ಬಲಪಂಥೀಯ ಟ್ರೋಲ್ಗೊಳಗಾದ ಬಿಜೆಪಿ ವಕ್ತಾರ ಗೌರವ್ ಭಾಟಿಯಾ
ಅರ್ಫಾ ಖಾನುಮ್ ಗೆ ಬೆಂಬಲ

Photo: ANI
ಹೊಸದಿಲ್ಲಿ: ಐಸಿಸಿ ವಿಶ್ವಕಪ್ ನಡೆಯುತ್ತಿರುವ ಮಧ್ಯದಲ್ಲೇ ಕ್ರೀಡಾಕೂಟದಲ್ಲಿ ಪ್ರೇಕ್ಷಕರು ತೋರುತ್ತಿರುವ ವರ್ತನೆಯನ್ನು ಭಾರತೀಯ ಪತ್ರಕರ್ತೆ ಅರ್ಫಾ ಖಾನುಮ್ ಶೆರ್ವಾನಿ ಟೀಕಿಸಿರುವುದು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವಿವಾದಕ್ಕೆ ಕಾರಣವಾಗಿದೆ. ಅರ್ಫಾ ಖಾನುಮ್ ಶೆರ್ವಾನಿ ಅವರ ಪೋಸ್ಟಿಗೆ ಪಾಕಿಸ್ತಾನ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ ನೀಡಿರುವ ಪ್ರತಿಕ್ರಿಯೆಯನ್ನು ಟೀಕಿಸಿರುವ ಬಿಜೆಪಿ ವಕ್ತಾರ ಗೌರವ್ ಭಾಟಿಯಾರ ಪ್ರತಿಕ್ರಿಯೆಯು ಸೋಮವಾರ ಟ್ರೋಲ್ಗೆ ಗುರಿಯಾಗಿದೆ.
"ನನಗೆ ಓರ್ವ ಭಾರತೀಯಳಾಗಿ ಮುಜುಗರ ಮತ್ತು ನಾಚಿಕೆಯಾಗುತ್ತಿದೆ" ಎಂದು ಅರ್ಫಾ ಖಾನುಮ್ x ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ನಂತರ ಭಾರಿ ಚರ್ಚೆಗೆ ಗ್ರಾಸವಾಗಿದೆ.
"ಹಲವಾರು ಕ್ರಿಕೆಟ್ ಅಭಿಮಾನಿಗಳ ತಿರಸ್ಕಾರಾರ್ಹ ನಡವಳಿಕೆಯು ಓರ್ವ ಭಾರತೀಯಳಾಗಿ ನನಗೆ ಮುಜುಗರ ಮತ್ತು ನಾಚಿಕೆಯನ್ನುಂಟು ಮಾಡಿದೆ. ಜನರನ್ನು ಹತ್ತಿರ ತರಬೇಕಿದ್ದ ಕ್ರೀಡೆಯ ಕುರಿತು ಇಂತಹ ಸಣ್ಣತನ, ಅಸುರಕ್ಷಿತ ಹಾಗೂ ಬಹುಸಂಖ್ಯಾತ ಮನಸ್ಥಿತಿಯು ಕಳೆದ ಒಂದು ದಶಕದಲ್ಲಿ ಮೋದಿ-ಆರ್ಎಸ್ಎಸ್ ನಿರ್ಮಿಸಿರುವ ಭಾರತದ ದ್ಯೋತಕವಾಗಿದೆ" ಎಂದು ಅರ್ಫಾ ಖಾನುಮ್ ಆ ಪೋಸ್ಟ್ನಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು.
ಈ ಪೋಸ್ಟಿಗೆ ಪ್ರತಿಕ್ರಿಯಿಸಿದ್ದ ಪಾಕಿಸ್ತಾನ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ, "ಪಾಕಿಸ್ತಾನಕ್ಕೆ ಬನ್ನಿ" ಎಂದು ಅರ್ಫಾ ಖಾನುಮ್ ಅವರಿಗೆ ಆಹ್ವಾನ ನೀಡಿದ್ದರು.
"ಒಂದು ವೇಳೆ ನಿಮಗೆ ಭಾರತೀಯರಾಗಿರಲು ನಾಚಿಕೆಯಾಗುತ್ತಿದ್ದರೆ ನಮ್ಮ ದೇಶ ಪಾಕಿಸ್ತಾನಕ್ಕೆ ಬನ್ನಿ. ಭಾರತಕ್ಕೆ ನಿಮ್ಮಂಥ ಜನರ ಅಗತ್ಯವಿಲ್ಲ. ನಿಮ್ಮ ಪಾಕಿಸ್ತಾನ ಪ್ರವಾಸವನ್ನು ಪ್ರಾಯೋಜಿಸಲು ಭಾರತದಲ್ಲಿನ ಅನೇಕ ಮಂದಿ ಸಂತಸಗೊಂಡಿರುತ್ತಾರೆ" ಎಂದು ಮಾಜಿ ಪಾಕಿಸ್ತಾನ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ ಆ ಪೋಸ್ಟ್ಗೆ ಪ್ರತಿಕ್ರಿಯಿಸಿದ್ದರು.
ಅರ್ಫಾ ಖಾನುಮ್ ಅವರ ಪೋಸ್ಟಿಗೆ ಕನೇರಿಯಾ ನೀಡಿದ್ದ ಪ್ರತಿಕ್ರಿಯೆಗೆ ಮರು ಪ್ರತಿಕ್ರಿಯೆ ನೀಡಿದ್ದ ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ, "ಮೊದಲು ನೀವು ನಿಮ್ಮ ಮನೆಯನ್ನು ಸರಿಪಡಿಸಿಕೊಳ್ಳಿ. ಅರ್ಫಾ ತಪ್ಪಾಗಿದ್ದರೂ ನಮ್ಮ ದೇಶವನ್ನು ಟೀಕಿಸಿದ್ದಾರೆ. ಆದರೆ, ನಾವು ಯಾವ ಪ್ರದೇಶಕ್ಕೆ ಸೇರಿದ್ದೀವೊ ಅದರ ಆಧಾರದಲ್ಲಿ ನಮ್ಮ ಸಂಬಂಧಗಳನ್ನು ವ್ಯಾಖ್ಯಾನಿಸಲಾಗುವುದಿಲ್ಲ. ಬದಲಿಗೆ ನಾವು ನಮ್ಮ ದೇಶ ಭಾರತವನ್ನು ಪ್ರೀತಿಸುವ ಮೂಲಕ ಅದು ವ್ಯಾಖ್ಯಾನಗೊಳ್ಳುತ್ತದೆ. ಆಕೆಯೊಂದಿಗೆ ಕೇವಲ ಸ್ವಲ್ಪಮಟ್ಟಿಗೆ ಸಹಮತವಿದ್ದರೂ, ನಮ್ಮಿಬ್ಬರಲ್ಲೂ ಇರುವ ಸಾಮಾನ್ಯ ನಂಬಿಕೆಯೊಂದಿಗೆ ಭಾರತೀಯಳಾದ ಆಕೆಯ ಪರ ನಾನು ನಿಲ್ಲುತ್ತಿದ್ದೇನೆ. ಇದು ಖಂಡಿತವಾಗಿ ಧರ್ಮದ ಬಾಂಧವ್ಯಕ್ಕಿಂತ ದೇಶದೆಡೆಗಿನ ಪ್ರೇಮ ಬಾಂಧವ್ಯ ದೊಡ್ಡದು ಎಂಬುದನ್ನು ಸುದೀರ್ಘಾವಧಿಯಲ್ಲಿ ತೋರಿಸಲಿದೆ. ಭಾರತೀಯರೊಬ್ಬರಿಗೆ ತೊಂದರೆ ಕೊಡುವ ಧೈರ್ಯವನ್ನು ಎಂದಿಗೂ ಮಾಡದಿರಿ. ಇಲ್ಲವಾದರೆ ಕ್ರೀಡಾಂಗಣದಿಂದ ಚೆಂಡನ್ನು ಹೊರಗಟ್ಟುವಂತೆ ನಿಮ್ಮನ್ನೂ ಈ ವೇದಿಕೆಯಿಂದ ಹೊರಗಟ್ಟಲಾಗುವುದು, ಜೈ ಹಿಂದ್" ಎಂದು ಡ್ಯಾನಿಶ್ ಕನೇರಿಯಾರ ಪ್ರತಿಕ್ರಿಯೆಗೆ ಗೌರವ್ ಭಾಟಿಯಾ ಮರು ಪ್ರತಿಕ್ರಿಯೆ ನೀಡಿದ್ದಾರೆ.
ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಗೌರವ್ ಭಾಟಿಯಾರ ಪ್ರತಿಕ್ರಿಯೆ ಪ್ರಸಾರವಾಗುತ್ತಿದ್ದಂತೆಯೆ ಅರ್ಫಾರನ್ನು ಟೀಕಿಸಿ ಮತ್ತೊಂದು ಪೋಸ್ಟ್ ಮಾಡಿರುವ ಗೌರವ್ ಭಾಟಿಯಾ, ಪಾಕಿಸ್ತಾನ ಕ್ರಿಕೆಟಿಗನೊಂದಿಗಿನ ಆಕೆಯ ಬಿಸಿ ಬಿಸಿ ಚರ್ಚೆಯ ಫೋಟೊವನ್ನು ಹಂಚಿಕೊಂಡು, "ಅಗಸನ ನಾಯಿ ಮನೆಗೂ ಅಲ್ಲ; ಸ್ಮಶಾನಕ್ಕೂ ಅಲ್ಲ ಎಂಬ ಗಾದೆ ಮಾತಿದೆ" ಎಂದು ವ್ಯಂಗ್ಯವಾಡಿದ್ದಾರೆ.
ಇದೇ ವೇಳೆ ಅರ್ಫಾ ಪೋಸ್ಟ್ ಕುರಿತು ಬಿಜೆಪಿ ನಾಯಕನ ಪ್ರತಿಕ್ರಿಯೆಯನ್ನು ನೆಟ್ಟಿಗರು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಗೌರವ್ ಭಾಟಿಯಾರ ಮೊದಲ ಪೋಸ್ಟ್ಗೆ ಪ್ರತಿಕ್ರಿಯಿಸಿರುವ @Bhanusingh ಎಂಬ ಸಾಮಾಜಿಕ ಮಾಧ್ಯಮ ಬಳಕೆದಾರರು, ಭಾರತದಲ್ಲಿ ಸಮಸ್ಯೆ ಇರುವವರ ಬಗ್ಗೆ ನಿಮಗೇಕಿಷ್ಟು ಪ್ರೀತಿ ಎಂದು ಗೇಲಿ ಮಾಡಿದ್ದಾರೆ.
ಅವರ ಎರಡನೆಯ ಪೋಸ್ಟ್ಗೆ ಪ್ರತಿಕ್ರಿಯಿಸಿರುವ @sunilmisr ಎಂಬ ಬಳಕೆದಾರರು, "ಪೋಸ್ಟ್ನ ಎರಡನೆಯ ಸಾಲು ನಿಮಗೆ ಚೆನ್ನಾಗಿ ಒಪ್ಪುತ್ತದೆ" ಎಂದು ಚುಚ್ಚಿದ್ದಾರೆ.
Mr Danish Kaneria it would be nice if you could put your house in order first.
— Gaurav Bhatia गौरव भाटिया (@gauravbhatiabjp) October 23, 2023
Arfa criticized our country, wrongly so, but our relationship is not defined by the religion we profess but by the country we love, our Bharat.
Even when there is very little in common with her, I… https://t.co/44AzQa9YPI







