ಸ್ಪೀಕರ್ ಓಂ ಬಿರ್ಲಾರನ್ನು ಭೇಟಿ ಮಾಡಿದ TMC ಬಂಡಾಯ ಸಂಸದರು; ನ್ಯಾಷನಲಿಸ್ಟ್ ಸಿಟಿಝನ್ಸ್ ಪಾರ್ಟಿಯೊಂದಿಗೆ ವಿಲೀನ ಘೋಷಣೆ

Photo Credit : thehindu.com
ಹೊಸದಿಲ್ಲಿ, ಜೂ.14: ತೃಣಮೂಲ ಕಾಂಗ್ರೆಸ್ (TMC) ಪಕ್ಷದ ಬಂಡಾಯ ಸಂಸದರು ನ್ಯಾಷನಲಿಸ್ಟ್ ಸಿಟಿಝನ್ಸ್ ಪಾರ್ಟಿ (Nationalist Citizens Party–NCP) ಜೊತೆ ವಿಲೀನಗೊಳ್ಳಲಿದ್ದಾರೆ ಎಂದು TMC ಸಂಸದೆ ಕಾಕೋಲಿ ಘೋಷ್ ದಸ್ತಿದಾರ್ ರವಿವಾರ ಹೇಳಿದ್ದಾರೆ.
ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘‘20 ಸಂಸದರು ಸ್ಪೀಕರ್ ಅವರನ್ನು ಭೇಟಿ ಮಾಡಿ ನಮಗಾಗಿ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸುವಂತೆ ಕೋರಿದ್ದೇವೆ. ನಮ್ಮೊಂದಿಗೆ ಮೂರನೇ ಎರಡರಷ್ಟು ಸಂಸದರು ಇದ್ದಾರೆ. ನಾವು ನ್ಯಾಷನಲಿಸ್ಟ್ ಸಿಟಿಝನ್ಸ್ ಪಾರ್ಟಿಯೊಂದಿಗೆ ವಿಲೀನಗೊಳ್ಳಲಿದ್ದೇವೆ. ದೇಶದ ಹಿತಾಸಕ್ತಿಗಾಗಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ NDAದೊಂದಿಗೆ ಕಾರ್ಯನಿರ್ವಹಿಸುತ್ತೇವೆ’’ ಎಂದು ಹೇಳಿದರು.
ಇದಕ್ಕೂ ಮುನ್ನ, ಲೋಕಸಭೆಯಲ್ಲಿ TMC ಸಂಸದೀಯ ಪಕ್ಷದ ನಾಯಕ ಅಭಿಷೇಕ್ ಬ್ಯಾನರ್ಜಿ ಅವರು ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದು, ಪಕ್ಷದ ಪ್ರತ್ಯೇಕ ಬಣ ಎಂದು ಹೇಳಿಕೊಳ್ಳುವ ಯಾವುದೇ ಗುಂಪಿಗೆ ಮಾನ್ಯತೆ, ಸ್ಥಾನಮಾನ ಅಥವಾ ಸೌಲಭ್ಯ ನೀಡದಂತೆ ಮನವಿ ಮಾಡಿದ್ದಾರೆ.
ಟಿಎಂಸಿಯ ಲೋಕಸಭಾ ಘಟಕದೊಳಗಿನ ಭಿನ್ನಾಭಿಪ್ರಾಯ ಈ ವಾರದ ಆರಂಭದಲ್ಲೇ ಬಹಿರಂಗಗೊಂಡಿತ್ತು. ಬಂಡಾಯ ಸಂಸದರು ಪಕ್ಷದ ನಾಯಕಿ ಮಮತಾ ಬ್ಯಾನರ್ಜಿ ಅವರ ನಾಯಕತ್ವದಿಂದ ಸಾರ್ವಜನಿಕವಾಗಿ ದೂರ ಸರಿದಿದ್ದರು.
ಸೋಮವಾರ ಮಾತನಾಡಿದ್ದ ದಸ್ತಿದಾರ್, ಸುಮಾರು 20 TMC ಸಂಸದರ ಬೆಂಬಲ ತಮ್ಮ ಗುಂಪಿಗೆ ದೊರೆತಿದೆ ಎಂದು ಹೇಳಿದ್ದರು. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ NDA ಸರ್ಕಾರವನ್ನು ಬೆಂಬಲಿಸುವ ಉದ್ದೇಶ ಈ ಗುಂಪಿಗಿದೆ ಎಂದೂ ತಿಳಿಸಿದ್ದರು.






