ಜಾಗತಿಕ ಬ್ಯಾಂಕಿನ ಮುಖ್ಯಸ್ಥರಾಗಿದ್ದ ಮೊಟ್ಟ ಮೊದಲ ಭಾರತೀಯ ರಾಣಾ ತಲ್ವಾರ್ ಇನ್ನಿಲ್ಲ

ಮುಂಬೈ: ಜಾಗತಿಕ ಬ್ಯಾಂಕಿನ ಮುಖ್ಯಸ್ಥರಾಗಿ ಅಧಿಕಾರ ಹೊಂದಿದ್ದ ಮೊಟ್ಟಮೊದಲ ಭಾರತೀಯ ಮತ್ತು ಏಷ್ಯನ್ ಎನಿಸಿಕೊಂಡಿದ್ದ ರಾಣಾ ತಲ್ವಾರ್ (76) ಶನಿವಾರ ನಿಧನರಾದರು.
ದೆಹಲಿಯ ಸ್ಟೀಫನ್ಸ್ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದ ತಲ್ವಾರ್, ಭಾರತದಲ್ಲಿ 1969ರಲ್ಲಿ ಸಿಟಿಬ್ಯಾಂಕ್ ಮೂಲಕ ವೃತ್ತಿಜೀವನ ಆರಂಭಿಸಿದರು. 1990ರ ದಶಕದಲ್ಲೇ ಸಿಟಿ ಸಮೂಹದ ಗ್ರಾಹಕ ಬ್ಯಾಂಕಿಂಗ್ ಗೆ ಹೊಸ ರೂಪು ನೀಡಿ ಅಗ್ರಗಣ್ಯ ಫ್ರಾಂಚೈಸಿ ಆಗಿ ರೂಪಿಸುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು.
ಕ್ಷಿಪ್ರವಾಗಿ ಉನ್ನತ ಅಧಿಕಾರಿಯಾಗಿ ಬಡ್ತಿ ಪಡೆದ ಅವರು, ಬ್ಯಾಂಕಿನ ಏಷ್ಯಾ ಫೆಸಿಫಿಕ್, ಮಧ್ಯಪ್ರಾಚ್ಯ, ಯೂರೋಪ್ ಮತ್ತು ಉತ್ತರ ಅಮೆರಿಕದ ರೀಟೇಲ್ ವ್ಯವಹಾರದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು. 1997ರಲ್ಲಿ ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕಿಗೆ ಸೇರ್ಪಡೆಯಾದ ಅವರು ಕೆಲವೇ ತಿಂಗಳಲ್ಲಿ ಸಿಇಓ ಹುದ್ದೆಗೇರಿದ್ದರು.
ಏಷ್ಯನ್ ಕರೆನ್ಸಿ ಬಿಕ್ಕಟ್ಟಿನ ಬಳಿಕ ಬ್ಯಾಂಕಿಂಗ್ ಗೆ ಪ್ರಮುಖ ರೂಪಾಂತರವನ್ನು ತಂದರು. ಯುಬಿಎಸ್ ಟ್ರೇಡ್ ಫೈನಾನ್ಸ್ ವ್ಯವಹಾರ, ಎಎನ್ ಝೆಡ್ ಗ್ರಿಂಡ್ ಲೇಸ್ ಬ್ಯಾಂಕ್ ಮತ್ತು ಛೇಸ್ ಮ್ಯಾನ್ಹಾಟನ್ ಕ್ರೆಡಿಟ್ ಕಾರ್ಡ್ ಬ್ಯುಸಿನೆಸ್ ಸೇರಿಂದತೆ ಹಲವು ಬ್ಯಾಂಕ್ ಗಳನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಏಷ್ಯಾದ ಆರ್ಥಿಕ ಪುನಶ್ಚೇತನದ ಮೇಲೆ ನಂಬಿಕೆ ಹೊಂದಿದ್ದ ಅವರು, 1997ರಲ್ಲಿ ಏಷ್ಯಾದ ಕರೆನ್ಸಿ ಬಿಕ್ಕಟ್ಟಿನ ಸವಾಲುಗಳನ್ನು ಎದುರಿಸಿ, ಬ್ಯಾಂಕಿನ ಸ್ಥಾನವನ್ನು ಭದ್ರಪಡಿಸಿದ್ದರು. ಬ್ಯಾಂಕಿನಲ್ಲಿ ಅಧಿಕಾರಾವಧಿ ಮುಗಿದ ಬಳಿಕ ಖಾಸಗಿ ಈಕ್ವಿಟಿ ಫಂಡ್ ಆರಂಭಿಸಿದ್ದರು. ಇವರ ಸಂಸ್ಥೆ ಸೆಂಚೂರಿಯನ್ ಬ್ಯಾಂಕಿನ ಪಾಲನ್ನು ಖರೀದಿಸುವ ಮೂಲಕ ದೊಡ್ಡ ಹೆಸರು ಮಾಡಿತ್ತು. ಇದನ್ನು ಎಚ್ ಡಿಎಫ್ ಸಿ ಬ್ಯಾಂಕ್ ಜತೆ ವಿಲೀನಗೊಳಿಸುವಲ್ಲೂ ಪ್ರಮುಖ ಪಾತ್ರ ವಹಿಸಿದ್ದರು.
ಕೆಲ ಕಾಲದಿಂದ ಅಸ್ವಸ್ಥರಾಗಿದ್ದ ಅವರು ಪತ್ನಿ ರೇಣುಕಾ ಮತ್ತು ಮಗ ರಾಹುಲ್ ಅವರನ್ನು ಅಗಲಿದ್ದಾರೆ. ಮೃತರ ಅಂತ್ಯಸಂಸ್ಕಾರ ಲೋಧಿ ಸ್ಮಶಾನದಲ್ಲಿ ಭಾನುವಾರ ನಡೆಯಲಿದೆ ಎಂದು ಕಂಪನಿಯ ಮೂಲಗಳು ಹೇಳಿವೆ.







