ಹಣ ಅಕ್ರಮ ವರ್ಗಾವಣೆ ಪ್ರಕರಣ | ಈಡಿ ಮುಂದೆ ವಿಚಾರಣೆಗೆ ಹಾಜರಾದ ರಾಬರ್ಟ್ ವಾದ್ರಾ

ಹೊಸದಿಲ್ಲಿ, ಜು. 14: ಬ್ರಿಟನ್ ಮೂಲದ ಶಸ್ತ್ರಾಸ್ತ್ರ ಸಲಹೆಗಾರ ಸಂಜಯ್ ಭಂಡಾರಿ ಹಾಗೂ ಇತರ ಕೆಲವರಿಗೆ ನಂಟು ಹೊಂದಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪತಿ ಹಾಗೂ ಉದ್ಯಮಿ ರಾಬರ್ಟ್ ವಾದ್ರಾ ಅವರು ಸೋಮವಾರ ಜಾರಿ ನಿರ್ದೇಶನಾಲಯದ ಮುಂದೆ ವಿಚಾರಣೆಗೆ ಹಾಜರಾದರು.
56 ವರ್ಷದ ವಾದ್ರಾ ಅವರು ಕೇಂದ್ರ ದಿಲ್ಲಿಯಲ್ಲಿರುವ ಜಾರಿ ನಿರ್ದೇಶನಾಲಯದ ಕಚೇರಿಗೆ ಬೆಳಗ್ಗೆ 11 ಗಂಟೆ ಬಳಿಕ ಆಗಮಿಸಿದರು. ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಜೊತೆಗಿದ್ದರು.
ರಾಬರ್ಟ್ ವಾದ್ರಾ ಅವರ ಹೇಳಿಕೆಯನ್ನು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ದಾಖಲಿಸಿಕೊಳ್ಳಲಾಯಿತು ಎಂದು ಮೂಲಗಳು ತಿಳಿಸಿವೆ.
ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ರಾಬರ್ಟ್ ವಾದ್ರಾ ಅವರಿಗೆ ಕಳೆದ ತಿಂಗಳು ಎರಡು ಬಾರಿ ಸಮನ್ಸ್ ಜಾರಿ ಮಾಡಿತ್ತು. ಆದರೆ, ವಿದೇಶ ಪ್ರಯಾಣದ ಹಿನ್ನೆಲೆಯಲ್ಲಿ ಸಮನ್ಸ್ ಮುಂದೂಡುವಂತೆ ಅವರು ಕೋರಿದ್ದರು.
ಭೂ ವ್ಯವಹಾರದಲ್ಲಿ ಅಕ್ರಮದ ಆರೋಪಕ್ಕೆ ಸಂಬಂಧಿಸಿದ ಎರಡು ಪ್ರಕರಣಗಳು ಸೇರಿದಂತೆ ಮೂರು ವಿವಿಧ ಹಣ ಅಕ್ರಮ ವರ್ಗಾವಣೆ ಪ್ರಕರಣಗಳ ಕುರಿತಂತೆ ಜಾರಿ ನಿರ್ದೇಶನಾಲಯ ರಾಬರ್ಟ್ ವಾದ್ರಾ ಅವರ ವಿಚಾರಣೆ ನಡೆಸುತ್ತಿದೆ.





