SIR | ಚುನಾವಣಾ ಆಯೋಗದ ಕಚೇರಿಗೆ ರಾಹುಲ್ ಗಾಂಧಿ ನೇತೃತ್ವದಲ್ಲಿ ಜಾಥಾ: ಪೊಲೀಸರಿಂದ ತಡೆ
ರಸ್ತೆಯಲ್ಲೇ ಕುಳಿತು ವಿಪಕ್ಷಗಳ ಸಂಸದರಿಂದ ಧರಣಿ: ಜ್ಞಾನೇಶ್ ಕುಮಾರ್ ವಿರುದ್ಧ ʼವೋಟ್ ಚೋರ್ʼ ಘೋಷಣೆ

Photo Credit : PTI
ಹೊಸದಿಲ್ಲಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ವಿರುದ್ಧ ಕಾಂಗ್ರೆಸ್ ನಾಯಕ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ವಿಪಕ್ಷಗಳ ಸಂಸದರು ಮಂಗಳವಾರ ದಿಲ್ಲಿಯಲ್ಲಿರುವ ಭಾರತೀಯ ಚುನಾವಣಾ ಆಯೋಗದ ಪ್ರಧಾನ ಕಚೇರಿಗೆ ಮೆರವಣಿಗೆ ನಡೆಸಿದರು.
ನಿಗದಿಯಂತೆ ಸಂಸತ್ ಭವನದ ಆವರಣದಿಂದ ಬೆಳಗ್ಗೆ 11 ಗಂಟೆಗೆ ಪ್ರತಿಭಟನಾ ಮೆರವಣಿಗೆ ಆರಂಭವಾಯಿತು. ಆದರೆ ಚುನಾವಣಾ ಆಯೋಗದ ಕಚೇರಿಯಿಂದ ಸುಮಾರು 300 ಮೀಟರ್ ದೂರದಲ್ಲಿರುವ ಆಕಾಶವಾಣಿ ಭವನದ ಬಳಿ ಭದ್ರತಾ ಸಿಬ್ಬಂದಿ ಮೆರವಣಿಗೆಯನ್ನು ತಡೆದರು.
ಚುನಾವಣಾ ಆಯೋಗದ ಕೇಂದ್ರ ಕಚೇರಿಗೆ ತೆರಳುತ್ತಿದ್ದ ಮೆರವಣಿಗೆಯನ್ನು ಪೊಲೀಸರು ಬ್ಯಾರಿಕೇಡ್ ಹಾಕಿ ತಡೆದ ಹಿನ್ನೆಲೆಯಲ್ಲಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಇಂಡಿಯಾ ಮೈತ್ರಿಕೂಟದ ಸಂಸದರು ರಸ್ತೆಯಲ್ಲೇ ಕುಳಿತು ಧರಣಿ ನಡೆಸುತ್ತಿದ್ದಾರೆ.
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಶಿವಸೇನೆ (ಯುಬಿಟಿ) ಸಂಸದ ಅರವಿಂದ್ ಸಾವಂತ್ ಸೇರಿದಂತೆ ಹಲವು ಸಂಸದರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ “ವೋಟ್ ಚೋರ್” (ಮತಗಳ್ಳ) ಸೇರಿದಂತೆ ಘೋಷಣೆಗಳನ್ನು ಕೂಗುತ್ತಿದ್ದಾರೆ.
ಪ್ರತಿಭಟನೆಯ ಹಿನ್ನೆಲೆ ಚುನಾವಣಾ ಆಯೋಗದ ಕಚೇರಿ ಸೇರಿದಂತೆ ಇತರ ಸೂಕ್ಷ್ಮ ಪ್ರದೇಶಗಳ ಸುತ್ತ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.






