500 ಕೋಟಿ ರೂ. ಆಡಿಯೊ ಕ್ಲಿಪ್ ವಿವಾದ: ಶಿಂಧೆ ರಾಜಕೀಯ ಮುಗಿಸಲು ಸಂಚು?
ಜರಂಗೆ–ಬಿಜೆಪಿ ಬಣದ ವಿರುದ್ಧ ಶಿವಸೇನೆ ನಾಯಕ ಕದಮ್ ಆರೋಪ; ಫೊರೆನ್ಸಿಕ್ ತನಿಖೆಗೆ ಫಡ್ನವೀಸ್ ಆದೇಶ

ಏಕನಾಥ್ ಶಿಂಧೆ | ಮನೋಜ್ ಜರಂಗೆ Photo: x.com/NewIndianXpress
ಮುಂಬೈ: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ರಾಜಕೀಯವಾಗಿ ಮುಗಿಸಲು ಬಿಜೆಪಿಯ ಒಂದು ಬಣವು ಮರಾಠ ಮೀಸಲಾತಿ ಹೋರಾಟಗಾರ ಮನೋಜ್ ಜರಂಗೆ ಅವರೊಂದಿಗೆ ಕೈಜೋಡಿಸಿ ಸಂಚು ರೂಪಿಸಿದೆ ಎಂಬ ಆರೋಪ ಮಹಾರಾಷ್ಟ್ರ ರಾಜಕೀಯದಲ್ಲಿ ಹೊಸ ವಿವಾದಕ್ಕೆ ಕಾರಣವಾಗಿದೆ.
ಈ ನಡುವೆ, ಜರಂಗೆ ಬಿಡುಗಡೆ ಮಾಡಿರುವ 500 ಕೋಟಿ ರೂ.ಗೆ ಸಂಬಂಧಿಸಿದ ವಿವಾದಾತ್ಮಕ ಆಡಿಯೊ ಕ್ಲಿಪ್ ಕುರಿತು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಫೊರೆನ್ಸಿಕ್ ತನಿಖೆಗೆ ಆದೇಶಿಸಿದ್ದಾರೆ ಎಂದು timesofindia ವರದಿ ಮಾಡಿದೆ.
ಶಿವಸೇನೆ ಸಂಸದ ಶ್ರೀಕಾಂತ್ ಶಿಂಧೆ ಅವರ ಮೂಲಕ ಜರಂಗೆ ಅವರಿಗೆ 500 ಕೋಟಿ ರೂ. ತಲುಪಿಸಲಾಗಿದೆ ಎಂದು ಹೇಳಲಾದ ಆಡಿಯೊ ಕ್ಲಿಪ್ ನ ಸತ್ಯಾಸತ್ಯತೆ ಪರಿಶೀಲಿಸಲು ವೈಜ್ಞಾನಿಕ ವಿಧಾನಗಳನ್ನು ಬಳಸಲಾಗುವುದು ಎಂದು ಫಡ್ನವೀಸ್ ಶುಕ್ರವಾರ ನಾಗ್ಪುರದಲ್ಲಿ ತಿಳಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಎರಡೂವರೆ ವರ್ಷಗಳ ಬಳಿಕ ಆಡಿಯೊ ಬಹಿರಂಗವೇಕೆ?
ಮಹಾರಾಷ್ಟ್ರ ವಿಧಾನ ಪರಿಷತ್ತಿನ ನಾಗ್ಪುರ ಪದವೀಧರರ ಕ್ಷೇತ್ರಕ್ಕೆ ಮತ ಚಲಾಯಿಸಿದ ಬಳಿಕ ಮಾತನಾಡಿದ ಫಡ್ನವೀಸ್, ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯ ನಿಯೋಗವೊಂದು ತಮ್ಮನ್ನು ಭೇಟಿಯಾಗಿ ತನಿಖೆಗೆ ಮನವಿ ಮಾಡಿದೆ ಎಂದು ಹೇಳಿದರು. ಆಡಿಯೊದಲ್ಲಿ ಹೆಸರು ಕೇಳಿಬಂದಿರುವ ಕೆಲವು ಬಿಜೆಪಿ ನಾಯಕರ ಬಗ್ಗೆಯೂ ಶಿವಸೇನೆ ಪ್ರಶ್ನೆಗಳನ್ನು ಎತ್ತಿದೆ ಎಂದರು.
‘ಎರಡೂವರೆ ವರ್ಷಗಳ ಬಳಿಕ ಈ ಸಂಭಾಷಣೆಗಳು ಈಗ ಏಕೆ ಹೊರಬಂದಿವೆ? ಇವುಗಳ ಹಿಂದಿನ ಉದ್ದೇಶವೇನು? ಯಾರನ್ನು ಗುರಿಯಾಗಿಸಲಾಗುತ್ತಿದೆ? ಯಾವ ಕಾರಣಕ್ಕಾಗಿ? ಈ ವಿಷಯಕ್ಕೆ ಸಂಬಂಧಿಸಿದಂತೆ ಅನೇಕ ಪ್ರಶ್ನೆಗಳಿವೆ’ ಎಂದು ಫಡ್ನವೀಸ್ ಹೇಳಿದರು.
ಶಿವಸೇನೆ, ಬಿಜೆಪಿ ಮತ್ತು ಸ್ವತಃ ಜರಂಗೆ ಕೂಡ ತನಿಖೆಗೆ ಆಗ್ರಹಿಸಿರುವುದರಿಂದ ಫೊರೆನ್ಸಿಕ್ ವಿಧಾನಗಳ ಮೂಲಕ ಕೂಲಂಕಷ ತನಿಖೆ ನಡೆಸಿ ಸತ್ಯಾಂಶವನ್ನು ಬಹಿರಂಗಪಡಿಸಲಾಗುವುದು ಎಂದು ಅವರು ತಿಳಿಸಿದರು.
ಶಿಂಧೆ ಸವಾಲಿನ ಬಳಿಕ ಆಡಿಯೊ ಬಿಡುಗಡೆ
ತಮ್ಮ ಧ್ವನಿಯನ್ನು ಅಡಗಿಸಲು ಮತ್ತು ಮರಾಠ ಮೀಸಲಾತಿ ಹೋರಾಟವನ್ನು ದುರ್ಬಲಗೊಳಿಸಲು ಸಂಚು ರೂಪಿಸಲಾಗಿದೆ ಎಂದು ಆರೋಪಿಸಿ ಜರಂಗೆ ಗುರುವಾರ ಜಲ್ನಾದಲ್ಲಿ ಆಡಿಯೊ ಕ್ಲಿಪ್ ಬಿಡುಗಡೆ ಮಾಡಿದ್ದರು. ಬಿಜೆಪಿಯಿಂದ 500 ಕೋಟಿ ರೂ. ಪಡೆದು ಅದನ್ನು ತಮ್ಮ ಪುತ್ರ ಶ್ರೀಕಾಂತ್ ಶಿಂಧೆ ಅವರ ಮೂಲಕ ಜರಂಗೆ ಅವರಿಗೆ ವರ್ಗಾಯಿಸಿದ್ದಾರೆ ಎಂಬ ಆರೋಪವನ್ನು ಸಾಬೀತುಪಡಿಸುವಂತೆ ಶಿಂಧೆ ಸವಾಲು ಹಾಕಿದ ಬಳಿಕ ಜರಂಗೆ ಈ ಧ್ವನಿಮುದ್ರಣವನ್ನು ಬಹಿರಂಗಪಡಿಸಿದ್ದರು.
ವೈರಲ್ ಆಗಿರುವ ಆಡಿಯೊದಲ್ಲಿ ಶ್ರೀಕಾಂತ್ ಶಿಂಧೆ ಅವರ ಮೂಲಕ ಜರಂಗೆ ಅವರಿಗೆ 500 ಕೋಟಿ ರೂ. ತಲುಪಿಸಲಾಗಿದೆ ಎಂದು ಮಹಿಳೆಯೊಬ್ಬರು ಹೇಳುತ್ತಿರುವುದು ಕೇಳಿಸುತ್ತದೆ.
2024ರ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮರಾಠವಾಡ ಪ್ರದೇಶದಲ್ಲಿ ಜರಂಗೆ ಅವರ ಹೆಚ್ಚುತ್ತಿರುವ ರಾಜಕೀಯ ಪ್ರಭಾವವನ್ನು ತಡೆಯಲು ರೂಪಿಸಬೇಕಾದ ತಂತ್ರಗಳ ಕುರಿತು ಧ್ವನಿಮುದ್ರಣದಲ್ಲಿರುವ ವ್ಯಕ್ತಿಗಳು ಚರ್ಚಿಸುತ್ತಿರುವುದು ಕೇಳಿಸುತ್ತದೆ ಎಂದು ಪಿಟಿಐ ವರದಿ ಮಾಡಿದೆ.
ಬಿಜೆಪಿಯನ್ನು ‘ಮರಾಠ ವಿರೋಧಿ’ ಎಂದು ಬಿಂಬಿಸುವ ಜರಂಗೆ ಅವರ ಪ್ರಚಾರವು ಚುನಾವಣೆಯಲ್ಲಿ ದೊಡ್ಡ ಸವಾಲಾಗಬಹುದು ಎಂದು ಅಭಿಪ್ರಾಯಪಟ್ಟಿರುವ ವ್ಯಕ್ತಿಯೊಬ್ಬರು, ಅವರನ್ನು ಪರೋಕ್ಷವಾಗಿ ಎದುರಿಸುವಂತೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ದಾರೇಕರ್, ಲಾಡ್ ಹೆಸರು ಪ್ರಸ್ತಾಪ
ಆಡಿಯೊ ಕ್ಲಿಪ್ ವಿವಾದದ ಬೆನ್ನಲ್ಲೇ ಜರಂಗೆ ವಿರುದ್ಧ ವಾಗ್ದಾಳಿ ನಡೆಸಿದ ಶಿವಸೇನೆ ನಾಯಕ ರಾಮದಾಸ್ ಕದಮ್, ಅವರು ಮರಾಠ ಸಮುದಾಯವನ್ನು ದಾರಿ ತಪ್ಪಿಸುತ್ತಿದ್ದಾರೆ, ವಿವಿಧ ಗುಂಪುಗಳ ನಡುವೆ ಬಿರುಕು ಮೂಡಿಸುತ್ತಿದ್ದಾರೆ ಮತ್ತು ರಾಜ್ಯ ಸರ್ಕಾರದ ಟೆಂಡರ್ ಪ್ರಕ್ರಿಯೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದರು.
‘ನೀವು ಬಿಜೆಪಿಯೊಂದಿಗೆ ಕೈಜೋಡಿಸಿ, ಮರಾಠ ನಾಯಕರೊಬ್ಬರನ್ನು (ಏಕನಾಥ್ ಶಿಂಧೆ) ಮುಗಿಸಲು ಸಂಚು ರೂಪಿಸುತ್ತಿದ್ದೀರಿ’ ಎಂದು ಕದಮ್ ಹೇಳಿದರು.
ಬಿಜೆಪಿಯಲ್ಲಿ ಶಿಂಧೆ ಅವರನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿರುವವರು ಯಾರು ಎಂದು ಪ್ರಶ್ನಿಸಿದ ಅವರು, ಈ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ಎಂಎಲ್ಸಿಗಳಾದ ಪ್ರವೀಣ್ ದಾರೇಕರ್ ಮತ್ತು ಪ್ರಸಾದ್ ಲಾಡ್ ಅವರ ಹೆಸರುಗಳು ಕೇಳಿಬರುತ್ತಿವೆ ಎಂದು ಉಲ್ಲೇಖಿಸಿದರು. ಇವರಿಬ್ಬರೂ ಮುಖ್ಯಮಂತ್ರಿ ಫಡ್ನವೀಸ್ ಅವರಿಗೆ ಆಪ್ತರಾಗಿದ್ದಾರೆ ಎಂದು ಪರಿಗಣಿಸಲಾಗಿದೆ.
ಪ್ರಸಾದ್ ಲಾಡ್ ಮತ್ತು ಜರಂಗೆ ಒಟ್ಟಿಗೆ ಊಟ ಮಾಡುತ್ತಿರುವ ಫೋಟೊಗಳನ್ನೂ ಕದಮ್ ಪತ್ರಿಕಾಗೋಷ್ಠಿಯಲ್ಲಿ ಪ್ರದರ್ಶಿಸಿದರು.
‘ಬಿಜೆಪಿಯಲ್ಲಿ ಏಕನಾಥ್ ಶಿಂಧೆ ಅವರನ್ನು ಮುಗಿಸಲು ಪ್ರಯತ್ನಿಸುತ್ತಿರುವವರು ಯಾರು?’ ಎಂದು ಅವರು ಪ್ರಶ್ನಿಸಿದರು.
ಆಡಿಯೊ ಕ್ಲಿಪ್ನ ಸಮಗ್ರ ವಿಧಿವಿಜ್ಞಾನ ಪರೀಕ್ಷೆ ನಡೆಸಬೇಕೆಂದು ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, RSS ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಫಡ್ನವೀಸ್ ಅವರಿಗೆ ಪತ್ರ ಬರೆದಿರುವುದಾಗಿ ಮಾಜಿ ಸಚಿವ ಕದಮ್ ತಿಳಿಸಿದರು.
ಜರಂಗೆ ಅವರು ಶಿಂಧೆ ವಿರುದ್ಧ ತಿರುಗಿಬಿದ್ದ ದಿನವೇ ಮರಾಠ ಸಮುದಾಯವು ಜರಂಗೆ ವಿರುದ್ಧ ತಿರುಗಿಬೀಳಲಿದೆ ಎಂದು ಕದಮ್ ಎಚ್ಚರಿಕೆ ನೀಡಿದರು.






