ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಶನ್ ಚುನಾವಣೆಯಲ್ಲಿ ಸುಧಾರಣೆ ; ವಕೀಲರಿಂದ ಸಲಹೆಗಳನ್ನು ಆಹ್ವಾನಿಸಿದ ನ್ಯಾ. ಎಲ್.ನಾಗೇಶ್ವರ್ ರಾವ್ ಸಮಿತಿ

ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಶನ್ | PC : PTI
ಹೊಸದಿಲ್ಲಿ: ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಶನ್ ನ ಚುನಾವಣಾ ಸುಧಾರಣೆಗಾಗಿ ನೇಮಕಗೊಂಡಿರುವ ನ್ಯಾ ಎಲ್. ನಾಗೇಶ್ವರ್ ರಾವ್ ಸಮತಿ, ವಕೀಲರಿಂದ ತಿದ್ದುಪಡಿಯ ಸಲಹೆಗಳನ್ನು ಆಹ್ವಾನಿಸಿದೆ.
ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಶನ್ ನ ಚುನಾವಣೆಗಳನ್ನು ನಿಯಂತ್ರಿಸುವ ಬೈಲಾಗಳಿಗೆ ತರಬೇಕಾದ ತಿದ್ದುಪಡಿಗಳ ಕುರಿತು ನ್ಯಾ. ಎಲ್.ನಾಗೇಶ್ವರ್ ರಾವ್ ನೇತೃತ್ವದ ಸಮಿತಿ ಶಿಫಾರಸು ಮಾಡಲಿದ್ದು, ಇದರಿಂದ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಶನ್ ಮಹತ್ತರ ಚುನಾವಣಾ ಸುಧಾರಣೆಗಳನ್ನು ಎದುರುಗೊಳ್ಳಲು ಸಜ್ಜಾಗಿದೆ.
ಸುಧಾರಣಾ ಪ್ರಕ್ರಿಯೆಯನ್ನು ಪ್ರಜಾಸತ್ತಾತ್ಮಕಗೊಳಿಸಲು ಮುಂದಾಗಿರುವ ಸಮಿತಿ, ಮಾರ್ಚ್ 20ರೊಳಗೆ ಇಮೇಲ್ (scba.committee.2025@gmail.com) ಸಲಹೆಗಳನ್ನು ನೀಡುವಂತೆ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಶನ್ ಸದಸ್ಯರಿಗೆ ಮನವಿ ಮಾಡಿದೆ.
ಯಾರು ಮತ ಚಲಾಯಿಸಬಹುದು, ಯಾರು ಸ್ಪರ್ಧಿಸಬಹುದು, ಚುನಾಯಿತ ಸದಸ್ಯರ ಅವಧಿ, ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಶನ್ ನ ಕಾರ್ಯಕಾರಿ ಸಮಿತಿಯ ಗಾತ್ರ ಹಾಗೂ ಮತಗಳನ್ನು ಆಕರ್ಷಿಸಲು ಆಮಿಷ ಒಡ್ಡುವಂತಹ ಬಲವಾದ ಕಾರಣಗಳನ್ನು ಆಧರಿಸಿ ಅನರ್ಹಗೊಳಿಸಬಹುದಾದಂತಹ ಪ್ರಮುಖ ವಿಷಯಗಳನ್ನು ಈ ಪರಾಮರ್ಶೆ ಒಳಗೊಂಡಿದೆ.
ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಶನ್ ಸದಸ್ಯರು ತಮ್ಮ ಸಲಹೆಗಳನ್ನು ಕೇವಲ ಎರಡು ಪುಟಗಳಿಗೆ ಸೀಮಿತಗೊಳಿಸಬೇಕಾಗಿದ್ದು, ಪರಿಶೀಲನೆಗಾಗಿ ತಮ್ಮ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಶನ್ ಸದಸ್ಯತ್ವದ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆಯನ್ನು ಒದಗಿಸಬೇಕಿದೆ.
ಫೆಬ್ರವರಿ 25ರಂದು ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಶನ್ ನ ಚುನಾವಣಾ ಸುಧಾರಣೆಗಳ ಪರಾಮರ್ಶೆ ನಡೆಸಲು ನ್ಯಾ. ಸೂರ್ಯಕಾಂತ್ ಹಾಗೂ ನ್ಯಾ. ಎನ್.ಕೆ.ಸಿಂಗ್ ಅವರನ್ನೊಳಗೊಂಡ ನ್ಯಾಯಪೀಠವು ನ್ಯಾ. ಎಲ್. ನಾಗೇಶ್ವರ್ ರಾವ್ ನೇತೃತ್ವದ ಸಮಿತಿಯನ್ನು ರಚಿಸಿದ ನಂತರ, ಈ ಸುಧಾರಣಾ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.