CJP ಪ್ರತಿಭಟನೆಯಲ್ಲಿ ಬೇರೊಬ್ಬರ ಹೇಳಿಕೆಗೆ ವಿದ್ಯಾರ್ಥಿ ಕಾರ್ಯಕರ್ತನ ಚಿತ್ರ ಬಳಕೆ | ‘ನಾನೇ ಸ್ವತಃ ಪೋಸ್ಟ್ ತೆಗೆದುಹಾಕಿದ್ದೇನೆ’: ದೆಹಲಿ ಹೈಕೋರ್ಟ್ ಗೆ ತಿಳಿಸಿದ ಸುಧೀರ್ ಚೌಧರಿ

ಪತ್ರಕರ್ತ ಸುಧೀರ್ ಚೌಧರಿ | Photo Credit : India Today
ಹೊಸದಿಲ್ಲಿ: ಕಾಕ್ರೋಚ್ ಜನತಾ ಪಾರ್ಟಿ (CJP) ಪ್ರತಿಭಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗಿದ್ದ ಕೆಲವು ಪೋಸ್ಟ್ ಗಳನ್ನು ತಾವೇ ಸ್ವತಃ ತೆಗೆದುಹಾಕಿರುವುದಾಗಿ ಪತ್ರಕರ್ತ ಸುಧೀರ್ ಚೌಧರಿ ಪರ ವಕೀಲರು ದೆಹಲಿ ಹೈಕೋರ್ಟ್ ಗೆ ತಿಳಿಸಿದ್ದಾರೆ. ಈ ಪೋಸ್ಟ್ಗಳಲ್ಲಿ, ಬೇರೊಬ್ಬ ವ್ಯಕ್ತಿ ನೀಡಿದ್ದ ಹೇಳಿಕೆಗಳನ್ನು ಕಾರ್ಯಕರ್ತ ವಿಜಯ್ ಶೇರಾವತ್ ಅವರೇ ನೀಡಿದ್ದಾರೆ ಎಂಬಂತೆ ಬಿಂಬಿಸಲಾಗಿತ್ತು ಎಂದು ಶೇರಾವತ್ ಆರೋಪಿಸಿದ್ದಾರೆ.
ಶೇರಾವತ್ ಅವರು ಸುಧೀರ್ ಚೌಧರಿ, ಅವರ ನಿರ್ಮಾಣ ಸಂಸ್ಥೆ ಎಸ್ಪ್ರಿಟ್ ಪ್ರೊಡಕ್ಷನ್ಸ್ ಮತ್ತು DD News ವಿರುದ್ಧ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರ ಮುಂದೆ ನಡೆದ ವಿಚಾರಣೆಯಲ್ಲಿ ಚೌಧರಿ ಮತ್ತು ಎಸ್ಪ್ರಿಟ್ ಪ್ರೊಡಕ್ಷನ್ಸ್ ಪರ ಹಿರಿಯ ವಕೀಲ ದಯಾನ್ ಕೃಷ್ಣನ್ ವಾದ ಮಂಡಿಸಿದರು.
CJP ಪ್ರತಿಭಟನೆಯ ಸಂದರ್ಭದಲ್ಲಿ ಒಬ್ಬ ವ್ಯಕ್ತಿ ಸಂಸತ್ತನ್ನು ‘ನಾಶಪಡಿಸುವ’ ಹಾಗೂ ಭಾರತದಲ್ಲಿ ‘ನೇಪಾಳದಂತಹ ಪರಿಸ್ಥಿತಿ’ ಸೃಷ್ಟಿಸುವ ಕುರಿತು ಹೇಳಿಕೆ ನೀಡಿದ್ದ. ಆದರೆ ಆ ಹೇಳಿಕೆ ನೀಡಿದ ವ್ಯಕ್ತಿ ತಾವಲ್ಲ ಎಂದು ಶೇರಾವತ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಸುಧೀರ್ ಚೌಧರಿ ಅವರ ‘DECODE’ ಕಾರ್ಯಕ್ರಮದಲ್ಲಿ, ಬೇರೊಬ್ಬ ವ್ಯಕ್ತಿ ನೀಡಿದ್ದ ಹೇಳಿಕೆಗಳ ಜತೆಗೆ ತಮ್ಮ ಚಿತ್ರವನ್ನು ತೋರಿಸಲಾಗಿತ್ತು. ಇದರಿಂದ ಆ ಹೇಳಿಕೆಗಳನ್ನು ನಾನೇ ನೀಡಿರುವಂತೆ ತಪ್ಪು ಸಂದೇಶ ಹೋಗಿದೆ ಎಂದು ಶೇರಾವತ್ ಆರೋಪಿಸಿದ್ದಾರೆ. ಹೇಳಿಕೆ ನೀಡಿದ ವ್ಯಕ್ತಿ ಯಾರು ಎಂಬುದನ್ನು ಪ್ರಸಾರಕ್ಕೂ ಮುನ್ನ ಚೌಧರಿ ಮತ್ತು ಇತರರು ಪರಿಶೀಲಿಸಿರಲಿಲ್ಲ. ಅಲ್ಲದೆ, ಕಾರ್ಯಕ್ರಮ ಪ್ರಸಾರಕ್ಕೂ ಮುನ್ನ ತಮ್ಮ ಪ್ರತಿಕ್ರಿಯೆಯನ್ನೂ ಪಡೆಯಲಿಲ್ಲ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಹೇಳಿಕೆ ನೀಡಿದ ವ್ಯಕ್ತಿಯ ದೃಶ್ಯಾವಳಿಯ ಕಳಪೆ ಗುಣಮಟ್ಟದ ಪ್ರತಿಯನ್ನು ಬಳಸಲಾಗಿತ್ತು. ಹೀಗಾಗಿ ಆ ವ್ಯಕ್ತಿ ಮತ್ತು ತಮ್ಮ ನಡುವೆ ಇರುವ ವ್ಯತ್ಯಾಸವನ್ನು ಗುರುತಿಸುವುದು ಕಷ್ಟವಾಗಿತ್ತು ಎಂದೂ ಶೇರಾವತ್ ಹೇಳಿದ್ದಾರೆ. ಕಾರ್ಯಕ್ರಮ ಪ್ರಸಾರವಾದ ಬಳಿಕ ಅದರ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದವು. ಇದರಿಂದಾಗಿ ತಮಗೆ ಬೆದರಿಕೆಗಳು ಬಂದವು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
►‘ನಾನೇ ಸ್ವತಃ ತೆಗೆದುಹಾಕಿದ್ದೇನೆ’
‘ನಾನೇ ಸ್ವತಃ ಅದನ್ನು ತೆಗೆದುಹಾಕಿದ್ದೇನೆ. ಅದನ್ನು ತೆಗೆದುಹಾಕುವ ಬಗ್ಗೆ ನಾವು ಪ್ರಜ್ಞಾಪೂರ್ವಕ ನಿರ್ಧಾರ ತೆಗೆದುಕೊಂಡಿದ್ದೇವೆ’ ಎಂದು ಸುಧೀರ್ ಚೌಧರಿ ಪರ ವಕೀಲ ದಯಾನ್ ಕೃಷ್ಣನ್ ನ್ಯಾಯಾಲಯಕ್ಕೆ ತಿಳಿಸಿದರು.
ತಮ್ಮ ವೇದಿಕೆಗಳಲ್ಲಿ ಉಳಿದಿರುವ ಮೂರನೇ ವ್ಯಕ್ತಿಗಳ ಪೋಸ್ಟ್ಗಳನ್ನು ತೆಗೆದುಹಾಕುವಂತೆ ಸಾಮಾಜಿಕ ಜಾಲತಾಣ ಮಧ್ಯವರ್ತಿಗಳಿಗೂ ಪತ್ರ ಬರೆಯಲಾಗಿದೆ ಎಂದು ಅವರು ಹೇಳಿದರು. ಪೋಸ್ಟ್ಗಳಲ್ಲಿರುವ ವಿಷಯವನ್ನು ತೆಗೆದುಹಾಕುವಂತೆ ನ್ಯಾಯಾಲಯವು ಸಾಮಾಜಿಕ ಜಾಲತಾಣ ವೇದಿಕೆಗಳಿಗೆ ನಿರ್ದೇಶನ ನೀಡಿದರೂ ತಮ್ಮ ಆಕ್ಷೇಪವಿಲ್ಲ ಎಂದೂ ತಿಳಿಸಿದರು.
ಪೋಸ್ಟ್ಗಳನ್ನು ತೆಗೆದುಹಾಕಿರುವುದರಿಂದ ಪ್ರಕರಣದಲ್ಲಿ ಇನ್ನು ಯಾವುದೇ ಅಂಶ ಬಾಕಿ ಉಳಿದಿಲ್ಲ. ಹೀಗಾಗಿ ವಿಚಾರಣೆಯನ್ನು ಮುಕ್ತಾಯಗೊಳಿಸಬೇಕು ಎಂದು ಚೌಧರಿ ಪರ ವಕೀಲರು ನ್ಯಾಯಾಲಯಕ್ಕೆ ನಿವೇದಿಸಿರು.
ಆದರೆ, ಶೇರಾವತ್ ಈ ವಾದವನ್ನು ವಿರೋಧಿಸಿದರು. ತಮ್ಮ 5 ಕೋಟಿ ರೂ. ಮಾನನಷ್ಟ ಮೊಕದ್ದಮೆಯನ್ನು ಮುಂದುವರಿಸಲು ಬಯಸುವುದಾಗಿ ನ್ಯಾಯಾಲಯಕ್ಕೆ ತಿಳಿಸಿದರು. ಈ ಪ್ರಕರಣದಲ್ಲಿ ಹೈಕೋರ್ಟ್ ಈ ಹಿಂದೆ ಸುಧೀರ್ ಚೌಧರಿ, ಎಸ್ಪ್ರಿಟ್ ಪ್ರೊಡಕ್ಷನ್ಸ್ ಮತ್ತು DD Newsಗೆ ಸಮನ್ಸ್ ಜಾರಿ ಮಾಡಿತ್ತು. ಮಧ್ಯಂತರ ಪರಿಹಾರ ಕೋರಿ ಶೇರಾವತ್ ಸಲ್ಲಿಸಿದ್ದ ಅರ್ಜಿಗೆ ಪ್ರತಿಕ್ರಿಯೆ ನೀಡುವಂತೆಯೂ ಪ್ರತಿವಾದಿಗಳಿಗೆ ಸೂಚಿಸಿತ್ತು.
ಶೇರಾವತ್ ಅವರ ಮಾನನಷ್ಟ ಆರೋಪಗಳ ಸತ್ಯಾಸತ್ಯತೆ ಕುರಿತು ನ್ಯಾಯಾಲಯ ಈ ಹಂತದಲ್ಲಿ ಯಾವುದೇ ತೀರ್ಪು ನೀಡಿಲ್ಲ. ಪ್ರಕರಣ ಇನ್ನೂ ಬಾಕಿಯಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರು 2027ರ ಜನವರಿಗೆ ನಿಗದಿಪಡಿಸಿದ್ದಾರೆ.






