ಸ್ಥಾನಗಳನ್ನು ಭರ್ತಿ ಮಾಡಲಾಗಿದ್ದು, ಕಾಂಗ್ರೆಸ್ ಮೂರು ಹಾಗೂ ಬಿಜೆಪಿ ಒಂದು ಸ್ಥಾನವನ್ನು ಉಳಿಸಿಕೊಂಡಿದೆ.
ಕಾಂಗ್ರೆಸ್ನಿಂದ ಮಲ್ಲಿಕಾರ್ಜುನ ಖರ್ಗೆ, ಪವನ್ ಖೇರಾ ಮತ್ತು ಮನ್ಸೂರ್ ಅಲಿ ಖಾನ್ ಆಯ್ಕೆಯಾಗಿದ್ದರೆ, ಬಿಜೆಪಿಯಿಂದ ಎನ್. ರವಿ ಕುಮಾರ್ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.
ಗುಜರಾತ್ನ ಎಲ್ಲಾ ನಾಲ್ಕು ರಾಜ್ಯಸಭಾ ಸ್ಥಾನಗಳನ್ನು ಬಿಜೆಪಿ ಅವಿರೋಧವಾಗಿ ಗೆದ್ದುಕೊಂಡಿದೆ. ಆಯ್ಕೆಯಾದ ಸಂಸದರೆಂದರೆ ಪರ್ಶೋತ್ತಮ್ ರೂಪಾಲ, ಮಾಯಾಂಕ್ ನಾಯಕ್, ಕಿರೀಟ್ ಸೋಲಂಕಿ ಮತ್ತು ರಜಿನ ಪಟೇಲ್.
ಆಂಧ್ರಪ್ರದೇಶದ ಎಲ್ಲಾ ನಾಲ್ಕು ರಾಜ್ಯಸಭಾ ಸ್ಥಾನಗಳನ್ನು ಆಡಳಿತಾರೂಢ ಎನ್ಡಿಎ ಒಕ್ಕೂಟ ಅವಿರೋಧವಾಗಿ ಗೆದ್ದುಕೊಂಡಿದೆ. ಆಯ್ಕೆಯಾದ ಅಭ್ಯರ್ಥಿಗಳೆಂದರೆ ಟಿಡಿಪಿಯ ಸನಾ ಸತೀಶ್ ಬಾಬು, ಭಾಷ್ಯಂ ರಾಮಕೃಷ್ಣ, ವಿಜಯ್ ಚಿಂತಕಾಲಯ ಮತ್ತು ಜೆಎಸ್ಪಿಯ ಲಿಂಗಮನೇನಿ ರಮೇಶ್.
ಮಧ್ಯಪ್ರದೇಶದಿಂದ ರಾಜ್ಯಸಭೆಗೆ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್, ರಜನೀಶ್ ಅಗರ್ವಾಲ್, ಮಹೇಶ್ ಕೇವತ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ರಾಜಸ್ಥಾನದ ಮೂರು ಖಾಲಿ ಸ್ಥಾನಗಳಿಗೆ ಮೂರೇ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದರಿಂದ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅವರೆಂದರೆ ಬಿಜೆಪಿಯ ಸತೀಶ್ ಪೂನಿಯಾ, ಅಲ್ಲಾ ಸಿಂಗ್ ಗುರ್ಜರ್ ಹಾಗೂ ಕಾಂಗ್ರೆಸ್ನ ನೀರಜ್ ಡಾಂಗಿ.
ಅರುಣಾಚಲ ಪ್ರದೇಶದ ಏಕೈಕ ರಾಜ್ಯಸಭಾ ಸ್ಥಾನಕ್ಕೆ ಯಾವುದೇ ಪೈಪೋಟಿ ಇಲ್ಲದೆ ಬಿಜೆಪಿ ಅಭ್ಯರ್ಥಿ ತಾಯ್ ತಾಗಕ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.






