ತೃತೀಯ ಭಾಷೆಯಾಗಿ ಉರ್ದು ಬದಲು ಸಂಸ್ಕೃತ: ರಾಜಸ್ಥಾನ ಶಿಕ್ಷಣ ಇಲಾಖೆ ಸೂಚನೆ

ಸಾಂದರ್ಭಿಕ ಚಿತ್ರ
ಜೈಪುರ: ತೃತೀಯ ಭಾಷೆಯಾಗಿ ಉರ್ದು ಬೋಧನೆ ಮಾಡುವುದನ್ನು ತಕ್ಷಣ ಸ್ಥಗಿತಗೊಳಿಸಿ, ಸಂಸ್ಕೃತವನ್ನು ಹೊಸ ಅಯ್ಕೆಯಾಗಿ ವಿದ್ಯಾರ್ಥಿಗಳಿಗೆ ಪರಿಚಯಿಸುವಂತೆ ರಾಜಸ್ಥಾನ ಶಿಕ್ಷಣ ಇಲಾಖೆ ಇಲ್ಲಿನ ಸರ್ಕಾರಿ ಶಾಲೆಗೆ ಸೂಚನೆ ನೀಡಿದೆ.
ಜಯಪುರದ ಮಹಾತ್ಮಗಾಂಧಿ ಸರ್ಕಾರಿ ಶಾಲೆ (ಆರ್ಎಸಿ ಬೆಟಾಲಿಯನ್)ಗೆ ನೀಡಿರುವ ಫೆಬ್ರುವರಿ 10ರ ದಿನಾಂಕದ ಆದೇಶದಲ್ಲಿ ಈ ಸೂಚನೆ ನೀಡಲಾಗಿದೆ. ಶಿಕ್ಷಣ ಸಚಿವ ಮದನ್ ದಿಲಾವರ್ ಅವರ ವಿಶೇಷ ಸಹಾಯಕ ಜೈನಾರಾಯಣ್ ಮೀನಾ ಅವರ ಕಚೇರಿಯಿಂದ ಇಲಾಖೆಗೆ ಬಂದ ಪತ್ರದ ಹಿನ್ನೆಲೆಯಲ್ಲಿ ಈ ಸೂಚನೆ ನೀಡಲಾಗುತ್ತಿದೆ ಎಂದು ಸ್ಪಷ್ಟಪಡಿಸಲಾಗಿದೆ.
"ಉರ್ದು ತರಗತಿಗಳನ್ನು ಸ್ಥಗಿತಗೊಳಿಸಿ, ಸಂಸ್ಕೃತ ಶಿಕ್ಷಕ ಹುದ್ದೆಯನ್ನು ಸೃಷ್ಟಿಸುವಂತೆ ಸಚಿವರು ಆದೇಶಿಸಿದ್ದಾರೆ. ಆದ್ದರಿಂದ ನಿಮ್ಮ ಶಾಲೆಯಿಂದ ಈ ಕಚೇರಿಗೆ ಸಂಸ್ಕೃತ ಭಾಷೆಯನ್ನು ತೃತೀಯ ಭಾಷೆಯಾಗಿ ಆರಂಭಿಸುವ ಸಂಬಂಧ ಸಮಗ್ರ ಪ್ರಸ್ತಾವನೆಯನ್ನು ಕಳುಹಿಸಬೇಕು" ಎಂದು ಸೂಚಿಸಲಾಗಿದೆ.
ದಿಲಾವರ್ ಅವರ ಓಎಸ್ಡಿ ಸತೀಶ್ ಗುಪ್ತಾ ಈ ಬಗ್ಗೆ ವಿವರ ನೀಡಿ, ಆ ಶಾಲೆಯಲ್ಲಿ ತೃತೀಯ ಭಾಷೆಯಾಗಿ ಉರ್ದು ಕಲಿಯಲು ಸಾಕಷ್ಟು ಸಂಖ್ಯೆಯ ವಿದ್ಯಾರ್ಥಿಗಳು ಇಲ್ಲದ ಕಾರಣ, ಪೂರ್ಣಾವಧಿ ಶಿಕ್ಷಕರನ್ನು ನಿಯೋಜಿಸುವುದನ್ನು ಸಮರ್ಥಿಸುವಂತಿಲ್ಲ ಎಂದರು.
ಶಿಕ್ಷಕರ ಪ್ರತಿಭಟನೆಯ ನಡುವೆ ಶಿಕ್ಷಣ ಸಚಿವರ ಸೂಚನೆಯಂತೆ ಇಂಥ ಯಾವುದೇ ಆದೇಶ ನೀಡಿಲ್ಲ ಎಂದು ಸಚಿವರ ಮಾಧ್ಯಮ ಸಂಯೊಜಕರು ಹೇಳಿಕೊಂಡಿದ್ದಾರೆ.







