ಕರ್ತವ್ಯ ಪಥದಲ್ಲಿ ಗಣರಾಜ್ಯೋತ್ಸವ ಮೆರವಣಿಗೆ; ಗಮನ ಸೆಳೆದ ಆಪರೇಷನ್ ಸಿಂಧೂರ ಸ್ತಬ್ಧ ಚಿತ್ರ

Photo| PTI
ಹೊಸದಿಲ್ಲಿ, ಜ.26: ದೇಶದ 77ನೇ ಗಣರಾಜ್ಯೋತ್ಸವದ ಅಂಗವಾಗಿ ಸೋಮವಾರ ಕರ್ತವ್ಯ ಪಥದಲ್ಲಿ ಭವ್ಯ ಮೆರವಣಿಗೆ ನಡೆಯಿತು. ಸುಮಾರು 90 ನಿಮಿಷಗಳ ಕಾಲ ನಡೆದ ಮೆರವಣಿಗೆಯಲ್ಲಿ ಸೇನಾ ಶಕ್ತಿ, ಸಾಂಸ್ಕೃತಿಕ ವೈವಿಧ್ಯತೆ ಮತ್ತು ಅಭಿವೃದ್ಧಿ ಪಯಣವನ್ನು ಪ್ರತಿಬಿಂಬಿಸುವ ಪ್ರದರ್ಶನಗಳು ಗಮನ ಸೆಳೆದವು.
‘ಆಪರೇಷನ್ ಸಿಂದೂರ್’ ಟ್ಯಾಬ್ಲೋ ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿತ್ತು. ಅಪಾಚೆ ಹಾಗೂ ಧ್ರುವ ಹೆಲಿಕಾಪ್ಟರ್ಗಳ ಆಕಾಶ ಹಾರಾಟ, ಭೀಷ್ಮ ಮತ್ತು ಅರ್ಜುನ್ ಯುದ್ಧ ಟ್ಯಾಂಕ್ಗಳ ಪ್ರದರ್ಶನ ಪ್ರೇಕ್ಷಕರನ್ನು ಆಕರ್ಷಿಸಿತು. ಸೈನಿಕ ಪಡೆಗಳ ಶಿಸ್ತಿನ ಪಥಸಂಚಲನಕ್ಕೆ ಜನರಿಂದ ಕರತಾಡನ ವ್ಯಕ್ತವಾಯಿತು.
ಮೆರವಣಿಗೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ವೀಕ್ಷಿಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಯುರೋಪಿಯನ್ ಕೌನ್ಸಿಲ್ನ ಮುಖ್ಯ ಅತಿಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಈ ವರ್ಷದ ಗಣರಾಜ್ಯೋತ್ಸವದ ವಿಷಯ ‘ವಂದೇ ಮಾತರಂಗೆ 150 ವರ್ಷಗಳು’. ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯ ರಚಿಸಿದ ವಂದೇ ಮಾತರಂ ಗೌರವಿಸುವ ಸ್ತಬ್ಧಚಿತ್ರಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಗಮನ ಸೆಳೆಯಿತು. ಸ್ವಾತಂತ್ರ್ಯ ಹೋರಾಟ, ರಾಷ್ಟ್ರೀಯ ಗುರುತು ಮತ್ತು ಸಮಕಾಲೀನ ಗುರಿಗಳನ್ನು ಒಂದೇ ದಾರಿಯಲ್ಲಿ ಜೋಡಿಸುವ ಪ್ರಯತ್ನ ಮೆರವಣಿಗೆಯಲ್ಲಿ ಕಂಡು ಬಂತು.
ಭದ್ರತಾ ವ್ಯವಸ್ಥೆಯ ನಡುವೆ ನಡೆದ ಆಚರಣೆಗಳಲ್ಲಿ ರಾಜ್ಯಗಳ ಸ್ತಬ್ಧಚಿತ್ರಗಳು, ಜನಪದ ನೃತ್ಯ–ಸಂಗೀತ ಪ್ರದರ್ಶನಗಳು ಹಾಗೂ ತಂತ್ರಜ್ಞಾನಾಧಾರಿತ ಅಭಿವೃದ್ಧಿರ ಟ್ಯಾಬ್ಲೋಗಳು ಮೆರವಣಿಗೆಗೆ ವೈಭವ ತುಂಬಿದವು. 1950ರ ಜನವರಿ 26ರಂದು ಸಂವಿಧಾನ ಜಾರಿಗೆ ಬಂದ ಸ್ಮರಣಾರ್ಥವಾಗಿ ದೇಶವ್ಯಾಪಿ ಸಂಭ್ರಮ ಕಂಡುಬಂತು.







