ಆರ್ ಜಿ ಕರ್ ಆಸ್ಪತ್ರೆಯಲ್ಲಿ ಅತ್ಯಾಚಾರ, ಹತ್ಯೆ ಪ್ರಕರಣ | ನಮಗೆ ಪರಿಹಾರ ಬೇಡ, ನ್ಯಾಯ ಬೇಕು: ಸಂತ್ರಸ್ತೆಯ ಕುಟುಂಬ
ಸಿಬಿಐ ತನಿಖೆ ಬಗ್ಗೆ ಸಂತ್ರಸ್ತೆಯ ತಾಯಿಗೆ ನಿರಾಶೆ

PC : thehindu.com
ಕೋಲ್ಕತಾ : ನಮಗೆ ಪರಿಹಾರವಲ್ಲ, ನ್ಯಾಯ ಸಿಗಬೇಕು ಎಂದು ಸಂತ್ರಸ್ತ ವೈದ್ಯೆಯ ಕುಟುಂಬಿಕರು ಹೇಳಿದ್ದಾರೆ. ಸಂತ್ರಸ್ತೆಯ ಕುಟುಂಬಕ್ಕೆ 17 ಲಕ್ಷ ರೂ. ಪರಿಹಾರ ನೀಡುವಂತೆ ನ್ಯಾಯಾಲಯವು ಪಶ್ಚಿಮ ಬಂಗಾಳ ಸರಕಾರಕ್ಕೆ ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.
‘‘ನಮಗೆ ಪರಿಹಾರ ಬೇಡ, ನ್ಯಾಯ ಬೇಕು’’ ಎಂದು ಕುಟುಂಬ ಹೇಳಿರುವುದಾಗಿ ಎಎನ್ಐ ವರದಿ ಮಾಡಿದೆ.
‘‘ಸಂತ್ರಸ್ತೆಯು ತನ್ನ ಕೆಲಸದ ಸ್ಥಳ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವಾಗ ಮೃತಪಟ್ಟಿರುವ ಹಿನ್ನೆಲೆಯಲ್ಲಿ, ವೈದ್ಯೆಯ ಕುಟುಂಬಕ್ಕೆ ಕೊಲೆಗಾಗಿ 10 ಲಕ್ಷ ರೂಪಾಯಿ ಮತ್ತು ಅತ್ಯಾಚಾರಕ್ಕಾಗಿ 7 ಲಕ್ಷ ರೂ. ಪರಿಹಾರ ನೀಡುವುದು ರಾಜ್ಯ ಸರಕಾರದ ಜವಾಬ್ದಾರಿಯಾಗಿದೆ’’ ಎಂದು ಹೆಚ್ಚುವರಿ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಧೀಶ ಅನಿರ್ಬನ್ ದಾಸ್ ತನ್ನ ತೀರ್ಪಿನಲ್ಲಿ ಹೇಳಿದ್ದಾರೆ.
ಕೋಲ್ಕತಾದ ಆರ್ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯೆಯ ಅತ್ಯಾಚಾರ-ಕೊಲೆ ಪ್ರಕರಣವನ್ನು ಸಿಬಿಐ ತನಿಖೆ ಮಾಡಿದ ರೀತಿಯ ಬಗ್ಗೆ ಸಂತ್ರಸ್ತೆಯ ತಾಯಿ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ‘‘ಈ ಪ್ರಕರಣದಲ್ಲಿ ಶಾಮೀಲಾಗಿರುವ ಇತರರನ್ನು ಕಾನೂನು ಕ್ರಮಕ್ಕೆ ಒಳಪಾಡಿಸಲಾಗಿಲ್ಲ’’ ಎಂದು ಅವರು ಆರೋಪಿಸಿದ್ದಾರೆ.
‘‘ಈ ಅಪರಾಧದಲ್ಲಿ ಕೇವಲ ಒಬ್ಬ ವ್ಯಕ್ತಿ ಶಾಮೀಲಾಗಿಲ್ಲ. ಆದರೆ, ಇತರ ಪಾತಕಿಗಳನ್ನು ಹಿಡಿಯುವಲ್ಲಿ ಸಿಬಿಐ ವಿಫಲವಾಗಿದೆ. ಸಮಾಜದಲ್ಲಿ ಇಂಥ ಕೃತ್ಯಗಳು ಮರುಕಳಿಸಬಾರದು ಎಂದಾದರೆ, ಇಂಥ ಕ್ರಿಮಿನಲ್ಗಳು ಬದುಕಿ ಉಳಿಯಬಾರದು’’ ಎಂದು ಶೋಕತಪ್ತ ತಾಯಿ ಹೇಳಿದರು.