ಪುಣೆ ಭೂ ಅವ್ಯವಹಾರ ಪ್ರಕರಣ: ಅಜಿತ್ ಪವಾರ್ ಪುತ್ರನ ಹೆಸರು ಕೈಬಿಟ್ಟ ತನಿಖಾ ಸಮಿತಿ

ಪಾರ್ಥ್ ಪವಾರ್ (Photo credit: ITG)
ಮುಂಬೈ: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಪುತ್ರ ಪಾರ್ಥ್ ಪವಾರ್ ಪಾಲುದಾರರಾಗಿರುವ ಪುಣೆ ಮೂಲದ ಕಂಪೆನಿಯ 300 ಕೋಟಿ ರೂ. ಭೂ ವ್ಯವಹಾರದ ಕುರಿತು ತನಿಖೆ ನಡೆಸುತ್ತಿರುವ ಉನ್ನತ ಮಟ್ಟದ ಸಮಿತಿಯು, ಅಕ್ರಮಗಳಿಗೆ ಸಂಬಂಧಿಸಿ ಮೂರು ಜನರನ್ನು ಹೆಸರಿಸಿದೆ. ಆದರೆ ಪಾರ್ಥ್ ಪವಾರ್ ಬಗ್ಗೆ ಯಾವುದೇ ಉಲ್ಲೇಖವನ್ನು ಮಾಡಿಲ್ಲ ಎಂದು ವರದಿಯಾಗಿದೆ.
ಇನ್ಸ್ಪೆಕ್ಟರ್ ಜನರಲ್ ರಾಜೇಂದ್ರ ಮುಥೆ ನೇತೃತ್ವದ ಸಮಿತಿಯು ಮಂಗಳವಾರ ಈ ಕುರಿತು ವರದಿಯನ್ನು ಸಲ್ಲಿಸಿದೆ. ವರದಿಯಲ್ಲಿ ಪುಣೆಯ ದುಬಾರಿ ಪ್ರದೇಶವಾದ ಮುಂಡ್ವಾದಲ್ಲಿ 40 ಎಕರೆ ಸರಕಾರಿ ಭೂಮಿಯ ಮಾರಾಟ-ಖರೀದಿ ಒಪ್ಪಂದದ ನೋಂದಣಿಯಲ್ಲಿ ಅಕ್ರಮಗಳು ಮತ್ತು ನಿಯಮಗಳ ಉಲ್ಲಂಘನೆ ಕಂಡುಬಂದಿದೆ ಎಂದು ತಿಳಿಸಿದೆ.
ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಪುತ್ರ ಪಾರ್ಥ್ ಪವಾರ್ ಪಾಲುದಾರರಾಗಿರುವ ಅಮಾದಿಯಾ ಎಂಟರ್ ಪ್ರೈಸಸ್ ಎಲ್ಎಲ್ ಪಿ ಕಂಪೆನಿಗೆ ಪುಣೆಯ ಬಳಿ 40 ಎಕರೆ ಮಹರ್ ವತನ್ ಭೂಮಿಯನ್ನು 300 ಕೋಟಿ ರೂಪಾಯಿಗೆ ಮಾರಾಟ ಮಾಡಲಾಗಿದೆ. ಈ ಭೂಮಿಯ ಮಾರಾಟ ದರ 1,800 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.
ಪಾರ್ಥ್ ಪವಾರ್ ಅವರು ಅಮಾದಿಯಾದಲ್ಲಿ ಪಾಲುದಾರರಾಗಿದ್ದಾರೆ. ಆದರೆ ವ್ಯವಹಾರಕ್ಕೆ ಸಂಬಂಧಿಸಿದ ಯಾವುದೇ ದಾಖಲೆಯಲ್ಲಿ ಅವರ ಹೆಸರು ಕಂಡುಬಂದಿಲ್ಲ ಎಂದು ತನಿಖಾ ವರದಿಯಲ್ಲಿ ಹೇಳಲಾಗಿದೆ. ಆದ್ದರಿಂದ ಸಮಿತಿಯು ತನ್ನ ವರದಿಯಲ್ಲಿ ಅವರ ಬಗ್ಗೆ ಯಾವುದೇ ಉಲ್ಲೇಖವನ್ನು ಮಾಡಿಲ್ಲ ಎಂದು ಹೇಳಲಾಗಿದೆ.
ತನಿಖಾ ವರದಿಯಲ್ಲಿ ಅಮಾನತುಗೊಂಡ ಸಬ್ ರಿಜಿಸ್ಟ್ರಾರ್ ರವೀಂದ್ರ ತರು, ಶೀತಲ್ ತೇಜ್ವಾನಿ ಮತ್ತು ಅಮಾದಿಯಾ ಎಂಟರ್ಪ್ರೈಸಸ್ ಪಾಲುದಾರ ದಿಗ್ವಿಜಯ್ ಪಾಟೀಲ್ ಅವರನ್ನು ಅಕ್ರಮಗಳಿಗೆ ಹೊಣೆಗಾರರನ್ನಾಗಿ ಮಾಡಿದೆ. ಪುಣೆ ಪೊಲೀಸರು ಸಲ್ಲಿಸಿದ ಎಫ್ಐಆರ್ನಲ್ಲಿ ಈ ಮೂವರನ್ನು ಆರೋಪಿಗಳೆಂದು ಹೆಸರಿಸಲಾಗಿದೆ.







