ಖ್ಯಾತ ಉರ್ದು ಕವಿ ಮುನವ್ವರ್ ರಾಣಾ ಇನ್ನಿಲ್ಲ
ಲಕ್ನೋ: ಖ್ಯಾತ ಉರ್ದುಕವಿ ಮುನವ್ವರ್ ರಾಣಾ ಇಲ್ಲಿನ ಸಂಜಯ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಕೊನೆಯುಸಿರೆಳೆದರು. ಆರು ದಿನಗಳಿಂದ ಅವರು ವೆಂಟಿಲೇಟರ್ ಬೆಂಬಲದಲ್ಲಿದ್ದರು ಎಂದು ಅವರ ಪುತ್ರಿ ಸೊಮಯ್ಯಾ ರಾಣಾ ಹೇಳಿದ್ದಾರೆ.
1952ರ ನವೆಂಬರ್ 26ರಂದು ಜನಿಸಿದ ಅವರು ತಮ್ಮ ಪ್ರಸಿದ್ಧ ಕೃತಿ "ಶಹದಾಬ"ವನ್ನು ಸಾಹಿತ್ಯಲೋಕದಲ್ಲಿ ತಮ್ಮ ಹೆಜ್ಜೆಗುರುತಾಗಿ ಬಿಟ್ಟುಹೋಗಿದ್ದಾರೆ. 2014ರಲ್ಲಿ ಪ್ರತಿಷ್ಠಿತ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಈ ಕೃತಿ ಪಾತ್ರವಾಗಿತ್ತು. ಆದರೆ ರಾಜಕೀಯ ಕಾರಣಗಳಿಗಾಗಿ ಅವರು ಅದನ್ನು ಮರಳಿಸಿದ್ದರು. ಸಿಎಎ ವಿರೋಧಿ ಚಳವಳಿಯ ವೇಳೆ ಅವರು ಹಾಗೂ ಪುತ್ರಿ ಪ್ರತಿಭಟನೆಯನ್ನು ಬೆಂಬಲಿಸಿದ್ದರು. ರೈತರ ಹೋರಾಟವನ್ನು ಕೂಡಾ ಬೆಂಬಲಿಸುವ ಮೂಲಕ ಅವರು ಸುದ್ದಿಯಲ್ಲಿದ್ದರು.
"ಉರ್ದು ಕಾವ್ಯರಂಗಕ್ಕೆ ಅವರ ಕೊಡುಗೆಯು ಅನುರಣಿಸುತ್ತಲೇ ಇರುತ್ತದೆ. ಸಾಹಿತ್ಯದ ಶ್ರೇಷ್ಠ ಕೃತಿಗಳ ಮೂಲಕ ಅವರ ಸುಧೀರ್ಘ ಪರಂಪರೆ ಮುಂದುವರಿದಿದೆ. ಭಾರತೀಯ ಸಾಹಿತ್ಯ ಕ್ಷೇತ್ರದಲ್ಲಿ ಅವರು ಮಿನುಗುತಾರೆಯಾಗಿದ್ದಾರೆ. ಅವರ ಪ್ರಸಿದ್ಧ ಕೃತಿ "ಶಹದಾಬ" ಅವರ ಸಾಹಿತ್ಯಕ ಪ್ರತಿಭೆಯನ್ನು ಅನಾವರಣಗೊಳಿಸಿದೆ. ಅದು ಓದುಗರ ಹೃದಯವನ್ನು ತಟ್ಟಿರುವುದು ಮಾತ್ರವಲ್ಲದೇ 2014ರಲ್ಲಿ ಪ್ರತಿಷ್ಠಿತ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನೂ ಪಡೆದಿದೆ" ಎಂದು ಕವಿ ಸಂಜಯ ಮಿಶ್ರಾ ಶವೂಕ್ ಬಣ್ಣಿಸಿದ್ದಾರೆ.
"ದುರಂತವೆಂದರೆ ಮುನವ್ವರ್ ರಾಣಾ ಅವರ ಬದುಕಿನ ಕೊನೆಯ ಅಧ್ಯಾಯ ಮುಕ್ತಾಯವಾಗಿದೆ. ಅವರ ಅಗಲಿಕೆ ಒಂದು ಯುಗಾಂತ್ಯ ಎನಿಸಿದೆ. ಭಾವನೆಗಳು ಮತ್ತು ಯೋಚನಾ ಲಹರಿಯಿಂದ ಅಪಾರ ಜನಮನ್ನಣೆ ಪಡೆದಿದ್ದ ಅವರ ಕವಿಹೃದಯ ಇನ್ನು ನೆನಪು ಮಾತ್ರ. ಅವರು ಅರೇಬಿಕ್ ಅಥವಾ ಪರ್ಶಿಯನ್ ಶಬ್ದಕ್ಕಿಂತ ಹಿಂದಿ ಅಥವಾ ಹಿಂದೂಸ್ತಾನಿ ಶಬ್ದಗಳನ್ನು ತಮ್ಮ ಕವಿತೆಗಳಲ್ಲಿ ಬಳಸುತ್ತಿದ್ದರು" ಎಂದು ಖ್ಯಾತ ಕವಿ ಸರ್ವೇಶ್ ಆಸ್ತಾನಾ ನುಡಿನಮನ ಸಲ್ಲಿಸಿದ್ದಾರೆ.