ಭಾರತದಲ್ಲಿ ಅಲ್ಪಸಂಖ್ಯಾತರ ವಿರುದ್ಧ ಹೆಚ್ಚಿದ ದೌರ್ಜನ್ಯ | 2026ರ ಮೇ–ಜುಲೈನಲ್ಲಿ ಕನಿಷ್ಠ 25 ಮಂದಿ ಹತ್ಯೆ: ‘ಇಂಡಿಯಾ ಪರ್ಸಿಕ್ಯೂಷನ್ ಟ್ರ್ಯಾಕರ್’ ವರದಿ
►ಅಸ್ಸಾಂ ನಲ್ಲಿ ಟಿಫಿನ್ ಗೆ ಮಾಂಸ ತಂದಿದ್ದಕ್ಕೆ ತಾಯಿ ಜೈಲಿಗೆ, ಮಗುವಿಗೆ ರಿಮಾಂಡ್ ಹೋಮ್! ►ಬಾಂಗ್ಲಾದೇಶಕ್ಕೆ ಗಡಿಪಾರು ಮಾಡಿದವರಲ್ಲಿ 120 ಮಂದಿ ಭಾರತೀಯರು

Photo Credit : southasiajusticecampaign.org
ಹೊಸದಿಲ್ಲಿ: ಭಾರತದಲ್ಲಿ ಅಲ್ಪಸಂಖ್ಯಾತರ ವಿರುದ್ಧ ನಡೆದಿರುವ ಹಕ್ಕು ಉಲ್ಲಂಘನೆಗಳ ಕುರಿತು ಸೌತ್ ಏಷ್ಯಾ ಜಸ್ಟಿಸ್ ಕ್ಯಾಂಪೇನ್ (SAJC) ಸಂಸ್ಥೆ ಬಿಡುಗಡೆ ಮಾಡಿರುವ ‘ಇಂಡಿಯಾ ಪರ್ಸಿಕ್ಯೂಷನ್ ಟ್ರ್ಯಾಕರ್’ ವರದಿ ಹಲವು ಅಂಶಗಳನ್ನು ದಾಖಲಿಸಿದೆ.
2026ರ ಮೇ ನಿಂದ ಜುಲೈವರೆಗಿನ ಮೂರು ತಿಂಗಳ ಅವಧಿಯಲ್ಲಿ ಪೊಲೀಸ್ ಎನ್ಕೌಂಟರ್ ಗಳು ಮತ್ತು ಪೊಲೀಸ್ ಕಸ್ಟಡಿಯಲ್ಲಿ ಕನಿಷ್ಠ 15 ಮುಸ್ಲಿಮರು ಮೃತಪಟ್ಟಿದ್ದಾರೆ ಎಂದು ವರದಿ ಹೇಳಿದೆ. ಇದೇ ಅವಧಿಯಲ್ಲಿ ಗುಂಪು ಹಲ್ಲೆ ಹಾಗೂ ದ್ವೇಷ ಅಪರಾಧಗಳಲ್ಲಿ 10 ಮುಸ್ಲಿಮರು ಬಲಿಯಾಗಿದ್ದಾರೆ.
ಇದರೊಂದಿಗೆ 2026ರ ಮೊದಲ ಏಳು ತಿಂಗಳಲ್ಲಿ ದ್ವೇಷ ಅಪರಾಧಗಳಿಗೆ ಬಲಿಯಾದ ಮುಸ್ಲಿಮರ ಸಂಖ್ಯೆ 25ಕ್ಕೆ ಏರಿದೆ ಎಂದು ವರದಿ ತಿಳಿಸಿದೆ.
►ಪಶ್ಚಿಮ ಬಂಗಾಳದಲ್ಲಿ 77 ಸಮುದಾಯಗಳು OBC ಪಟ್ಟಿಯಿಂದ ಹೊರಕ್ಕೆ!
ಪಶ್ಚಿಮ ಬಂಗಾಳದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ವಾರಗಳಲ್ಲಿ 77 ಮುಸ್ಲಿಂ ಸಮುದಾಯಗಳನ್ನು OBC ಮೀಸಲಾತಿ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ವರದಿ ಹೇಳಿದೆ.
ಅಲ್ಪಸಂಖ್ಯಾತ ಕಲ್ಯಾಣ ಮತ್ತು ಮದರಸಾ ಶಿಕ್ಷಣಕ್ಕೆ ಮೀಸಲಿಟ್ಟಿದ್ದ ಬಜೆಟ್ನಲ್ಲಿ ಶೇ. 62ರಷ್ಟು ಕಡಿತ ಮಾಡಲಾಗಿದೆ. ಮದರಸಾಗಳನ್ನು ಸರ್ಕಾರದ ತಪಾಸಣಾ ವ್ಯವಸ್ಥೆಯಡಿ ತರಲಾಗಿದೆ.
ಚುನಾವಣಾ ಫಲಿತಾಂಶದ ಬಳಿಕ ರಾಜ್ಯದ ಎಂಟು ಜಿಲ್ಲೆಗಳಲ್ಲಿ 34 ಕೋಮು ಸಂಘರ್ಷದ ಘಟನೆಗಳು ನಡೆದಿವೆ. ಮಸೀದಿಗಳು ಮತ್ತು ವಾಣಿಜ್ಯ ಮಳಿಗೆಗಳ ಮೇಲಿನ ದಾಳಿಗಳಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.
►ಮತ ಹಾಕದವರ ಕೆಲಸ ಮಾಡುವುದಿಲ್ಲ ಎಂದ ಸಿಎಂ!
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಮತದಾರರು ತಮಗೆ ಮತ ಹಾಕಿಲ್ಲ ಎಂದು ಹೇಳಿದ್ದರು. ನಂದಿಗ್ರಾಮದ ನಿರ್ದಿಷ್ಟ ಸಮುದಾಯಕ್ಕಾಗಿ ಮಾತ್ರ ಕೆಲಸ ಮಾಡುವುದಾಗಿ ಅವರು ಹೇಳಿದ್ದರು ಎಂದು ವರದಿ ಉಲ್ಲೇಖಿಸಿದೆ.
ಕೋಲ್ಕತ್ತಾದ ಡೋರಿನಾ ಕ್ರಾಸಿಂಗ್ ನಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆಯಲ್ಲಿ ಬಂಧಿತರಾದ 14 ಮಂದಿಯಲ್ಲಿ 13 ಮಂದಿ ಮುಸ್ಲಿಮರಾಗಿದ್ದರು. ಅವರನ್ನು ಸಾರ್ವಜನಿಕವಾಗಿ ಉಲ್ಲೇಖಿಸುವಾಗ ಧಾರ್ಮಿಕ ಸಂಕೇತಗಳನ್ನು ಬಳಸಲಾಗಿತ್ತು ಎಂದು ವರದಿ ಹೇಳಿದೆ.
ಮಹಾರಾಷ್ಟ್ರದ ಸಚಿವ ನಿತೀಶ್ ರಾಣೆ ಅವರು ಅಲ್ಪಸಂಖ್ಯಾತರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ಆರ್ಥಿಕ ಬಹಿಷ್ಕಾರಕ್ಕೆ ಕರೆ ನೀಡಿದ್ದರು ಎಂದು ವರದಿ ಆರೋಪಿಸಿದೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಾರ್ವಜನಿಕ ರಸ್ತೆಗಳಲ್ಲಿ ನಮಾಝ್ ನಿರ್ಬಂಧಿಸುವುದು ಮತ್ತು ಜನಸಂಖ್ಯಾ ನಿಯಂತ್ರಣದ ಕುರಿತು ಹೇಳಿಕೆ ನೀಡಿದ್ದರು ಎಂದು ವರದಿ ತಿಳಿಸಿದೆ.
► SIR ನಲ್ಲಿ ಹೆಸರು ಅಳಿಸುವಿಕೆ
ಚುನಾವಣಾ ಆಯೋಗದ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯಲ್ಲಿ ದೇಶಾದ್ಯಂತ ಸುಮಾರು 6 ಕೋಟಿ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ವರದಿ ಹೇಳಿದೆ.
SIR ನಡೆಸುವ ಚುನಾವಣಾ ಆಯೋಗದ ಅಧಿಕಾರವನ್ನು ಸುಪ್ರೀಂ ಕೋರ್ಟ್ ಮೇ 27ರಂದು ಎತ್ತಿಹಿಡಿದಿದೆ. ಆದರೆ ಪೌರತ್ವದ ಬಗ್ಗೆ ಅನುಮಾನವಿರುವ ಕಾರಣಕ್ಕೆ ಹೆಸರು ಕೈಬಿಡಲಾದವರ ಪ್ರಕರಣಗಳನ್ನು ಪೌರತ್ವ ಕಾಯ್ದೆಯಡಿ ಸಕ್ಷಮ ಪ್ರಾಧಿಕಾರಕ್ಕೆ ಕಳುಹಿಸುವಂತೆ ಸೂಚಿಸಿದೆ ಎಂದು ವರದಿ ತಿಳಿಸಿದೆ.
ಪಶ್ಚಿಮ ಬಂಗಾಳದಲ್ಲಿ ಹೆಸರು ಕೈಬಿಟ್ಟಿರುವುದನ್ನು ಪ್ರಶ್ನಿಸಿ 33 ಲಕ್ಷ ಮೇಲ್ಮನವಿಗಳು ಸಲ್ಲಿಕೆಯಾಗಿವೆ. ಅವುಗಳಲ್ಲಿ 27 ಲಕ್ಷ ಅರ್ಜಿಗಳು ಹೆಸರು ಕಳೆದುಕೊಂಡ ಮತದಾರರಿಂದಲೇ ಬಂದಿವೆ.
19 ಮೇಲ್ಮನವಿ ನ್ಯಾಯಮಂಡಳಿಗಳು ಮೊದಲ 100 ದಿನಗಳಲ್ಲಿ ಸುಮಾರು 30 ಸಾವಿರ ಅರ್ಜಿಗಳನ್ನು ಮಾತ್ರ ವಿಲೇವಾರಿ ಮಾಡಿವೆ. ಇದು ಶೇ. 1ಕ್ಕಿಂತ ಕಡಿಮೆ ಎಂದು ವರದಿ ಹೇಳಿದೆ.
ಈ ಪರಿಷ್ಕರಣೆಯಿಂದ ಅಲ್ಪಸಂಖ್ಯಾತರು ಮತ್ತು ಬಂಗಾಳಿ ಮೂಲದ ಜನರ ಮೇಲೆ ಪರಿಣಾಮ ಬೀರಬಹುದು ಎಂದು ವಿಶ್ವಸಂಸ್ಥೆಯ ಮೂವರು ವಿಶೇಷ ಪ್ರತಿನಿಧಿಗಳು ಭಾರತ ಸರ್ಕಾರಕ್ಕೆ ಪತ್ರ ಬರೆದು ಕಳವಳ ವ್ಯಕ್ತಪಡಿಸಿದ್ದಾರೆ.
►ಬಾಂಗ್ಲಾದೇಶಕ್ಕೆ ಕಳುಹಿಸಿದವರಲ್ಲಿ 120 ಮಂದಿ ಭಾರತೀಯರು!
ಪೌರತ್ವ ತಪಾಸಣೆಯ ಹೆಸರಿನಲ್ಲಿ ನ್ಯಾಯಾಂಗ ಪ್ರಕ್ರಿಯೆ ಇಲ್ಲದೆ ಜನರನ್ನು ಗಡಿ ದಾಟಿಸಲಾಗುತ್ತಿದೆ ಎಂದು ವರದಿ ಆರೋಪಿಸಿದೆ.
ಪಶ್ಚಿಮ ಬಂಗಾಳ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ತಿಂಗಳಲ್ಲಿ 4,800 ಜನರನ್ನು BSF ಮೂಲಕ ಗಡಿಪಾರು ಮಾಡಲಾಗಿದೆ ಎಂದು ಹೇಳಿಕೊಂಡಿದೆ. 836 ಮಂದಿಯನ್ನು ಜಿಲ್ಲಾ ಹೋಲ್ಡಿಂಗ್ ಸೆಂಟರ್ ಗಳಲ್ಲಿ ಇರಿಸಲಾಗಿದೆ.
ಅಸ್ಸಾಂನಲ್ಲಿ ಕಳೆದ ಎರಡು ವರ್ಷಗಳಲ್ಲಿ 1,679 ಜನರನ್ನು ಬಾಂಗ್ಲಾದೇಶಕ್ಕೆ ಕಳುಹಿಸಲಾಗಿದೆ ಎಂದು ಮುಖ್ಯಮಂತ್ರಿ ವಿಧಾನಸಭೆಗೆ ತಿಳಿಸಿದ್ದಾರೆ.
ಅಸ್ಸಾಂ ಮತ್ತು ಪಶ್ಚಿಮ ಬಂಗಾಳದ ಗಡಿಯಲ್ಲಿ ರಾತ್ರಿ ವೇಳೆ ಮುಳ್ಳುತಂತಿ ಬೇಲಿಗಳ ಮೂಲಕ ಜನರನ್ನು ಗಡಿಯಾಚೆಗೆ ತಳ್ಳಲಾಗುತ್ತಿದೆ ಎಂದು ಹ್ಯೂಮನ್ ರೈಟ್ಸ್ ವಾಚ್ ತನಿಖೆಯಲ್ಲಿ ಸಾಕ್ಷಿಗಳು ಹೇಳಿದ್ದಾರೆ ಎಂದು ವರದಿ ತಿಳಿಸಿದೆ.
ಬಾಂಗ್ಲಾದೇಶದ ಗಡಿ ಕಾವಲು ಪಡೆ ನೀಡಿದ ಮಾಹಿತಿಯಂತೆ, 2025ರ ಮೇಯಿಂದ 2026ರ ಜನವರಿವರೆಗೆ ಗಡಿ ದಾಟಿಸಲಾದ 2,479 ಜನರಲ್ಲಿ ಕನಿಷ್ಠ 120 ಮಂದಿ ಭಾರತೀಯರು ಎಂದು ವರದಿ ಹೇಳಿದೆ.
►3,000ಕ್ಕೂ ಹೆಚ್ಚು ಮನೆ, ಅಂಗಡಿ ನೆಲಸಮ
ಅನಧಿಕೃತ ಕಟ್ಟಡ ತೆರವು ಹೆಸರಿನಲ್ಲಿ ಮುಸ್ಲಿಮರ ಮನೆಗಳು, ಅಂಗಡಿಗಳು ಮತ್ತು ಧಾರ್ಮಿಕ ಕಟ್ಟಡಗಳನ್ನು ನೆಲಸಮ ಮಾಡಲಾಗಿದೆ ಎಂದು ವರದಿ ಆರೋಪಿಸಿದೆ.
ಮೇ–ಜುಲೈ ಅವಧಿಯಲ್ಲಿ 21ಕ್ಕೂ ಹೆಚ್ಚು ಘಟನೆಗಳಲ್ಲಿ 1,000ಕ್ಕೂ ಅಧಿಕ ಕಟ್ಟಡಗಳನ್ನು ನೆಲಸಮ ಮಾಡಲಾಗಿದೆ. 2026ರ ಮೊದಲ ಏಳು ತಿಂಗಳಲ್ಲಿ ಈ ಸಂಖ್ಯೆ 3,000 ದಾಟಿದೆ.
ಗುಜರಾತ್ ನ ಸೂರತ್ ನ ನಾಸಿರ್ ನಗರದಲ್ಲಿ ಮೇ 30ರಂದು ಸುಮಾರು 100 ಮನೆಗಳನ್ನು ನೆಲಸಮ ಮಾಡಲಾಗಿದೆ. ಯಾವುದೇ ಅಧಿಕೃತ ಆದೇಶವಿಲ್ಲದೆ ಈ ಕಾರ್ಯಾಚರಣೆ ನಡೆದಿತ್ತು ಎಂದು ವರದಿ ಹೇಳಿದೆ.
ಈ ಪ್ರಕರಣವನ್ನು ಗುಜರಾತ್ ಹೈಕೋರ್ಟ್ ಕಾನೂನುಬಾಹಿರ ಎಂದು ಪರಿಗಣಿಸಿ ಐವರು ಮುನ್ಸಿಪಲ್ ಅಧಿಕಾರಿಗಳನ್ನು ಅಮಾನತುಗೊಳಿಸಿದೆ ಎಂದು ವರದಿ ತಿಳಿಸಿದೆ.
ಮುಂಬೈನ ಬಾಂದ್ರಾ ಗರೀಬ್ ನಗರದಲ್ಲಿ ಬಕ್ರೀದ್ ಗೆ ಕೆಲ ದಿನಗಳ ಮೊದಲು ರೈಲ್ವೆ ಇಲಾಖೆ 500ಕ್ಕೂ ಹೆಚ್ಚು ಮನೆಗಳು ಮತ್ತು ಮಸೀದಿಗಳನ್ನು ನೆಲಸಮ ಮಾಡಿದೆ ಎಂದು ವರದಿ ಹೇಳಿದೆ.
ಸುಪ್ರೀಂ ಕೋರ್ಟ್ 2024ರ ನವೆಂಬರ್ ನಲ್ಲಿ ನೀಡಿದ್ದ ಧ್ವಂಸ ಮಾರ್ಗಸೂಚಿಗಳ ಉಲ್ಲಂಘನೆಗೆ ಸಂಬಂಧಿಸಿದ ಅರ್ಜಿಗಳನ್ನು ಜುಲೈ 16ರಂದು ಹೈಕೋರ್ಟ್ಗಳಿಗೆ ವರ್ಗಾಯಿಸಿದೆ ಎಂದು ವರದಿ ತಿಳಿಸಿದೆ.
►ಉತ್ತರಪ್ರದೇಶದಲ್ಲಿ 17403 ಪೊಲೀಸ್ ಕಾರ್ಯಾಚರಣೆ!
ಉತ್ತರ ಪ್ರದೇಶ ಸರ್ಕಾರದ ಅಧಿಕೃತ ಅಂಕಿಅಂಶದ ಪ್ರಕಾರ, 2017ರ ಮಾರ್ಚ್ನಿಂದ 2026ರ ಮೇ ವರೆಗೆ 17,043 ಪೊಲೀಸ್ ಕಾರ್ಯಾಚರಣೆಗಳು ನಡೆದಿವೆ.
ಈ ಕಾರ್ಯಾಚರಣೆಗಳಲ್ಲಿ 289 ಮಂದಿ ಮೃತಪಟ್ಟಿದ್ದಾರೆ. 11,834 ಮಂದಿ ಗಾಯಗೊಂಡಿದ್ದು, 34,253 ಮಂದಿಯನ್ನು ಬಂಧಿಸಲಾಗಿದೆ.
ಗುಜರಾತ್ ನ ಅಹಮದಾಬಾದ್ ನಲ್ಲಿ ಗೋಹತ್ಯೆ ಆರೋಪದ ಮೇಲೆ ಬಂಧಿತರಾಗಿದ್ದ 70 ವರ್ಷದ ಜಹೀರ್ ಶೇಖ್ ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟಿದ್ದರು. ಪೊಲೀಸರು ಎಫ್ಐಆರ್ ದಾಖಲಿಸದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಜುಲೈ 23ರಂದು SIT ರಚಿಸಲು ಆದೇಶಿಸಿದೆ ಎಂದು ವರದಿ ಹೇಳಿದೆ.
ಜಮ್ಮು–ಕಾಶ್ಮೀರದ ದೋಡಾದಲ್ಲಿ ರಾತ್ರಿ ಚೆಕ್ಪೋಸ್ಟ್ ನಲ್ಲಿ ಆಟೋ ಚಾಲಕ ಆರಿಫ್ ಹುಸೇನ್ ಪೊಲೀಸರ ಗುಂಡೇಟಿಗೆ ಮೃತಪಟ್ಟಿದ್ದಾರೆ. ಅನಂತನಾಗ್ನಲ್ಲಿ ಪೊಲೀಸ್ ಸಿಬ್ಬಂದಿ ಮೇಲೆ ಉಗ್ರ ದಾಳಿ ನಡೆದ ಬಳಿಕ 48 ಗಂಟೆಗಳಲ್ಲಿ 2,500ಕ್ಕೂ ಹೆಚ್ಚು ನಾಗರಿಕರನ್ನು ವಿಚಾರಣೆ ಇಲ್ಲದೆ ವಶಕ್ಕೆ ಪಡೆಯಲಾಗಿದೆ. ಇಬ್ಬರು ಆರೋಪಿಗಳ ಕುಟುಂಬಗಳ ಮನೆಗಳನ್ನು ಸ್ಫೋಟಕ ಬಳಸಿ ನೆಲಸಮ ಮಾಡಲಾಗಿದೆ ಎಂದು ವರದಿ ಹೇಳಿದೆ.
►ಗುಂಪು ಹಲ್ಲೆಯಲ್ಲಿ 10 ಮಂದಿ ಹತ್ಯೆ
ಮೇ ನಿಂದ ಜುಲೈವರೆಗೆ ಬಿಹಾರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ದಿಲ್ಲಿಯಲ್ಲಿ 10 ಮುಸ್ಲಿಮರು ಗುಂಪು ಹಲ್ಲೆಗಳಲ್ಲಿ ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ. ಬಿಹಾರದ ಮಧುಬನಿಯಲ್ಲಿ 66 ವರ್ಷದ ವೃದ್ಧರೊಬ್ಬರನ್ನು ವಿವಾದದ ಹಿನ್ನೆಲೆಯಲ್ಲಿ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದೆ.
ಉತ್ತರ ಪ್ರದೇಶದ ಸಂಭಲ್ ನಲ್ಲಿ ಮಕ್ಕಳ ಕ್ರಿಕೆಟ್ ಆಟದ ಜಗಳಕ್ಕೆ ಸಂಬಂಧಿಸಿದಂತೆ 19 ವರ್ಷದ ಯುವಕನನ್ನು ಅಪಹರಿಸಿ ಹತ್ಯೆ ಮಾಡಲಾಗಿದೆ.
ಬಿಹಾರದ ಸಿವಾನ್ ನಲ್ಲಿ ಗುಂಪು ಹಲ್ಲೆ ಪ್ರಕರಣದಲ್ಲಿ ಕರ್ತವ್ಯ ಲೋಪದ ಆರೋಪದ ಮೇಲೆ ತುರ್ತು ಸ್ಪಂದನಾ ವಾಹನದ ಸಬ್ ಇನ್ಸ್ಪೆಕ್ಟರ್ ಒಬ್ಬರನ್ನು ಅಮಾನತುಗೊಳಿಸಲಾಗಿದೆ.
►ಅಸ್ಸಾಂ ನಲ್ಲಿ ಟಿಫಿನ್ ಗೆ ಮಾಂಸ ತಂದಿದ್ದಕ್ಕೆ ತಾಯಿಗೆ ಜೈಲು, ಮಗುವಿಗೆ ರಿಮಾಂಡ್ ಹೋಮ್!
ಗೋಸಂರಕ್ಷಣಾ ಮತ್ತು ಮತಾಂತರ ನಿಷೇಧ ಕಾಯ್ದೆಗಳ ಅಡಿಯಲ್ಲಿ ಪ್ರಕರಣಗಳು ಹೆಚ್ಚಾಗಿವೆ ಎಂದು ವರದಿ ಹೇಳಿದೆ.
ಉತ್ತರ ಪ್ರದೇಶದ ಕೌಶಾಂಬಿ ಮತ್ತು ಮಧ್ಯಪ್ರದೇಶದ ರೇವಾದಲ್ಲಿ ಮನೆಯಲ್ಲಿ ಮಾಂಸ ಇಟ್ಟುಕೊಂಡಿದ್ದ ಆರೋಪದ ಮೇಲೆ ಮಹಿಳೆಯರನ್ನು ಬಂಧಿಸಲಾಗಿದೆ.
ಅಸ್ಸಾಂನ ಗೋಲ್ಪಾರಾದಲ್ಲಿ ಶಾಲೆಯ ಟಿಫಿನ್ ಡಬ್ಬಿಯಲ್ಲಿ ಮಾಂಸ ತಂದಿದ್ದ ವಿವಾದದಲ್ಲಿ ತಾಯಿಯನ್ನು ಬಂಧಿಸಿ, ಮಗುವನ್ನು ಬಾಲಮಂದಿರಕ್ಕೆ ಕಳುಹಿಸಲಾಗಿದೆ.
ಮಹಾರಾಷ್ಟ್ರದ ನಾಸಿಕ್ನಲ್ಲಿ ಟಿಸಿಎಸ್ ಉದ್ಯೋಗಿಯಾಗಿದ್ದ ಗರ್ಭಿಣಿ ನಿದಾ ಖಾನ್ ಅವರನ್ನು ಮತಾಂತರ ಆರೋಪದ ಮೇಲೆ ಬಂಧಿಸಿ ಎರಡು ತಿಂಗಳು ಜೈಲಿನಲ್ಲಿಡಲಾಗಿತ್ತು. ಜುಲೈನಲ್ಲಿ ಸೆಷನ್ಸ್ ನ್ಯಾಯಾಲಯ ಅವರಿಗೆ ಜಾಮೀನು ನೀಡಿದೆ.
ಅಸ್ಸಾಂ ಮತ್ತು ಮಧ್ಯಪ್ರದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಯಾಗಿದೆ. ಉತ್ತರಾಖಂಡ ಸರ್ಕಾರ ಮದರಸಾ ಮಂಡಳಿಯನ್ನು ರದ್ದುಗೊಳಿಸಿ 456 ಮದರಸಾಗಳ ಸರ್ಕಾರಿ ಅನುದಾನ ಸ್ಥಗಿತಗೊಳಿಸಿದೆ.
ಮಧ್ಯಪ್ರದೇಶ ಹೈಕೋರ್ಟ್ ಕಮಲ್ ಮೌಲಾ ಮಸೀದಿಯನ್ನು ಹಿಂದೂ ದೇವಾಲಯವೆಂದು ಘೋಷಿಸಿ ಶುಕ್ರವಾರದ ಪ್ರಾರ್ಥನೆಗೆ ನಿರ್ಬಂಧ ವಿಧಿಸಿದೆ ಎಂದು ವರದಿ ಹೇಳಿದೆ.
►ಜೀವಾವಧಿ ಶಿಕ್ಷೆ ವಿಧಿಸಿದ್ದಕ್ಕೆ ನ್ಯಾಯಾಧೀಶೆಗೆ ಕೊಲೆ ಬೆದರಿಕೆ
2023ರ ಜುನೈದ್ ಮತ್ತು ನಾಸಿರ್ ಹತ್ಯೆ ಪ್ರಕರಣದ ಆರೋಪಿ ಮೋನು ಮಾನೆಸರ್ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಯೊಂದಿಗೆ ಅವರು ಕಾಣಿಸಿಕೊಂಡ ಫೋಟೊಗಳು ಚರ್ಚೆಗೆ ಕಾರಣವಾಗಿವೆ ಎಂದು ವರದಿ ಹೇಳಿದೆ.
ಮಧ್ಯಪ್ರದೇಶದಲ್ಲಿಸ್ವಘೋಷಿತ ಗೋರಕ್ಷಕರ ಗುಂಪು ನಡೆಸಿದ ಹತ್ಯೆ ಪ್ರಕರಣದಲ್ಲಿ 14 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದ ನ್ಯಾಯಾಧೀಶೆ ತಬಸ್ಸುಮ್ ಖಾನ್ ಅವರಿಗೆ ಕೊಲೆ ಬೆದರಿಕೆ ಬಂದಿದೆ. ಹೈಕೋರ್ಟ್ ಅವರಿಗೆ ಪೊಲೀಸ್ ಭದ್ರತೆ ಒದಗಿಸಿದೆ.
2005ರ ಸೊಹ್ರಾಬುದ್ದೀನ್ ಶೇಖ್ ಎನ್ಕೌಂಟರ್ ಪ್ರಕರಣದಲ್ಲಿ 22 ಆರೋಪಿಗಳ ಖುಲಾಸೆಯನ್ನು ಬಾಂಬೆ ಹೈಕೋರ್ಟ್ ಎತ್ತಿಹಿಡಿದಿದೆ.
2020ರ ದಿಲ್ಲಿ ಹಿಂಸಾಚಾರ ಪ್ರಕರಣದಲ್ಲಿ UAPA ಅಡಿಯಲ್ಲಿ ಬಂಧಿತರಾಗಿದ್ದ ವಿದ್ಯಾರ್ಥಿ ನಾಯಕರಿಗೆ ಜಾಮೀನು ನೀಡುವ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತನ್ನ ಹಿಂದಿನ ತೀರ್ಪುಗಳನ್ನು ಮರುಪರಿಶೀಲಿಸುತ್ತಿದೆ ಎಂದು ವರದಿ ತಿಳಿಸಿದೆ.
NEET ಪರೀಕ್ಷಾ ಅಕ್ರಮದ ವಿರುದ್ಧ ಜಂತರ್ ಮಂತರ್ ನಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆಯಲ್ಲಿ ಪೆಲೆಟ್ ಗನ್ ಮತ್ತು ಅಶ್ರುವಾಯು ಬಳಸಲಾಗಿದೆ. 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದು ವರದಿ ಹೇಳಿದೆ.
ಜಂತರ್ ಮಂತರ್ ಸುತ್ತಮುತ್ತ ಇಂಟರ್ನೆಟ್ ಸ್ಥಗಿತಗೊಳಿಸಲಾಗಿತ್ತು. ಬಿಟ್ಚಾಟ್ ತಂತ್ರಾಂಶದ ಕೋಡ್ ಅಳಿಸಲು ಕೇಂದ್ರ ಗೃಹ ಸಚಿವಾಲಯ ಆದೇಶಿಸಿತ್ತು ಎಂದು ವರದಿ ತಿಳಿಸಿದೆ.
ಪಂಜಾಬ್ ನ ಮಾನವ ಹಕ್ಕುಗಳ ಹೋರಾಟಗಾರ ಜಸ್ವಂತ್ ಸಿಂಗ್ ಖಲ್ರಾ ಕುರಿತ ‘ಸತ್ಲಜ್’ ಚಿತ್ರವನ್ನು ಒಟಿಟಿ ವೇದಿಕೆಯಿಂದ ತೆಗೆದುಹಾಕಲಾಗಿದೆ.
NCERTಯ 8ನೇ ತರಗತಿಯ ಪಠ್ಯಪುಸ್ತಕದಿಂದ ನ್ಯಾಯಾಂಗ ವಿಳಂಬ ಮತ್ತು ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಅಧ್ಯಾಯಗಳನ್ನು ತೆಗೆದುಹಾಕಲಾಗಿದೆ ಎಂದು ವರದಿ ಹೇಳಿದೆ.
►ಅಂತಾರಾಷ್ಟ್ರೀಯ ಸಂಸ್ಥೆಗಳ ಕಳವಳ
ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್ ನ ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತ 180 ದೇಶಗಳಲ್ಲಿ 157ನೇ ಸ್ಥಾನದಲ್ಲಿದೆ.
ಸಿವಿಕಸ್ ಮಾನಿಟರ್ ಭಾರತವನ್ನು ‘ನಿರ್ಬಂಧಿತ’ ಪಟ್ಟಿಯಲ್ಲಿ ಇರಿಸಿದೆ. ಅಮೆರಿಕದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗ(USCIRF)ದ ವಿಚಾರಣೆಯಲ್ಲೂ ಭಾರತದ ಪರಿಸ್ಥಿತಿ ಕುರಿತು ತಜ್ಞರು ಸಾಕ್ಷ್ಯ ನೀಡಿದ್ದಾರೆ.
ಆದರೆ ಈ ಅಂತಾರಾಷ್ಟ್ರೀಯ ವರದಿಗಳು ಮತ್ತು ಕಳವಳಗಳನ್ನು ಭಾರತದ ವಿದೇಶಾಂಗ ಸಚಿವಾಲಯ ತಳ್ಳಿಹಾಕಿದೆ. ವರದಿಗಳು ಆಧಾರರಹಿತವಾಗಿದ್ದು, ಭಾರತದಲ್ಲಿ ಕಾನೂನುಬದ್ಧ ಆಡಳಿತ ನಡೆಯುತ್ತಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
ಸೌಜನ್ಯ: southasiajusticecampaign.org






