ಸಂಸತ್ತಿನ ಚಳಿಗಾಲದ ಅಧಿವೇಶನ | ವಿಪಕ್ಷಗಳು ಸೋಲಿನ ನಿರಾಶೆ ಬಿಟ್ಟು ಜನರ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕು: ಪ್ರಧಾನಿ ಮೋದಿ

Photo credit: indiatoday.in
ಹೊಸದಿಲ್ಲಿ : ವಿರೋಧ ಪಕ್ಷಗಳು ಸೋಲಿನ ನಿರಾಶೆಯನ್ನು ಬಿಟ್ಟು ಜನರ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಸಂಸತ್ತಿನ ಚಳಿಗಾಲದ ಅಧಿವೇಶನದ ಮುನ್ನಾ ಸಂಸತ್ತಿನಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕೆಲವು ಪಕ್ಷಗಳಿಗೆ ಇನ್ನೂ ತಮ್ಮ ಚುನಾವಣಾ ಸೋಲುಗಳನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ, ವಿಪಕ್ಷಗಳು ಸೋಲಿನ ನಿರಾಶೆಯನ್ನು ಬಿಟ್ಟು ಜನರ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕು. ಸಂಸತ್ತು ಏನು ಮಾಡಬೇಕೆಂದಿದೆ, ಏನನ್ನು ಸಾಧಿಸಲಿದೆ ಇದರ ಮೇಲೆ ಅಧಿವೇಶನ ಕೇಂದ್ರೀಕೃತವಾಗಿರಬೇಕು. ಎಲ್ಲಾ ಪಕ್ಷಗಳೂ ಒಳ್ಳೆಯ ರೀತಿಯಲ್ಲಿ ಸಹಕಾರ ನೀಡಬೇಕು ಎಂದು ಹೇಳಿದರು.
ಸೋಲಿನ ಅಸಹನೆ ಸಂಸತ್ತಿನ ಕಲಾಪಕ್ಕೆ ಅಡ್ಡಿಯಾಗಬಾರದು. ಒಳ್ಳೆಯ ಚರ್ಚೆಯಿಂದ ದೇಶಕ್ಕೆ ಬೇಕಾದ ನಿರ್ಧಾರಗಳು ತೆಗೆದುಕೊಳ್ಳೋಣ. ಮೊದಲ ಬಾರಿಗೆ ಸಂಸತ್ತಿಗೆ ಆಯ್ಕೆಯಾದವರು ಮತ್ತು ಯುವ ಸಂಸದರಿಗೆ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಲು ಅವಕಾಶ ನೀಡಬೇಕು ಎಂದು ಪ್ರಧಾನಿ ಮೋದಿ ಹೇಳಿದರು.
"ಸಂಸತ್ತು ಭರವಸೆಗಳನ್ನು ಈಡೇರಿಸುವ ವೇದಿಕೆಯೇ ಹೊರತು, ನಾಟಕದ ವೇದಿಕೆಯಲ್ಲ. ನಾಟಕ ಮಾಡಲು ಹೊರಗೆ ಸಾಕಷ್ಟು ವೇದಿಕೆಗಳಿವೆ. ಇದು ಘೋಷಣೆಗಳ ಸ್ಥಳವಲ್ಲ. ನಾವು ನೀತಿಗಳತ್ತ ಗಮನ ಕೇಂದ್ರೀಕರಿಸಬೇಕಿದೆ" ಎಂದು ಅವರು ವಿರೋಧ ಪಕ್ಷಗಳಿಗೆ ಕಿವಿ ಮಾತು ಹೇಳಿದರು.







