ರಾಜ್ಯದ ಪ್ರಮುಖ ಕ್ಯಾನ್ಸರ್ ಆಸ್ಪತ್ರೆ HCGಯಲ್ಲಿ ಕ್ಲಿನಿಕಲ್ ಟ್ರಯಲ್ ಗೆ ಬಡ ರೋಗಿಗಳ ಬಳಕೆ: ಆಸ್ಪತ್ರೆಯ ಎಥಿಕಲ್ ಕಮಿಟಿಯ ಮುಖ್ಯಸ್ಥರಿಂದಲೇ ಗಂಭೀರ ಆರೋಪ
► ಸಿಇಒ ಸಹಿತ ಹಲವರು ವೈದ್ಯರು ದಿಢೀರ್ ರಾಜಿನಾಮೆ ►ತನಿಖೆಗೆ ಒತ್ತಾಯಿಸಿ ಭಾರತೀಯ ಔಷಧ ನಿರ್ದೇಶನಾಲಯಕ್ಕೆ ಪತ್ರ

Image Credit: hcgoncology.com
ಬೆಂಗಳೂರು: ರಾಜ್ಯದ ಪ್ರಮುಖ ಕ್ಯಾನ್ಸರ್ ಆಸ್ಪತ್ರೆಯಾದ ಹೆಲ್ತ್ಕೇರ್ ಗ್ಲೋಬಲ್ ಎಂಟರ್ಪ್ರೈಸಸ್ ಲಿಮಿಟೆಡ್ (HCG)ನ ಬೆಂಗಳೂರಿನ ಆಸ್ಪತ್ರೆಯಲ್ಲಿ ನಡೆಸಲ್ಪಟ್ಟ ಕ್ಲಿನಿಕಲ್ ಪ್ರಯೋಗಗಳಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಬಡ ರೋಗಿಗಳನ್ನು ಬಳಸಿದ್ದಾರೆನ್ನಲಾದ ಗಂಭೀರ ಆರೋಪ ಕೇಳಿ ಬಂದಿದೆ. ಇದು ರೋಗಿಗಳ ಸುರಕ್ಷತೆ ಮತ್ತು ಸಂಸ್ಥೆಯ ನೈತಿಕತೆ, ಸಮಗ್ರತೆ ಬಗ್ಗೆ ತೀವ್ರ ಪ್ರಶ್ನೆಗಳನ್ನು ಎತ್ತಿವೆ.
ಆಸ್ಪತ್ರೆಯ ಕ್ಲಿನಿಕಲ್ ಟ್ರಯಲ್ ಗಳಿಗೆ ಬಡ ರೋಗಿಗಳ ಬಳಕೆಯ ಕುರಿತು ಆಸ್ಪತ್ರೆಯ ಎಥಿಕಲ್ ಕಮಿಟಿಯ ಅಧ್ಯಕ್ಷರಾದ ನಿವೃತ್ತ ನ್ಯಾಯಮೂರ್ತಿ ಪಿ. ಕೃಷ್ಣ ಭಟ್ ಅವರು ಬಹಿರಂಗಪಡಿಸಿದ್ದು, ಸಂಸ್ಥೆಯ ಆಂತರಿಕ ಕಾರ್ಯವಿಧಾನಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ಗಂಭೀರ ಆರೋಪ ಕೇಳಿ ಬರುತ್ತಿದ್ದಂತೆ, ಕ್ಯಾನ್ಸರ್ ಆಸ್ಪತ್ರೆ HCG (ಹೆಲ್ತ್ಕೇರ್ ಗ್ಲೋಬಲ್ ಎಂಟರ್ಪ್ರೈಸಸ್ ಲಿಮಿಟೆಡ್) ವಿರುದ್ಧ ತನಿಖೆ ನಡೆಸುವಂತೆ ಒತ್ತಾಯಿಸಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರು ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್ಸಿಒ) ಅಧೀನದ ಭಾರತೀಯ ಔಷಧ ನಿರ್ದೇಶನಾಲಯಕ್ಕೆ ಪತ್ರ ಬರೆದಿದೆ.
HCG ಆಸ್ಪತ್ರೆಯಲ್ಲಿನ ಬೆಳವಣಿಗೆಗಳ ಮಾಹಿತಿ ಹೊರಬಂದಿದ್ದು, ಆಸ್ಪತ್ರೆಯ ನೈತಿಕ ಸಮಿತಿ ಮುಖ್ಯಸ್ಥರಾಗಿದ್ದ ನ್ಯಾ. ಪಿ. ಕೃಷ್ಣಭಟ್ ಅವರು ಬರೆದ ಹರಿತ ಶಬ್ದಗಳ ಪತ್ರದೊಂದಿಗೆ. ಕ್ಲಿನಿಕಲ್ ಟ್ರಯಲ್ ನಿರ್ವಹಣೆ ಹಾಗೂ ಅದರಲ್ಲಿ ಕ್ಲಿನಿಕಲ್ ಟ್ರಯಲ್ಸ್ ನಿರ್ದೇಶಕ ಡಾ. ಸತೀಶ್ ಪಾತ್ರದ ಬಗ್ಗೆ ಗಂಭೀರ ಕಳವಳಗಳನ್ನು ವ್ಯಕ್ತಪಡಿಸಿ HCG ಆಡಳಿತ ಮಂಡಳಿಗೆ ನ್ಯಾ.ಭಟ್ ಪತ್ರ ಬರೆದು ಎಚ್ಚರಿಕೆ ನೀಡಿದ್ದರು.
ನಿವೃತ್ತ ನ್ಯಾ. ಭಟ್ ಅವರ ಸ್ಫೋಟಕ ವರದಿ ಬೆನ್ನಲ್ಲೇ ಆಸ್ಪತ್ರೆಯ ಉನ್ನತ ಆಡಳಿತ ಮಂಡಳಿಯಲ್ಲಿ ಕಂಪನವಾಗಿದ್ದು, ಸಿಇಒ ರಾಜ್ ಗೋರೆ ಹಾಗೂ ವೈದ್ಯಕೀಯ ವ್ಯವಹಾರಗಳ ನಿರ್ದೇಶಕ ಡಾ. ಹರೀಶ್ ರೆಡ್ಡಿ ಇಬ್ಬರೂ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. ಈ ವಿವಾದಗಳ ಹಿನ್ನೆಲೆಯಲ್ಲಿ ಬದಲಾವಣೆ ತರಲು ಆಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿ ಎಥಿಕಲ್ ಕಮಿಟಿಯ ಮುಖ್ಯಸ್ಥ ಸ್ಥಾನವನ್ನು ನ್ಯಾ. ಭಟ್ ಕೂಡ ತ್ಯಜಿಸಿದ್ದಾರೆ.
ಇದಾದ ಬಳಿಕ ಕನಿಷ್ಠ ಆರು ವೈದ್ಯರು ಆಸ್ಪತ್ರೆಯನ್ನು ಬಿಟ್ಟು ಹೋಗಿದ್ದಾರೆ ಆಸ್ಪತ್ರೆಯ ಮೂಲಗಳು ತಿಳಿಸಿವೆ. HCGಯಲ್ಲಿ ನಡೆಯುತ್ತಿರುವ ಘಟನಾವಳಿಗಳನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತಾಲಯವು ಕೇಂದ್ರ ಸರಕಾರಕ್ಕೆ ಪತ್ರ ಬರೆದು ಕೂಡಲೇ ತನಿಖೆ ನಡೆಸುವಂತೆ ಮನವಿ ಮಾಡಿದೆ.
2023 ರಲ್ಲಿ, ಅಮೆರಿಕ ಮೂಲದ ಔಷಧೀಯ ದಿಗ್ಗಜ ಎಲಿ ಲಿಲ್ಲಿ ಸಂಸ್ಥೆ, ಕ್ಲಿನಿಕಲ್ ಟ್ರಯಲ್ ಗ ಆರ್ಥಿಕವಾಗಿ ಹಿಂದುಳಿದಿರುವ ಬಡ ರೋಗಿಗಳನ್ನು ಬಳಸುತ್ತಿರುವ ಕುರಿತು ಶಿಷ್ಟಾಚಾರ ಉಲ್ಲಂಘನೆಗಳನ್ನು ಉಲ್ಲೇಖಿಸಿ, HCG ನೊಂದಿಗಿನ ಕ್ಲಿನಿಕಲ್ ಅಧ್ಯಯನವನ್ನು ಸ್ಥಗಿತಗೊಳಿಸಿತ್ತು. ಈ ಬೆಳವಣಿಗೆ ನಂತರ, HCG ಯಲ್ಲಿ ನಡೆಸಲಾಗುತ್ತಿರುವ ಪ್ರಯೋಗಗಳ ಸ್ಥಿತಿಗತಿ, ನಿಯಮಾನುಸಾರ ಪ್ರಕ್ರಿಯೆಗಳ ಪ್ರಾಮಾಣಿಕತೆ ಹಾಗೂ ರೋಗಿಗಳ ಸುರಕ್ಷತೆ ಕುರಿತು ಕಳವಳಗಳು ಹೆಚ್ಚಾಗಿವೆ.
HCG ಯಲ್ಲಿ ಎಥಿಕಲ್ ಕಮಿಟಿಯ ಕೆಲವು ಸದಸ್ಯರು ಹಾಗೂ ಸಂಸ್ಥೆಯ ಆಡಳಿತ ಮಂಡಳಿ, ಈ ಗಂಭೀರ ಅಕ್ರಮಗಳ ಬಗ್ಗೆ ಹಲವಾರು ಬಾರಿ ಎಚ್ಚರಿಕೆ ನೀಡಿದರೂ ಸರಿಯಾದ ಕ್ರಮ ತೆಗೆದುಕೊಂಡಿಲ್ಲ ಎಂದು ನಿವೃತ್ತ ನ್ಯಾಯಮೂರ್ತಿ ಪಿ. ಕೃಷ್ಣ ಭಟ್ ಆರೋಪಿಸಿದ್ದಾರೆ.
ಅಲ್ಲದೆ, HCG ಯಲ್ಲಿ ಕ್ಲಿನಿಕಲ್ ಟ್ರಯಲ್ಸ್ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದ ಡಾ. ಸತೀಶ್ ಅವರ ವಿರುದ್ಧದ ಹಿತಾಸಕ್ತಿ ಸಂಘರ್ಷವು ಪ್ರಮುಖವಾಗಿ ಬೆಳಕಿಗೆ ಬಂದಿದೆ. ಡಾ. ಸತೀಶ್ ಅವರು ಆಸ್ಪತ್ರೆಯಲ್ಲಿ ಎರಡು ಹುದ್ದೆಗಳನ್ನು ನಿರ್ವಹಿಸುತ್ತಿದ್ದರು. ಕ್ಲಿನಿಕಲ್ ಟ್ರಯಲ್ಗಳ ಹಣಕಾಸು ಸಾಧನೆಯ ಮೇಲುಸ್ತುವಾರಿ ಜತೆಗೆ ಕ್ಲಿನಿಕಲ್ ಟ್ರಯಲ್ನ ಪ್ರಧಾನ ತನಿಖಾಧಿಕಾರಿಯಾಗಿ 15ರಿಂದ 20 ಪ್ರಕರಣ ನಿರ್ವಹಿಸಿದ್ದರು ಎನ್ನಲಾಗಿದೆ.
ಕೆಲ ಪ್ರಯೋಗಗಳಲ್ಲಿ ಪ್ರಧಾನ ತನಿಖಾಧಿಕಾರಿಯಾಗಿ ಡಾ.ಸತೀಶ್ ಕಾರ್ಯನಿರ್ವಹಿಸುತ್ತಿದ್ದರು. ಇದು ICMR (ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ) ನ ಮಾರ್ಗಸೂಚಿಗಳ ಪ್ರಕಾರ ಗಂಭೀರ ಹಿತಾಸಕ್ತಿ ಸಂಘರ್ಷದ ಸ್ಪಷ್ಟ ಉಲ್ಲಂಘನೆ ಎಂದು ಅವರು ಬೆಟ್ಟು ಮಾಡಿದ್ದಾರೆ.
ICMR ನಿಯಮಗಳ ಪ್ರಕಾರ, ಎಥಿಕಲ್ ಕಮಿಟಿಯ ಸದಸ್ಯರು ಅಥವಾ ನಿರ್ದೇಶಕರಿಗೆ ಮಾತ್ರ ಆ ಅವಕಾಶವಿದೆ. HCG ಯಲ್ಲಿ ಈ ನಿಯಮ ಉಲ್ಲಂಘನೆಯಾಗಿದೆ ಎಂದು ನ್ಯಾಯಮೂರ್ತಿ ಭಟ್ ತಮ್ಮ ಪತ್ರಗಳಲ್ಲಿ ವಿವರಿಸಿದ್ದಾರೆ ಎಂದು SouthFirst ವರದಿ ಮಾಡಿದೆ.
ಕ್ಲಿನಿಕಲ್ ಟ್ರಯಲ್ ವೇಳೆ ಸಂಭವಿಸುವ ರೋಗಿಗಳ ಸಾವನ್ನು ವರದಿ ಮಾಡುವ ವಿಚಾರದಲ್ಲಿ ಮಾರ್ಗಸೂಚಿಗಳಿಗೆ ಆಸ್ಪತ್ರೆ ಬದ್ಧವಾಗಿಲ್ಲ. ಇದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ)ಯ ಸೂಚನೆಗೆ ವಿರುದ್ಧ ಎಂದು ನ್ಯಾ. ಕೃಷ್ಣ ಭಟ್ ಎತ್ತಿ ತೋರಿಸಿದ್ದರು. ಇಂತಹ ನಿಯಮ ಉಲ್ಲಂಘನೆಗಳು ಆಸ್ಪತ್ರೆಯ ಪ್ರತಿಷ್ಠೆಗೆ ಕುಂದು ತರುತ್ತವೆ, ಔಷಧ ಕಂಪನಿಗಳು ಸಹಯೋಗದಿಂದ ಹಿಂದೆ ಸರಿಯಬಹುದು ಎಂದು ಎಚ್ಚರಿಸಿದ್ದರು.
ಕ್ಯಾನ್ಸರ್ ಚಿಕಿತ್ಸೆಗೆ ಹಣ ಹೊಂದಿಸಲು ಆಗದ ಬಡ ರೋಗಿಗಳನ್ನು ಕ್ಲಿನಿಕಲ್ ಟ್ರಯಲ್ಗೆ HCG ಆಸ್ಪತ್ರೆ ಸೆಳೆಯುತ್ತಿತ್ತು ಎಂಬ ಆಘಾತಕಾರಿ ಅಂಶ ಪ್ರಕರಣದಲ್ಲಿ ಬೆಳಕಿಗೆ ಬಂದಿದೆ. ಗುಣಮಟ್ಟದ ಕ್ಯಾನ್ಸರ್ ಚಿಕಿತ್ಸೆ ಪಡೆಯುವಷ್ಟು ಆರ್ಥಿಕವಾಗಿ ಸಬಲರಲ್ಲದ ರೋಗಿಗಳು ನಿಮಗೆ ಕಂಡುಬಂದರೆ ಕ್ಲಿನಿಕಲ್ ಟ್ರಯಲ್ಗೆ ಶಿಫಾರಸು ಮಾಡಿ ಎಂದು HCG ಆಸ್ಪತ್ರೆಯ ಕ್ಲಿನಿಕಲ್ ಟ್ರಯಲ್ಸ್ ನಿರ್ದೇಶಕ ಡಾ. ಸತೀಶ್ ಅವರು 2025ರಲ್ಲಿ ‘ಬೆಂಗಳೂರು ಆಂಕಾಲಜಿ ಗ್ರೂಪ್’ ಎಂಬ ವಾಟ್ಸಾಪ್ ಗ್ರೂಪ್ನಲ್ಲಿ ಸಂದೇಶ ಕಳುಹಿಸಿದ್ದರು ಎನ್ನಲಾಗಿದೆ.
ಇದಕ್ಕೆ ಅದೇ ಗ್ರೂಪ್ ನಲ್ಲಿದ್ದ ಕ್ಯಾನ್ಸರ್ ವೈದ್ಯರು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದರು. ಸಾಮಾಜಿಕ ಆರ್ಥಿಕ ಸ್ಥಿತಿಯನ್ನು ಆಧರಿಸಿ ಕ್ಲಿನಿಕಲ್ ಟ್ರಯಲ್ಗೆ ರೋಗಿಗಳನ್ನು ಆಯ್ಕೆ ಮಾಡುವುದು ನೈತಿಕತೆಯ ವಿರೋಧ ಎಂದು ಪದ್ಮಶ್ರೀ ಪುರಸ್ಕೃತ ಡಾ. ಕೆ.ಎಸ್. ಗೋಪಿನಾಥ್ ಅವರೇ ಆಕ್ರೋಶ ವ್ಯಕ್ತಪಡಿಸಿದ್ದರು. ವೈದ್ಯರ ತಪರಾಕಿ ಬಳಿಕ ಡಾ. ಸತೀಶ್ ಅವರು ಕ್ಷಮೆ ಕೇಳಿದ್ದರು ಎಂದು ತಿಳಿದುಬಂದಿದೆ.
ಈ ಸಂಬಂಧ ಆಸ್ಪತ್ರೆಯ ಸಿಇಒ ರಾಜ್ ಗೋರೆ ಅವರನ್ನು 8 ತಿಂಗಳ ಹಿಂದೆ ಖುದ್ದು ಭೇಟಿಯಾಗಿ ನ್ಯಾ. ಭಟ್ ವಿವರಿಸಿದ್ದರು. ಅಲ್ಲದೆ ಪದೇ ಪದೇ ಮನವಿ ಮಾಡಿದ್ದರು. ಆದರೆ ಆಸ್ಪತ್ರೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ನ್ಯಾ. ಭಟ್ ಹೇಳಿದ್ದರು. ಕ್ಲಿನಿಕಲ್ ಟ್ರಯಲ್ಸ್ನ ನಿರ್ದೇಶಕರಿಗೆ ನಿರ್ದಿಷ್ಟ ಅವಧಿ ನಿಗದಿಗೊಳಿಸುವ ಹಾಗೂ ಪಾರದರ್ಶಕ ನೇಮಕ ಪ್ರಕ್ರಿಯೆ ಆರಂಭಿಸುವ ನ್ಯಾ.ಭಟ್ ಅವರ ಪ್ರಸ್ತಾಪಗಳಿಗೆ ಆಂತರಿಕವಾಗಿ ವಿರೋಧ ವ್ಯಕ್ತವಾಗಿತ್ತು. ಕ್ಲಿನಿಕಲ್ ಟ್ರಯಲ್ಸ್ನಲ್ಲಿ ಡಾ. ಸತೀಶ್ ಅವರ ಪಾತ್ರವನ್ನು ಈ ಮೊದಲು ಒಪ್ಪಿದ್ದ ನೈತಿಕ ಸಮಿತಿಯ ಸದಸ್ಯ ಕಾರ್ಯದರ್ಶಿ ಡಾ. ರಮೇಶ್ ಅವರು, ಬಳಿಕ ದಿಢೀರನೆ ವರಸೆ ಬದಲಿಸಿದ್ದರು. ಆಸ್ಪತ್ರೆಯಲ್ಲಿ ಕ್ಲಿನಿಕಲ್ ಟ್ರಯಲ್ಸ್ ನಿರ್ದೇಶಕರೇ ಇಲ್ಲ ಎಂದು ಅವರು ವಾದಿಸಿದ್ದರಿಂದ ಇಡೀ ಪ್ರಕರಣ ವಿಚಿತ್ರ ಸ್ವರೂಪ ಪಡೆದುಕೊಂಡಿತು. ಇದು ವಿಷಯವನ್ನು ಮುಚ್ಚಿ ಹಾಕುವ ಆಸ್ಪತ್ರೆಯ ಯತ್ನ ಎಂದು ಬಿಂಬಿತವಾಯಿತು.
ಅಮೆರಿಕದ ಎಲಿ ಲಿಲ್ಲಿ ಸಂಸ್ಥೆ 2023ರಲ್ಲಿ ಡಾ. ಸತೀಶ್ ಅವರ ಮೇಲೆ ಶಿಷ್ಟಾಚಾರದ ಉಲ್ಲಂಘನೆ ಮತ್ತು GCP (Good Clinical Practices) ಪಾಲನೆಯಲ್ಲಿ ವಿಫಲವಾಗಿದೆ ಎಂದು ಉಲ್ಲಂಘಿಸಿ, ಎರಡು ಪ್ರಮುಖ ಅಧ್ಯಯನಗಳಿಂದ HCG ಯನ್ನು ಹೊರಗಿಡುವ ನಿರ್ಧಾರ ಕೈಗೊಂಡಿತು ಎನ್ನಲಾಗಿದೆ.
ಕ್ಲಿನಿಕಲ್ ಟ್ರಯಲ್ ವೇಳೆ 9 ರೋಗಿಗಳ ಸೇರ್ಪಡೆ ಮಾಡಲಾಗಿತ್ತು. ಇಬ್ಬರು ರೋಗಿಗಳು ಸಾವಿಗೀಡಾಗಿದ್ದರು. ಆದರೆ ಅವರ ಸಾವಿನ ಕಾರಣಗಳು ಬೇರೆಯಾಗಿತ್ತು. ಡೋಸ್ ಮಾರ್ಪಾಡಿನಲ್ಲಿ 15 ಬಾರಿ ಉಲ್ಲಂಘನೆ ಮಾಡಲಾಗಿತ್ತು. ಮತ್ತೆ ತರಬೇತಿ ನೀಡಿದ ಬಳಿಕವೂ ಶಿಷ್ಟಾಚಾರ ಉಲ್ಲಂಘನೆಗಳು ಮುಂದುವರಿದವು. ಎಲಿ ಲಿಲ್ಲಿ ಸಂಸ್ಥೆಯು ಈ ಉಲ್ಲಂಘನೆಗಳು ರೋಗಿಗಳ ಸುರಕ್ಷತೆಗೆ ಅಪಾಯ ಎಂದು ಘೋಷಿಸಿ, ಎಲ್ಲಾ ಸಂಬಂಧಿತ ಅಧ್ಯಯನಗಳನ್ನು ತಕ್ಷಣವೇ ಸ್ಥಗಿತಗೊಳಿಸಿತು ಎನ್ನಲಾಗಿದೆ.
ಆಸ್ಪತ್ರೆಯ ಕುರಿತು ಕೇಳಿ ಬಂದಿರುವ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿರುವ, HCGಯ ಸ್ಥಾಪಕ ಅಧ್ಯಕ್ಷ ಡಾ. ಬಿ.ಎಸ್. ಅಜಯ್ ಕುಮಾರ್ ಅವರು ಈ ಆರೋಪಗಳನ್ನು ತಿರಸ್ಕರಿಸಿದ್ದಾರೆ. "ನಮ್ಮ ಸಂಸ್ಥೆ ಎಲ್ಲಾ ನಿಯಂತ್ರಕ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದು, ರೋಗಿಗಳ ಸುರಕ್ಷತೆ ನಮಗೆ ಅತ್ಯಂತ ಮುಖ್ಯ," ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಆದರೆ, HCGಯ ಮಾಜಿ ಸಿಇಒ ರಾಜ್ ಗೋರ್, ವೈದ್ಯಕೀಯ ವ್ಯವಹಾರಗಳ ಮಾಜಿ ನಿರ್ದೇಶಕ ಡಾ. ಹರೀಶ್ ರೆಡ್ಡಿ, ಮತ್ತು ಎಲಿ ಲಿಲ್ಲಿಯ ಭಾರತೀಯ ಶಾಖೆಯ ವೈದ್ಯಕೀಯ ನಿರ್ದೇಶಕ ರೋಹಿತ್ ಅರೋರಾ ಇನ್ನೂ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ.
ಇನ್ನೊಂದು ಹಗರಣ ಬೆಳಕಿಗೆ
HCG ಆಸ್ಪತ್ರೆಯ ಕಾರ್ಯನಿರ್ವಾಹಕ ಅಧ್ಯಕ್ಷರಾಗಿರುವ ಡಾ. ಬಸವಲಿಂಗ ಎಸ್. ಅಜಯ್ ಕುಮಾರ್ ಅಮೆರಿಕದಲ್ಲಿದ್ದಾಗ ವೃತ್ತಿಪರ ಅಸಮರ್ಥತೆಯ ಆರೋಪ ಎದುರಿಸಿದ್ದರು. ಬಳಿಕ ತಮ್ಮ ವೈದ್ಯಕೀಯ ಪರವಾನಗಿಯನ್ನೇ ಮರಳಿಸಿ ಅದನ್ನು ಮುಚ್ಚಿ ಹಾಕಿದ್ದರು ಎಂದು ವರದಿಯಾಗಿದೆ. ಅಮೆರಿಕದ ಅಯೋವಾದ ಬಲಿಂಗ್ಟನ್ ನಲ್ಲಿ ಕ್ಯಾನ್ಸರ್ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿತ್ತು ಎನ್ನಲಾಗಿದೆ. ಇದರೊಂದಿಗೆ ಆ ಪ್ರಕರಣವೂ ಈಗ ಬಯಲಾಗಿದೆ.
ಸೆಬಿ ನಿಯಮಗಳ ಉಲ್ಲಂಘನೆ?
HCG ಕಂಪೆನಿ ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿರುವುದರಿಂದ, ಕಂಪೆನಿ ಯಾವುದೇ ಪ್ರಮುಖ ಮಾಹಿತಿ ಹಂಚಿಕೊಳ್ಳಬೇಕಾಗಿತ್ತು. ಆದರೆ ಸಿಇಒ, ವೈದ್ಯಕೀಯ ನಿರ್ದೇಶಕ, ಎಥಿಕಲ್ ಕಮಿಟಿ ಮುಖ್ಯಸ್ಥ ರಾಜೀನಾಮೆ ಸೇರಿದಂತೆ ಯಾವುದೇ ಮಾಹಿತಿಯನ್ನು ಷೇರುಪೇಟೆಗೆ ನೀಡಿಲ್ಲ ಎಂದು ವರದಿಗಳು ತಿಳಿಸುತ್ತಿವೆ. ಇದು ಕಾರ್ಪೊರೇಟ್ ಆಡಳಿತ ನೀತಿಯ ಉಲ್ಲಂಘನೆಯಾಗಬಹುದು ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.
ಈ ಕುರಿತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿ, "ನಾವು ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಈಗಾಗಲೇ ನಾವು ಭಾರತೀಯ ಔಷಧ ನಿಯಂತ್ರಣ ಸಂಸ್ಥೆಗೆ ತನಿಖೆ ನಡೆಸುವಂತೆ ಕೇಳಿದ್ದೇವೆ. ತಪ್ಪಿದರೆ ಖಂಡಿತ ಕ್ರಮ ತೆಗೆದುಕೊಳ್ಳುತ್ತೇವೆ" ಎಂದು ತಿಳಿಸಿದ್ದಾರೆ.







