ಬೆಂಗಳೂರಿನಲ್ಲಿ 2026ರ IPL ಪಂದ್ಯಗಳ ಆತಿಥ್ಯಕ್ಕೆ RCBಗೆ ರಾಜ್ಯ ಸರ್ಕಾರದ ಅನುಮತಿ

Photo Credit : PTI
ಬೆಂಗಳೂರು, ಮಾ.16: ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ (KSCA) ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಸೋಮವಾರ ಕರ್ನಾಟಕ ಸರ್ಕಾರದಿಂದ ಅಧಿಕೃತ ಅನುಮತಿ ಪಡೆದ ಹಿನ್ನೆಲೆ, 2026ರ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಪಂದ್ಯಗಳು ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುವುದು ದೃಢಪಟ್ಟಿದೆ.
ಈ ವರ್ಷಾರಂಭದಲ್ಲಿ RCB ತಂಡವು ಮೊದಲ ಬಾರಿಗೆ IPL ಪ್ರಶಸ್ತಿ ಗೆದ್ದ ನಂತರ ನಡೆದ ಸಂಭ್ರಮಾಚರಣೆಯ ವೇಳೆ ಕಾಲ್ತುಳಿತದ ದುರಂತ ನಡೆದ ಹಿನ್ನೆಲೆ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ IPL ಪಂದ್ಯಗಳು ನಡೆಯುವ ಕುರಿತಂತೆ ಆವರಿಸಿದ್ದ ಅನಿಶ್ಚಿತತೆಗಳು ರಾಜ್ಯ ಸರ್ಕಾರದ ಈ ನಿರ್ಧಾರದಿಂದ ದೂರವಾಗಿವೆ.
►ತಜ್ಞರ ಸಮಿತಿಯ ಪರಿಶೀಲನೆಯ ನಂತರ ಸರ್ಕಾರದ ಅನುಮತಿ
ರಾಜ್ಯ ಸರ್ಕಾರ ನೇಮಿಸಿದ್ದ ತಜ್ಞರ ಸಮಿತಿಯೊಂದಿಗೆ ಕರ್ನಾಟಕದ ಗೃಹ ಸಚಿವ ಜಿ. ಪರಮೇಶ್ವರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ನಂತರ ಈ ಅನುಮತಿ ದೊರೆತಿದೆ. KSCA, RCB ಹಾಗೂ ಈವೆಂಟ್ ಮ್ಯಾನೇಜ್ಮೆಂಟ್ ಕಂಪೆನಿ ಡಿಎನ್ಎ ಪ್ರತಿನಿಧಿಗಳು ಕೂಡ ಸಭೆಯಲ್ಲಿ ಹಾಜರಿದ್ದರು.
ಮುಂಬರುವ IPL ಋತುವಿಗೆ ಮೊದಲು ಸ್ಟೇಡಿಯಂನಲ್ಲಿ ನಡೆಸಲಾಗಿರುವ ಸಿದ್ಧತೆಗಳು ಹಾಗೂ ಅನುಷ್ಠಾನಗೊಂಡಿರುವ ಸುರಕ್ಷತಾ ವ್ಯವಸ್ಥೆಗಳ ಕುರಿತ ವಿವರವಾದ ವರದಿಯನ್ನು ಚರ್ಚೆಯ ವೇಳೆ ತಜ್ಞರ ಸಮಿತಿಯು ಸಲ್ಲಿಸಿದೆ.
KSCA ವಕ್ತಾರ ವಿನಯ್ ಮೃತ್ಯುಂಜಯ ಅವರ ಪ್ರಕಾರ, ಸಮಿತಿಯ ಶಿಫಾರಸುಗಳು ಹಾಗೂ ವ್ಯವಸ್ಥೆಗಳ ಬಗ್ಗೆ ಸರ್ಕಾರದ ಪರಿಶೀಲನೆಯ ನಂತರ ಅಧಿಕೃತವಾಗಿ ಅನುಮತಿ ನೀಡಲಾಗಿದೆ.
►ಪಂದ್ಯಾವಳಿಯ ಉದ್ಘಾಟನಾ ಪಂದ್ಯಕ್ಕೆ ಚಿನ್ನಸ್ವಾಮಿ ಆತಿಥ್ಯ
ಉದ್ಯಾನನಗರಿಯಲ್ಲಿ ಮಾರ್ಚ್ 28ರಂದು ಹಾಲಿ ಚಾಂಪಿಯನ್ RCB ತಂಡ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಮೊದಲ ಪಂದ್ಯದಲ್ಲಿ ಎದುರಿಸುವ ಮೂಲಕ 19ನೇ ಆವೃತ್ತಿಯ ಐಪಿಎಲ್ಗೆ ಚಾಲನೆ ಸಿಗಲಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಉದ್ಘಾಟನಾ ಪಂದ್ಯವಲ್ಲದೆ, ಉದ್ಘಾಟನಾ ಸಮಾರಂಭ ಹಾಗೂ ಜನಪ್ರಿಯ RCB ಅನ್ಬಾಕ್ಸಿಂಗ್ ಕಾರ್ಯಕ್ರಮವೂ ನಡೆಯಲಿದೆ. ಇದು RCB ಫ್ರಾಂಚೈಸಿಯ ಹೊಸ ಋತುವಿನ ಆರಂಭವನ್ನು ಸೂಚಿಸುತ್ತದೆ.
►RCBಯ ತವರು ಪಂದ್ಯಗಳ ವೇಳಾಪಟ್ಟಿ
2026ರ ಆವೃತ್ತಿಯ IPL ಟೂರ್ನಿಯಲ್ಲಿ RCB ತನ್ನ ಏಳು ತವರು ಪಂದ್ಯಗಳ ಪೈಕಿ ಐದನ್ನು ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಲಿದೆ. ಫ್ರಾಂಚೈಸಿಯು ತನ್ನ ಉಳಿದ ಎರಡು ಪಂದ್ಯಗಳನ್ನು ರಾಯ್ಪುರದ ವೀರ ನಾರಾಯಣ ಸಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಡಲು ಯೋಜಿಸಿದೆ. ಈ ವ್ಯವಸ್ಥೆಯು ಬೆಂಗಳೂರು RCBಯ ಪ್ರಮುಖ ತವರು ನೆಲೆಯನ್ನಾಗಿಸಿದೆ.
►ಸರ್ಕಾರ ಹಾಗೂ ಸಮಿತಿಗೆ ಧನ್ಯವಾದಗಳು ಎಂದ KSCA
ಅನುಮತಿಯ ಪ್ರಕ್ರಿಯೆಗಳನ್ನು ನೆರವೇರಿಸಿದ ರಾಜ್ಯ ಸರ್ಕಾರ ಹಾಗೂ ತಜ್ಞರ ಸಮಿತಿಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ ಧನ್ಯವಾದಗಳನ್ನು ತಿಳಿಸಿದೆ.
‘ಎಲ್ಲ ಪೂರ್ವಭಾವಿ ಸಮನ್ವಯ ಹಾಗೂ ಸುರಕ್ಷತೆ, ಭದ್ರತೆಯ ಅಂಶಗಳನ್ನು ಸಮಗ್ರವಾಗಿ ಮೌಲ್ಯಮಾಪನ ಮಾಡಲಾಗಿದೆ ಎಂದು ಖಚಿತಪಡಿಸಿಕೊಂಡಿರುವ ತಜ್ಞ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಬೆಂಗಳೂರಿನ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ಅವರಿಗೆ ನಮ್ಮ ವಿಶೇಷ ಧನ್ಯವಾದಗಳು’ ಎಂದು KSCA ಪ್ರಕಟಣೆ ತಿಳಿಸಿದೆ.
‘ಈ ಪ್ರಮುಖ ನಿರ್ಧಾರವನ್ನು ಸಕ್ರಿಯಗೊಳಿಸುವಲ್ಲಿ ಎಚ್ಚರಿಕೆಯಿಂದ ಮೌಲ್ಯಮಾಪನ ಮಾಡಿ, ರಚನಾತ್ಮಕ ಶಿಫಾರಸುಗಳನ್ನು ಮಾಡಲು ಪ್ರಮುಖ ಪಾತ್ರವಹಿಸಿರುವ ತಜ್ಞ ಸಮಿತಿಯ ಎಲ್ಲ ಗೌರವಾನ್ವಿತ ಸದಸ್ಯರು ಹಾಗೂ ಉಪಸಮಿತಿಗಳೊಂದಿಗೆ ಸಂಬಂಧಿಸಿದ ಅಧಿಕಾರಿಗಳಿಗೆ KSCA ತನ್ನ ಪ್ರಾಮಾಣಿಕ ಕೃತಜ್ಞತೆಗಳನ್ನು ಸಲ್ಲಿಸುತ್ತದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.







