ಟ್ರಂಪ್ ಒಡೆತನದ ರಿಯಲ್ ಎಸ್ಟೇಟ್ ಕಂಪನಿ ಜೊತೆ ರಿಲಯನ್ಸ್ ಒಪ್ಪಂದ

PC: x.com/thewire
ಹೊಸದಿಲ್ಲಿ: ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ 4ಐಆರ್ ರಿಯಾಲ್ಟಿ ಡೆವಲಪ್ಮೆಂಟ್ ಕಂಪನಿ ಮುಂಬೈನಲ್ಲಿ ಟ್ರಂಪ್ ಹೆಸರಿನ ಲೈಸನ್ಸ್ ಗಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಡೆತನದ ರಿಯಲ್ ಎಸ್ಟೇಟ್ ಕಂಪನಿಗೆ ಒಂದು ಕೋಟಿ ಡಾಲರ್ "ಅಭಿವೃದ್ಧಿ ಶುಲ್ಕ"ವನ್ನು ಪಾವತಿಸಿದೆ.
ಈ ಪಾವತಿಯ ಮೂಲಕ ಭಾರತದ ಅತ್ಯಂತ ಶ್ರೀಮಂತ ಉದ್ಯಮಿ, ಟ್ರಂಪ್ ಅವರ ರಿಯಲ್ ಎಸ್ಟೇಟ್ ಕಂಪನಿಗೆ ಹಣ ಸುರಿದ ವಿದೇಶಿ ಡೆವಲಪರ್ ಗಳ ಶ್ರೇಣಿಗೆ ಸೇರಿದಂತಾಗಿದೆ.
ಅಮೆರಿಕ ಅಧ್ಯಕ್ಷರ ವಾರ್ಷಿಕ ಹಣಕಾಸು ವಿವರಣೆಯಲ್ಲಿ, ವಿಯೆಟ್ನಾಂ ಮತ್ತ ಸೌದಿ ಅರೇಬಿಯಾ ಹಾಗೂ ಇತರ ಕಡೆಗಳಲ್ಲಿ ಟ್ರಂಪ್ ಬ್ರಾಂಡ್ ನ ಯೋಜನೆಗಳಲ್ಲಿ ಹೂಡಿಕೆದಾರರು ಒಟ್ಟು 4.46 ಕೋಟಿ ಡಾಲರ್ ಮೊತ್ತವನ್ನು ವಿದೇಶಿ ಲೈಸನ್ಸಿಂಗ್ ಮತ್ತು ಅಭಿವೃದ್ಧಿ ಶುಲ್ಕವಾಗಿ 2024ರಲ್ಲಿ ಪಾವತಿ ಮಾಡಿರುವುದನ್ನು ಬಹಿರಂಗಪಡಿಸಲಾಗಿದೆ. ಈ ಮೊತ್ತ ಟ್ರಂಪ್ ಸಂಸ್ಥೆ 2023ರಲ್ಲಿ ಸ್ವೀಕರಿಸಿದ 82 ಲಕ್ಷ ಡಾಲರ್ ಮತ್ತು 2022ರಲ್ಲಿ ಗಳಿಸಿದ 94 ಲಕ್ಷ ಡಾಲರ್ಗಿಂತ ಅಧಿಕ.
ಆದರೆ ಟ್ರಂಪ್ ಕಂಪನಿ ಮುಂಬೈನಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಿರುವ ಯಾವ ಯೋಜನೆಗೆ ರಿಲಯನ್ಸ್ ಕಂಪನಿ ಹೂಡಿಕೆ ಮಾಡಿದೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಕಳೆದ ಜನವರಿಯಲ್ಲಿ ಅಮೆರಿಕದಲ್ಲಿ ನಡೆದ ಟ್ರಂಪ್ ಉದ್ಘಾಟನಾ ಸಮಾರಂಭದಲ್ಲಿ ಅಂಬಾನಿ ಭಾಗವಹಿಸಿದ್ದರು ಮತ್ತು ದೋಹಾದಲ್ಲಿ ಕತಾರ್ ಅಮೀರ್ ಅವರು ಅಮೆರಿಕ ಅಧ್ಯಕ್ಷರಿಗಾಗಿ ಆಯೋಜಿಸಿದ್ದ ಅಧಿಕೃತ ಔತಣಕೂಟದಲ್ಲೂ ಪಾಲ್ಗೊಂಡಿದ್ದರು.
ಅಮೆರಿಕದ ಅಧ್ಯಕ್ಷ ಹುದ್ದೆಯನ್ನು ಸಂಭಾವ್ಯ ಹಿತಾಸಕ್ತಿಯ ಸಂಘರ್ಷದಿಂದ ಪ್ರತ್ಯೇಕಿಸುವಂತೆ ಈ ಹಿಂದಿನ ಆಡಳಿತ ಕೇಳಿಕೊಂಡಿದ್ದರೂ, ಟ್ರಂಪ್ ಸಂಸ್ಥೆ ವಿದೇಶಿ ವ್ಯವಹಾರಗಳನ್ನು ಹೆಚ್ಚಾಗಿ ಕುದುರಿಸಿಕೊಳ್ಳುತ್ತಿದೆ.







