17 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ: ECI ಘೋಷಣೆ
ನ. 12ರಂದು ಕರಡು ಪಟ್ಟಿ ಪ್ರಕಟ; 2027ರ ಜ. 4ಕ್ಕೆ ಅಂತಿಮ ಪಟ್ಟಿ ಸಿದ್ಧ

Photo Credit: PTI
ಹೊಸದಿಲ್ಲಿ: ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿರುವ ರಾಜ್ಯಗಳು ಸೇರಿದಂತೆ, ಒಟ್ಟು 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (SSR) ನಡೆಸಲು ಚುನಾವಣಾ ಆಯೋಗ ನಿರ್ಧರಿಸಿದೆ. 2027ರ ಜನವರಿ 1 ಅನ್ನು ಅರ್ಹತಾ ದಿನಾಂಕವಾಗಿ ನಿಗದಿಪಡಿಸಲಾಗಿದೆ.
ಈ ಸಂಬಂಧ ಆಯೋಗವು ಗುರುವಾರ ಆಯಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಚುನಾವಣಾಧಿಕಾರಿಗಳಿಗೆ ಪತ್ರ ಬರೆದಿದೆ. ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಮಣಿಪುರ ಮತ್ತು ಗೋವಾ ಸೇರಿದಂತೆ 17 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಈ ಪರಿಷ್ಕರಣೆಯ ವ್ಯಾಪ್ತಿಗೆ ಒಳಪಡಲಿವೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಅಸ್ಸಾಂ, ಬಿಹಾರ, ಛತ್ತೀಸ್ಗಢ, ಗೋವಾ, ಗುಜರಾತ್, ಕೇರಳ, ಲಕ್ಷದ್ವೀಪ, ಮಧ್ಯಪ್ರದೇಶ, ಮಣಿಪುರ, ಪುದುಚೇರಿ, ಪಂಜಾಬ್, ರಾಜಸ್ಥಾನ, ತಮಿಳುನಾಡು, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳ ಈ ಪಟ್ಟಿಯಲ್ಲಿವೆ.
ಅರ್ಹ ಮತದಾರರನ್ನು ಪಟ್ಟಿಗೆ ಸೇರ್ಪಡೆಗೊಳಿಸುವುದು, ವಿಶೇಷವಾಗಿ ಯುವಕರು ಮತ್ತು ಮೊದಲ ಬಾರಿಗೆ ಮತ ಚಲಾಯಿಸುವವರ ನೋಂದಣಿಗೆ ಅವಕಾಶ ಕಲ್ಪಿಸುವುದು ಹಾಗೂ ಮತದಾರರ ಪಟ್ಟಿಯಲ್ಲಿನ ತಪ್ಪುಗಳನ್ನು ಸರಿಪಡಿಸಿ ನಿಖರತೆಯನ್ನು ಹೆಚ್ಚಿಸುವುದು ಈ ಪರಿಷ್ಕರಣೆಯ ಪ್ರಮುಖ ಉದ್ದೇಶಗಳಾಗಿವೆ.
ನವೆಂಬರ್ 12ರಂದು ಕರಡು ಪಟ್ಟಿ:
ಆಯೋಗದ ವೇಳಾಪಟ್ಟಿಯ ಪ್ರಕಾರ, ನವೆಂಬರ್ 2ರೊಳಗೆ ಮತಗಟ್ಟೆಗಳ ಪುನರ್ ವ್ಯವಸ್ಥೆ ಪೂರ್ಣಗೊಳಿಸಬೇಕು. ನವೆಂಬರ್ 12ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು. ಪಟ್ಟಿಗೆ ಸಂಬಂಧಿಸಿದ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಡಿಸೆಂಬರ್ 11ರವರೆಗೆ ಅವಕಾಶವಿರಲಿದೆ. ಅರ್ಜಿಗಳ ವಿಲೇವಾರಿಯನ್ನು ಡಿಸೆಂಬರ್ 28ರೊಳಗೆ ಪೂರ್ಣಗೊಳಿಸಿ, 2027ರ ಜನವರಿ 4ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲು ಉದ್ದೇಶಿಸಲಾಗಿದೆ.
ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ:
403 ಸದಸ್ಯ ಬಲದ ಉತ್ತರ ಪ್ರದೇಶ ವಿಧಾನಸಭೆಯ ಅವಧಿ 2027ರ ಮೇ 22ರಂದು ಮುಕ್ತಾಯಗೊಳ್ಳಲಿದೆ. 60 ಸದಸ್ಯ ಬಲದ ಮಣಿಪುರ, 40 ಸದಸ್ಯ ಬಲದ ಗೋವಾ, 117 ಸದಸ್ಯ ಬಲದ ಪಂಜಾಬ್ ಮತ್ತು 70 ಸದಸ್ಯ ಬಲದ ಉತ್ತರಾಖಂಡ ವಿಧಾನಸಭೆಗಳ ಅವಧಿ 2027ರ ಮಾರ್ಚ್ನಲ್ಲಿ ಬೇರೆ ಬೇರೆ ದಿನಾಂಕಗಳಲ್ಲಿ ಕೊನೆಗೊಳ್ಳಲಿದೆ.
ಜನತಾ ಪ್ರಾತಿನಿಧ್ಯ ಕಾಯಿದೆ, 1950ರ ಸೆಕ್ಷನ್ 21ರ ಅಡಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ನಡೆಯಲಿದೆ. ವಿಧಾನಸಭೆಯ ಅವಧಿ ಮುಕ್ತಾಯಗೊಳ್ಳುವುದಕ್ಕೆ ಆರು ತಿಂಗಳಿಗಿಂತ ಮುಂಚಿತವಾಗಿಯೂ ಚುನಾವಣೆ ನಡೆಸಲು ಚುನಾವಣಾ ಆಯೋಗಕ್ಕೆ ಅವಕಾಶವಿದೆ.
ವಿಶೇಷ ತೀವ್ರ ಪರಿಷ್ಕರಣೆ (SIR) ನಡೆಯುತ್ತಿರುವ ಅಥವಾ ಇತ್ತೀಚೆಗೆ ಪೂರ್ಣಗೊಂಡಿರುವ ಕೆಲವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮತದಾರರ ಪಟ್ಟಿ ಪರಿಷ್ಕರಣೆಯ ವೇಳಾಪಟ್ಟಿಯನ್ನು ಪ್ರತ್ಯೇಕವಾಗಿ ಪ್ರಕಟಿಸಲಾಗುವುದು. ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ನಲ್ಲಿನ ಪರಿಷ್ಕರಣೆಯ ವೇಳಾಪಟ್ಟಿಯನ್ನು ಹವಾಮಾನ ಪರಿಸ್ಥಿತಿಯನ್ನು ಪರಿಗಣಿಸಿ ಬಳಿಕ ಪ್ರಕಟಿಸಲು ಆಯೋಗ ಉದ್ದೇಶಿಸಿದೆ.






