ರಾಮ ಮಂದಿರ ದೇಣಿಗೆ ಹಗರಣ : ಕುಂಭಮೇಳದ ಸಂದರ್ಭದಲ್ಲಿ ದೊಡ್ಡ ಮೊತ್ತವನ್ನು ಕಳವು ಮಾಡಲಾಗಿತ್ತು: ತನಿಖೆಯಲ್ಲಿ ಬಹಿರಂಗ

ರಾಮಮಂದಿರ | Photo Credit : PTI
ಅಯೋಧ್ಯೆ,ಜು.1: ಅಯೋಧ್ಯೆಯ ರಾಮಮಂದಿರದ ದೇಣಿಗೆ ಕಳ್ಳತನ ಆರೋಪದ ತನಿಖೆಯು ಮಹತ್ವದ ತಿರುವು ಪಡೆದುಕೊಂಡಿದ್ದು, 2025ರ ಆರಂಭದಲ್ಲಿ ನಡೆದ ಕುಂಭಮೇಳದ ಸಂದರ್ಭದಲ್ಲೇ ಅತ್ಯಂತ ದೊಡ್ಡ ಮೊತ್ತದ ನಗದನ್ನು ಕಳವು ಮಾಡಲಾಗಿತ್ತು ಎನ್ನುವುದು ಬೆಳಕಿಗೆ ಬಂದಿದೆ.
ಅಯೋಧ್ಯೆ ಪೊಲೀಸರ ಪ್ರಕಾರ, ಬಂಧಿತ ಎಂಟು ಆರೋಪಿಗಳ ಪೈಕಿ ಕೆಲವರು ಕುಂಭಮೇಳಕ್ಕೆ ಮೊದಲೂ ಸಣ್ಣಪುಟ್ಟ ಕಳ್ಳತನಗಳಲ್ಲಿ ತೊಡಗಿದ್ದರು. ಆದರೆ ಕುಂಭಮೇಳದ ಸಂದರ್ಭದಲ್ಲಿ ಕಾಣಿಕೆ ಮತ್ತು ದೇಣಿಗೆಗಳ ರೂಪದಲ್ಲಿ ಭಾರೀ ಪ್ರಮಾಣದ ಹಣವು ಹರಿದುಬಂದಿದ್ದು, ಇದು ಅವರಿಗೆ ಇನ್ನು ದೊಡ್ಡ ಮಟ್ಟದ ಕಳ್ಳತನ ಮಾಡಲು ಅವಕಾಶ ಮಾಡಿಕೊಟ್ಟಿತ್ತು.
ಮಂದಿರಕ್ಕೆ ಬಂದಿದ್ದ ಭಾರೀ ನಗದು ದೇಣಿಗೆಯ ಲಾಭವನ್ನು ಪಡೆದುಕೊಂಡು ಆರೋಪಿಗಳು ಒಟ್ಟಾಗಿ ಸಂಚು ರೂಪಿಸಿ ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡವು (ಸಿಟ್) ಈವರೆಗೆ ಎಂಟು ಜನರನ್ನು ಬಂಧಿಸಿದೆ.
ಗರಿಷ್ಠ ಮೊತ್ತ ಕದ್ದಿದ್ದ ಭಾವ-ಮೈದುನರು
ಬಂಧಿತರ ಪೈಕಿ ಭಾವ-ಮೈದುನರಾದ ಲವಕುಶ ಮಿಶ್ರಾ ಮತ್ತು ಅನುಕಲ್ಪ್ ಮಿಶ್ರಾ ಕದ್ದ ಹಣದಲ್ಲಿ ಅತ್ಯಂತ ಹೆಚ್ಚಿನ ಪಾಲನ್ನು ಪಡೆದುಕೊಂಡಿದ್ದಾರೆ ಎಂದು ತನಿಖಾಧಿಕಾರಿಗಳು ಪತ್ತೆಹಚ್ಚಿದ್ದಾರೆ. ಪೊಲೀಸರ ಪ್ರಕಾರ, ಇವರಿಬ್ಬರು ಕದ್ದ ನಗದು ಹಣವನ್ನು ಬಳಸಿ ಆಸ್ತಿಗಳನ್ನೂ ಖರೀದಿಸಿದ್ದಾರೆ. ಇವರಿಗೆ ಸಂಬಂಧಿಸಿದ ಅರ್ಧ ಡಜನ್ಗಿಂತಲೂ ಹೆಚ್ಚು ಆಸ್ತಿಗಳನ್ನು ಇದುವರೆಗೆ ಪತ್ತೆಹಚ್ಚಲಾಗಿದೆ.
ಆರೋಪಿಗಳ ಹಣಕಾಸು ವಹಿವಾಟು ಮತ್ತು ಆಸ್ತಿಪಾಸ್ತಿಗಳನ್ನು ಪರಿಶೀಲಿಸಲು ಪೊಲೀಸರು ಈಗ ಆದಾಯ ತೆರಿಗೆ ಇಲಾಖೆಯ ಸಹಾಯವನ್ನು ಪಡೆಯುತ್ತಿದ್ದಾರೆ.
ತನಿಖೆಯ ವೇಳೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕೆಲವು ಉದ್ಯೋಗಿಗಳ ಬಗ್ಗೆಯೂ ಶಂಕೆ ವ್ಯಕ್ತವಾಗಿದೆ. ಹಣದ ಹರಿವು ಮತ್ತು ಆರ್ಥಿಕ ವಹಿವಾಟುಗಳ ಬಗ್ಗೆ ವಿವರವಾದ ತನಿಖೆ ನಡೆಸುವಂತೆ ಕೋರಿ ಪೊಲೀಸರು ಜಾರಿ ನಿರ್ದೇಶನಾಲಯಕ್ಕೆ (ಈ.ಡಿ.) ಪತ್ರ ಬರೆಯಲಿದ್ದಾರೆ.
ಕಂಬಳಿಗಳ ಒಳಗೆ ಬಚ್ಚಿಟ್ಟಿದ್ದ ನಗದು
ಆರೋಪಿ ಅವಿನಾಶ್ ಶುಕ್ಲಾನ ಕೌಶಲಪುರಿಯ ಅಡಗುದಾಣದಿಂದ ಅತ್ಯಂತ ಹೆಚ್ಚಿನ ಪ್ರಮಾಣದ ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವರದಿಗಳ ಪ್ರಕಾರ, ಈ ಆವರಣವು ಶುಕ್ಲಾನ ಸಹೋದರ ಅಭಿಷೇಕ್ಗೆ ಸಂಬಂಧಿಸಿದ ಯೋಗ ಕೇಂದ್ರವಾಗಿದೆ. ಅಭಿಷೇಕ್ಗೆ ಸೇರಿದ ನಾಲ್ಕು ಪೆಟ್ಟಿಗೆಗಳನ್ನು ಯೋಗ ಕೇಂದ್ರದಲ್ಲಿ ಇಡಲಾಗಿತ್ತು. ಪೆಟ್ಟಿಗೆಗಳಲ್ಲಿದ್ದ ಕಂಬಳಿಗಳ ಒಳಗೆ ನಗದನ್ನು ಬಚ್ಚಿಡಲಾಗಿತ್ತು. ಒಂದು ಪೆಟ್ಟಿಗೆಯ ಮೇಲೆ ರಾಮ ರಾಜ್ಯ ಕೋಶ ಎಂದು ಬರೆಯಲಾಗಿತ್ತು.
ಮೂಲಗಳ ಪ್ರಕಾರ,ದೇಣಿಗೆ ಎಣಿಕೆ ಕೊಠಡಿಯ ಒಂದು ಚಾವಿ ಟ್ರಸ್ಟ್ನ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರ ಚಾಲಕನಾಗಿ ಕೆಲಸ ಮಾಡುತ್ತಿದ್ದ ಟಿನ್ನು ಯಾದವ್ ಬಳಿ ಇರುತ್ತಿತ್ತು, ಮತ್ತೊಂದು ಚಾವಿ ಬ್ಯಾಂಕ್ ಸಿಬ್ಬಂದಿ ಬಳಿ ಇರುತ್ತಿತ್ತು ಎನ್ನುವುದು ತನಿಖೆಯಿಂದ ತಿಳಿದುಬಂದಿದೆ. ಬ್ಯಾಂಕ್ ನೌಕರರೊಂದಿಗೆ ಶಾಮೀಲಾಗಿ, ಕದ್ದ ಹಣವನ್ನು ಪರಸ್ಪರ ಹಂಚಿಕೊಳ್ಳಲಾಗುತ್ತಿತ್ತು ಎಂದು ಆರೋಪಿಸಲಾಗಿದೆ.






