‘ಭಾರತದ ಸೇನಾಪಡೆಗಳ ಘರ್ಜನೆ ರಾವಲ್ಪಿಂಡಿಯವರೆಗೆ ತಲುಪಿದೆ’: ಆಪರೇಷನ್ ಸಿಂಧೂರಕ್ಕೆ ರಾಜನಾಥ್ ಸಿಂಗ್ ಶ್ಲಾಘನೆ

Photo : PTI
ಹೊಸದಿಲ್ಲಿ: ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯು ಪಾಕಿಸ್ತಾನದೊಳಗೆ ‘ಸಿಡಿಲಿನ ಸಂದೇಶ’ವನ್ನು ರವಾನಿಸಿದೆಯೆಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ರವಿವಾರ ಘೋಷಿಸಿದ್ದಾರೆ. ಪಾಕಿಸ್ತಾನದ ಸೇನಾ ವ್ಯವಸ್ಥೆಯ ಹೃದಯಭಾಗವಾದ ರಾವಲ್ಪಿಂಡಿಗೂ ಭಾರತೀಯ ಪಡೆಗಳ ಗರ್ಜನೆ ಕೇಳಿಸಿದೆ’’ ಎಂದವರು ಹೇಳಿದರು.
ಲಕ್ನೋದಲ್ಲಿ ‘ ಬ್ರಹ್ಮೋಸ್ ಏರೋಸ್ಪೇಸ್ ಇಂಟಿಗ್ರೇಶನ್ ಆ್ಯಂಡ್ ಟೆಸ್ಟಿಂಗ್ ಘಟಕ’ವನ್ನು ವೀಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಮಾತನಾಡಿದ ಸಿಂಗ್, ಭಾರತದ ರಾಜಕೀಯ ದೃಢಸಂಕಲ್ಪ, ಸೇನಾ ಕೌಶಲ್ಯ ಹಾಗೂ ಭಯೋತ್ಪಾದನೆ ವಿರುದ್ಧ ರಾಜಿರಹಿತ ನಿಲುವಿಗೆ ‘ಆಪರೇಷನ್ ಸಿಂಧೂರ’ ಒಂದು ನಿದರ್ಶನವಾಗಿದೆ ಎಂದರು.
ಭಯೋತ್ಪಾದನೆಯ ನೆಲೆಗಳು ಎಲ್ಲೇ ಇರಲಿ, ಒಂದು ವೇಳೆ ಅದು ಗಡಿಯಾಚೆಗೆ ಇದ್ದರೂ ಕೂಡಾ, ಅದನ್ನು ತಲುಪಲು ಭಾರತಕ್ಕೆ ಸಾಧ್ಯವಿದೆ ಎಂಬ ಸ್ಪಷ್ಟ ಎಚ್ಚರಿಕೆಯನ್ನು ಈ ಕಾರ್ಯಾಚರಣೆ ನೀಡಿದೆ ಎಂದು ರಕ್ಷಣಾ ಸಚಿವರು ತಿಳಿಸಿದರು.
‘‘ಉರಿ ದಾಳಿಯ ಆನಂತರ ಭಯೋತ್ಪಾದಕ ದಾಳಿಗಳನ್ನು ನಡೆಸಲು ಯತ್ನಿಸಿದವರಿಗೆ ಏನಾಯಿತೆಂಬುದು ಈಗ ಇಡೀ ಜಗತ್ತಿಗೆ ತಿಳಿದಿದೆ. ಪುಲ್ವಾಮಾ ಭಯೋತ್ಪಾದಕ ದಾಳಿಯ ಬಳಿಕ ಬಾಲಕೋಟ್ ನಲ್ಲಿ ವಾಯುದಾಳಿ ನಡೆಯಿತು. ಇದೀಗ ಪಹಲ್ಗಾಮ್ ಘಟನೆಯ ಬಳಿಕ ಪಾಕಿಸ್ತಾನದೊಳಗೆ ಹಲವು ದಾಳಿಗಳನ್ನು ಭಾರತ ನಡೆಸಿರುವುದನ್ನು ಜಗತ್ತು ಕಂಡಿದೆ. ಇದು ಹಳೆಯ ಭಾರತವಲ್ಲ. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ನವ ಭಾರತವು ಶಕ್ತಿ ಹಾಗೂ ನಿಖರತೆಯೊಂದಿಗೆ ಪ್ರತಿಕ್ರಿಯಿಸುತ್ತಿದೆ ’’ಎಂದವರು ಹೇಳಿದರು.
ಭಾರತವು ಸೇನಾ ಕಾರ್ಯಾಚರಣೆಯ ಸಂದರ್ಭದಲ್ಲಿ ಸಾರ್ವಜನಿಕರನ್ನು ಗುರಿಯಿಡುವುದರಿಂದ ದೂರವಿತ್ತು. ಆದರೆ ಪಾಕಿಸ್ತಾನವು ದೇವಾಲಯಗಳು ಹಾಗೂ ಗುರುದ್ವಾರಗಳ ಮೇಲೆ ದಾಳಿ ನಡೆಸಿತ್ತು. ‘‘ ನಮ್ಮ ಪಡೆಗಳು ದಿಟ್ಟತನ ಹಾಗೂ ಸಂಯಮದೊಂದಿಗೆ ಪ್ರತಿಕ್ರಿಯಿಸಿದ್ದು, ನಿಖರವಾಗಿ ನೆಲೆಗಳನ್ನೇ ಗುರಿಯಾಗಿರಿಸಿದ್ದವು’’ ಎಂದು ರಾಜನಾಥ್ ಸಿಂಗ್ ಹೇಳಿದರು.
ಆಪರೇಷನ್ ಸಿಂಧೂರ್ ಬಾರತದ ಏಕೀಕೃತ ರಾಜಕೀಯ, ಸಾಮಾಜಿಕ ಹಾಗೂ ಸೇನಾ ಇಚ್ಛಾಶಕ್ತಿಯ ಸಂಕೇತವಾಗಿದೆ. ಭಾರತ ವಿರೋಧಿ ಶಕ್ತಿಗಳಿಗೆ ಹಾಗೂ ಅವರ ಬೆಂಬಲಿಗರಿಗೆ ರಾವಲ್ಪಿಂಡಿ ಸೇರಿದಂತೆ ಯಾವುದೇ ಸುರಕ್ಷಿತ ತಾಣ ಉಳಿದಿಲ್ಲವೆಂಬ ಸಂದೇಶವನ್ನು ಈ ಕಾರ್ಯಾಚರಣೆಯು ತೋರಿಸಿಕೊಟ್ಟಿದೆ ಎಂದು ರಾಜನಾಥ್ಸಿಂಗ್ ಹೇಳಿದರು.
ಏನಿದು ಬ್ರಹ್ಮೋಸ್?
ಭೂಮಿ, ಸಮುದ್ರ ಹಾಗೂ ಆಗಸದಿಂದ ಉಡಾವಣೆಗೊಳಿಸಲು ಸಾಧ್ಯವಿರುವಂತಹ ಸಾರ್ವತ್ರಿಕ ನಿಖರತೆಯ ಆಕ್ರಮಣ ಕ್ಷಿಪಣಿಯಾಗಿದೆ. ಎಲ್ಲಾ ರೀತಿಯ ಹವಾಮಾನದಲ್ಲಯೂ ರಾತ್ರಿ ಮತ್ತು ಹಗಲುವೇಳೆಲ್ಲೂ ಉಡಾವಣೆಗೊಳಿಸಲು ಸಾಧ್ಯವಿರುವ ರೀತಿಯಲ್ಲಿ ಈ ಕ್ಷಿಪಣಿಯನ್ನು ವಿನ್ಯಾಗೊಳಿಸಲಾಗಿದೆ. ಆಧುನಿಕ ಸಮರಾಂಗಣದಲ್ಲಿ ಸೇನಾಪಡೆಗಳ ಸಾಮರ್ಥ್ಯವನ್ನು ಹಲವು ಪಟ್ಟು ಹೆಚ್ಚಿಸುವಂತಹ ಅಸ್ತ್ರವೆಂಬ ಖ್ಯಾತಿಯನ್ನು ಅದು ಪಡೆದುಕೊಂಡಿದೆ. ಈ ಕ್ಷಿಪಣಿಯು 100ಕ್ಕೂ ಅಧಿಕ ಪರೀಕ್ಷಾ ಉಡಾವಣೆಗಳನ್ನು ನಡೆಸಿದೆ.
ಲಕ್ನೋದಲ್ಲಿ ಸ್ಥಾಪನೆಯಾಗಿರುವ ‘ ಬ್ರಹ್ಮೋಸ್ ಏರೋಸ್ಪೇಸ್ ಇಂಟಿಗ್ರೇಶನ್ ಆ್ಯಂಡ್ ಟೆಸ್ಟಿಂಗ್ ಘಟಕ’ವು ವಾರ್ಷಿಕವಾಗಿ 80ರಿಂದ 100ರಷ್ಟು ಬ್ರಹ್ಮೋಸ್ ಸೂಪಸ್ ಸಾನಿಕ್ ಕ್ರೂಸ್ ಕ್ಷಿಪಣಿಗಳನ್ನು ಉತ್ಪಾದಿಲಿದ್ದು, ಕ್ರಮೇಣ ಅವುಗಳ ಉತ್ಪಾದನೆಯನ್ನು 100 ರಿಂದ 150ಕ್ಕೆ ಹೆಚ್ಚಿಸಲಾಗುವುದು.
ಭಾರತದ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್ಡಿಓ) ಹಾಗೂ ರಶ್ಯದ ಎನ್ಪಿಓ ಮಾಶಿನೊಸ್ಟ್ರೊಯೆನಿಯಾ (ಯಂತ್ರ ನಿರ್ಮಾಣದ ವೈಜ್ಞಾನಿಕ ಉತ್ಪಾದನಾ ಸಂಘ)ದ ಜಂಟಿ ಯೋಜನೆ ಇದಾಗಿದೆ.







