́ʼಅಣ್ಣ'ನಿಂದ ಅಪರಿಚಿತರವರೆಗೆ: ರಾಹುಲ್ ಆಹ್ವಾನವನ್ನೇ ತಿರಸ್ಕರಿಸಿದ ಸ್ಟಾಲಿನ್!
► ಸೋನಿಯಾ ಗಾಂಧಿ ಆತ್ಮಚರಿತ್ರೆ ಬಿಡುಗಡೆಗೆ ಗೈರು ► ಕಾಂಗ್ರೆಸ್–ಡಿಎಂಕೆ ದಶಕಗಳ ಮೈತ್ರಿಗೆ ತೆರೆಬಿದ್ದ ಬೆನ್ನಲ್ಲೇ ನಾಯಕರ ನಡುವೆಯೂ ಬಿರುಕು

ಫೈಲ್ ಚಿತ್ರ (Photo Source: ANI)
ಹೊಸದಿಲ್ಲಿ: ಕಾಂಗ್ರೆಸ್ ಮತ್ತು ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ನಡುವಿನ ದಶಕಗಳ ಹಳೆಯ ರಾಜಕೀಯ ಮೈತ್ರಿ ಮುರಿದುಬಿದ್ದ ಬೆನ್ನಲ್ಲೇ, ಉಭಯ ಪಕ್ಷಗಳ ನಾಯಕರ ನಡುವಿನ ವೈಯಕ್ತಿಕ ಸಂಬಂಧವೂ ಹದಗೆಟ್ಟಿದೆ. ತಮ್ಮ ತಾಯಿ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ ಬಿಡುಗಡೆ ಸಮಾರಂಭಕ್ಕೆ ಆಹ್ವಾನಿಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೂರವಾಣಿ ಕರೆ ಮಾಡಿದರೂ, ಡಿಎಂಕೆ ಅಧ್ಯಕ್ಷ ಹಾಗೂ ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರೊಂದಿಗೆ ಮಾತನಾಡಲು ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ.
ನ.16ರಂದು ಹೊಸದಿಲ್ಲಿಯಲ್ಲಿ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' (Belonging: A Journey of Love) ಬಿಡುಗಡೆ ಸಮಾರಂಭ ನಡೆದಿತ್ತು. ಈ ಕಾರ್ಯಕ್ರಮಕ್ಕೆ ಆಹ್ವಾನಿಸಲು ರಾಹುಲ್ ಅವರು ಸ್ಟಾಲಿನ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದರು. ಆದರೆ, ಸ್ಟಾಲಿನ್ ಅವರೊಂದಿಗೆ ಮಾತನಾಡಲು ಸಾಧ್ಯವಾಗಲಿಲ್ಲ ಎಂದು ಮೂಲಗಳು ಬುಧವಾರ 'ನ್ಯೂಸ್ 18'ಗೆ ತಿಳಿಸಿವೆ.
ವಿಶೇಷವೆಂದರೆ, ರಾಹುಲ್ ಅವರೊಂದಿಗೆ ಮಾತನಾಡಲು ನಿರಾಕರಿಸಿದ ಸ್ಟಾಲಿನ್, ಸೋನಿಯಾ ಗಾಂಧಿ ಅವರಿಗೆ ಪುಸ್ತಕ ಬಿಡುಗಡೆಗೆ ಅಭಿನಂದನೆ ಸಲ್ಲಿಸಿ ಸಂದೇಶ ಕಳುಹಿಸಿದ್ದರು. ಸೋನಿಯಾ ಅವರಿಗೆ ಶುಭಾಶಯ ಕೋರಿದರೂ ಅವರ ಪುತ್ರ ರಾಹುಲ್ ಅವರ ಆಹ್ವಾನಕ್ಕೆ ಸ್ಪಂದಿಸದಿರುವುದು ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ.
ಒಂದು ಕಾಲದಲ್ಲಿ ರಾಹುಲ್ ಮತ್ತು ಸ್ಟಾಲಿನ್ ನಡುವೆ ಆತ್ಮೀಯ ಸಂಬಂಧವಿತ್ತು. ಇಬ್ಬರೂ ಸಾರ್ವಜನಿಕವಾಗಿ ಪರಸ್ಪರರನ್ನು 'ಸಹೋದರರು' ಎಂದು ಸಂಬೋಧಿಸುತ್ತಿದ್ದರು. 2024ರ ಲೋಕಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ರಾಹುಲ್ ಅವರು ಸ್ಟಾಲಿನ್ ಅವರನ್ನು 'ಅಣ್ಣ' ಎಂದು ಕರೆದಿದ್ದರು. ಇದೀಗ ಅವರ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿರುವುದು ಕಾಂಗ್ರೆಸ್–ಡಿಎಂಕೆ ಮೈತ್ರಿಯಲ್ಲಿನ ಬದಲಾವಣೆಯನ್ನು ಪ್ರತಿಬಿಂಬಿಸಿದೆ.
ಕಾಂಗ್ರೆಸ್ ಮತ್ತು ಡಿಎಂಕೆ ನಡುವಿನ ಸಂಬಂಧ ಹದಗೆಡಲು 2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಸಿದ್ಧತೆಯ ಸಂದರ್ಭದಲ್ಲಿ ಉಂಟಾದ ಅಧಿಕಾರ ಹಂಚಿಕೆಯ ವಿವಾದ ಪ್ರಮುಖ ಕಾರಣವಾಯಿತು.
ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಬಂದರೆ ಹೆಚ್ಚಿನ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕು ಮತ್ತು ರಾಜ್ಯ ಸರಕಾರದಲ್ಲಿ ಅಧಿಕಾರದ ಪಾಲು ನೀಡಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿತ್ತು. ಆದರೆ, ಕಾಂಗ್ರೆಸ್ ನ ಈ ಬೇಡಿಕೆಯನ್ನು ಒಪ್ಪಿಕೊಳ್ಳಲು ಡಿಎಂಕೆ ಹಿಂದೇಟು ಹಾಕಿತ್ತು.
2004ರಿಂದ ಕಾಂಗ್ರೆಸ್ ಮತ್ತು ಡಿಎಂಕೆ ರಾಜಕೀಯ ಮಿತ್ರಪಕ್ಷಗಳಾಗಿದ್ದವು. 2013ರಲ್ಲಿ ಶ್ರೀಲಂಕಾದ ತಮಿಳರ ವಿಚಾರವಾಗಿ ಡಿಎಂಕೆ, ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದಿಂದ ಹೊರಬಂದಿತ್ತು. ಈ ಅಲ್ಪಾವಧಿಯನ್ನು ಹೊರತುಪಡಿಸಿದರೆ ಉಭಯ ಪಕ್ಷಗಳ ಮೈತ್ರಿ ಮುಂದುವರಿದಿತ್ತು. 2016ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ಮುನ್ನ ಮತ್ತೆ ಮೈತ್ರಿ ಮಾಡಿಕೊಂಡಿದ್ದ ಎರಡೂ ಪಕ್ಷಗಳು ನಂತರದ ಚುನಾವಣೆಗಳಲ್ಲೂ ಒಟ್ಟಾಗಿ ಸ್ಪರ್ಧಿಸಿದ್ದವು.
2019ರ ಲೋಕಸಭಾ ಚುನಾವಣೆಗೆ ಮುನ್ನ ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಬೆಂಬಲಿಸಿದ ಪ್ರಮುಖ ವಿರೋಧ ಪಕ್ಷದ ನಾಯಕರಲ್ಲಿ ಸ್ಟಾಲಿನ್ ಕೂಡ ಒಬ್ಬರಾಗಿದ್ದರು. ಹೀಗಾಗಿ, ಇವರಿಬ್ಬರ ನಡುವಿನ ವೈಯಕ್ತಿಕ ಬಾಂಧವ್ಯವು 'ಇಂಡಿಯಾ' ಮೈತ್ರಿಕೂಟದ ರಾಜಕೀಯದಲ್ಲೂ ಮಹತ್ವ ಪಡೆದಿತ್ತು.
ಆದರೆ, 2026ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಇಬ್ಬರ ನಡುವಿನ ಅಂತರ ಹೆಚ್ಚಾಯಿತು. ಎರಡೂ ಪಕ್ಷಗಳು ಚುನಾವಣೆಯಲ್ಲಿ ಒಟ್ಟಾಗಿ ಸ್ಪರ್ಧಿಸಿದರೂ ರಾಹುಲ್ ಮತ್ತು ಸ್ಟಾಲಿನ್ ಜಂಟಿಯಾಗಿ ಪ್ರಚಾರ ನಡೆಸಿರಲಿಲ್ಲ. ಕಾಂಗ್ರೆಸ್ 28 ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಐದು ಸ್ಥಾನಗಳನ್ನು ಗೆದ್ದುಕೊಂಡಿತ್ತು.
ವಿಜಯ್ ಪಕ್ಷದೊಂದಿಗೆ ಕಾಂಗ್ರೆಸ್ ಮೈತ್ರಿ
ಚುನಾವಣಾ ಫಲಿತಾಂಶದ ಬಳಿಕ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ತಮಿಳುನಾಡಿನಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಸರಕಾರ ರಚಿಸಲು TVKಗೆ ಬೆಂಬಲ ನೀಡಲು ಕಾಂಗ್ರೆಸ್ ಮುಂದಾಯಿತು. ಇದರೊಂದಿಗೆ ಡಿಎಂಕೆಯೊಂದಿಗಿನ ದಶಕಗಳ ಹಳೆಯ ಮೈತ್ರಿ ಅಧಿಕೃತವಾಗಿ ಅಂತ್ಯಗೊಂಡಿತು. ವಿಜಯ್ ನೇತೃತ್ವದ ಸರಕಾರದಲ್ಲಿ ಕಾಂಗ್ರೆಸ್ಗೆ ಸಚಿವ ಸ್ಥಾನವೂ ದೊರೆಯಿತು.
ಇದು ಕೇವಲ ಸರಕಾರ ರಚನೆಗೆ ಸೀಮಿತವಾದ ರಾಜಕೀಯ ಹೊಂದಾಣಿಕೆಯಾಗಿರಲಿಲ್ಲ. ಸ್ಥಳೀಯ ಸಂಸ್ಥೆಗಳ ಚುನಾವಣೆಗಳು, ಲೋಕಸಭೆ ಮತ್ತು ರಾಜ್ಯಸಭೆ ಚುನಾವಣೆಗಳು ಸೇರಿದಂತೆ ಭವಿಷ್ಯದ ಎಲ್ಲ ಚುನಾವಣೆಗಳಲ್ಲೂ TVK ಜೊತೆಗಿನ ಮೈತ್ರಿ ಮುಂದುವರಿಯಲಿದೆ ಎಂದು ಕಾಂಗ್ರೆಸ್ ಘೋಷಿಸಿತು.
ಕಾಂಗ್ರೆಸ್ ನ ಈ ನಿರ್ಧಾರಕ್ಕೆ ಡಿಎಂಕೆಯಿಂದ ತೀವ್ರ ವಿರೋಧ ವ್ಯಕ್ತವಾಯಿತು. ದೀರ್ಘಕಾಲದ ಮಿತ್ರಪಕ್ಷಕ್ಕೆ ಕಾಂಗ್ರೆಸ್ ದ್ರೋಹ ಬಗೆದಿದೆ ಎಂದು ಡಿಎಂಕೆಯ ಹಲವು ನಾಯಕರು ಆರೋಪಿಸಿದರು. ಡಿಎಂಕೆಯನ್ನು ಸೋಲಿಸಿದ ಪಕ್ಷದೊಂದಿಗೆ ಕಾಂಗ್ರೆಸ್ ಕೈಜೋಡಿಸಿರುವುದು 'ಇಂಡಿಯಾ' ಮೈತ್ರಿಕೂಟದ ಒಗ್ಗಟ್ಟಿನ ಬಗ್ಗೆಯೂ ಪ್ರಶ್ನೆಗಳನ್ನು ಹುಟ್ಟುಹಾಕಿತು.
'ಇಂಡಿಯಾ' ಮೈತ್ರಿಕೂಟದ ಭಾಗವಾಗಿ ಮುಂದುವರಿಯುವುದಿಲ್ಲ ಎಂದು ಡಿಎಂಕೆ ಪದೇ ಪದೇ ಸ್ಪಷ್ಟಪಡಿಸಿದೆ. ಈ ನಡುವೆ ಡಿಎಂಕೆ ಸಂಸದೆ ಹಾಗೂ ಹಿರಿಯ ನಾಯಕಿ ಕೆ. ಕನಿಮೊಳಿ ಅವರು ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಶಿವಸೇನಾ (UBT) ನಾಯಕ ಉದ್ಧವ್ ಠಾಕ್ರೆ ಸೇರಿದಂತೆ ಕೆಲವು ಪ್ರಾದೇಶಿಕ ನಾಯಕರನ್ನು ಭೇಟಿಯಾಗಿದ್ದರು. ಈ ಭೇಟಿಗಳಿಂದ ಪ್ರಾದೇಶಿಕ ಪಕ್ಷಗಳು ಸೇರಿ 'ಮೂರನೇ ರಂಗ' (Third Front) ರಚಿಸುವ ಸಾಧ್ಯತೆ ಕುರಿತು ಊಹಾಪೋಹಗಳು ಎದ್ದಿದ್ದವು. ಆದರೆ, ಈವರೆಗೆ ಅಂತಹ ಯಾವುದೇ ಬೆಳವಣಿಗೆ ನಡೆದಿಲ್ಲ.
ಕಾಂಗ್ರೆಸ್ನ ಈ ನಿರ್ಧಾರವು ಡಿಎಂಕೆಗೆ ದೊಡ್ಡ ರಾಜಕೀಯ ಆಘಾತವಾಗಿತ್ತು. ದಶಕಗಳ ಮೈತ್ರಿ ಮತ್ತು ರಾಹುಲ್ ಗಾಂಧಿ ಅವರೊಂದಿಗಿನ ವೈಯಕ್ತಿಕ ಆತ್ಮೀಯತೆಯನ್ನು ಪರಿಗಣಿಸಿದರೆ, ಈ ಬೆಳವಣಿಗೆಯಿಂದ ಸ್ಟಾಲಿನ್ ಅಸಮಾಧಾನಗೊಂಡಿದ್ದಾರೆ ಎಂದು ವರದಿಯಾಗಿದೆ.
ಸೋನಿಯಾ ಕಾರ್ಯಕ್ರಮದಲ್ಲಿ ವಿಜಯ್ ಗೆ ಆದ್ಯತೆ
ಸೋಮವಾರ ಹೊಸದಿಲ್ಲಿಯಲ್ಲಿ ನಡೆದ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ ಬಿಡುಗಡೆ ಸಮಾರಂಭದಲ್ಲಿ ಕಾಂಗ್ರೆಸ್ ಮತ್ತು ಡಿಎಂಕೆ ನಡುವಿನ ಅಂತರ ಮತ್ತಷ್ಟು ಸ್ಪಷ್ಟವಾಗಿದೆ. ರಾಹುಲ್ ಗಾಂಧಿ ಅವರ ಆಹ್ವಾನಕ್ಕೆ ಸ್ಪಂದಿಸದ ಸ್ಟಾಲಿನ್ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಆದರೆ, ವಿಜಯ್ ಅವರು ಸೋನಿಯಾ ಗಾಂಧಿ ಅವರ ವೈಯಕ್ತಿಕ ಆಹ್ವಾನದ ಮೇರೆಗೆ ಸಮಾರಂಭದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮಕ್ಕೆ ಆಗಮಿಸಿದ ಬಳಿಕ ರಾಹುಲ್ ಗಾಂಧಿ ಅವರಿಂದಲೂ ವಿಜಯ್ ಅವರಿಗೆ ದೂರವಾಣಿ ಕರೆ ಬಂದಿತ್ತು ಎಂದು ವರದಿಯಾಗಿದೆ.
ವಿಜಯ್ ಅವರು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಮುಂದಿನ ಸಾಲಿನಲ್ಲಿ ಕುಳಿತಿದ್ದರು. ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಕಾಂಗ್ರೆಸ್ನ ಹಿರಿಯ ನಾಯಕರೊಂದಿಗೆ ಮಾತುಕತೆಯಲ್ಲೂ ತೊಡಗಿದ್ದರು.
ಸಮಾರಂಭದಲ್ಲಿ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ್ ಬ್ಯಾನರ್ಜಿ, ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ, ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ, ಎನ್ಸಿಪಿ (ಎಸ್ಪಿ) ನಾಯಕಿ ಸುಪ್ರಿಯಾ ಸುಳೆ ಮತ್ತು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಸೇರಿದಂತೆ ಹಲವು ವಿರೋಧ ಪಕ್ಷಗಳ ನಾಯಕರು ಭಾಗವಹಿಸಿದ್ದರು.







