ನೂತನ ಬಿಜೆಪಿ ಅಧ್ಯಕ್ಷರ ಆಯ್ಕೆ ಸಂಬಂಧ ಮೋದಿ-ಶಾ ಜೋಡಿಗೆ ಆರೆಸ್ಸೆಸ್ ತಡೆ ಎಂದ ವರದಿ
ಧರ್ಮೇಂದ್ರ ಪ್ರಧಾನ್ ಅಥವಾ ಭೂಪೇಂದ್ರ ಯಾದವ್ಗಿನ್ನೂ ಅನುಮೋದನೆಯಿಲ್ಲ ?

ನರೇಂದ್ರ ಮೋದಿ ಮತ್ತು ಅಮಿತ್ ಶಾ | PTI
ಹೊಸದಿಲ್ಲಿ: ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾರ ಉತ್ತರಾಧಿಕಾರಿಯನ್ನು ಹೆಸರಿಸುವಲ್ಲಿ ಅತಿಯಾದ ವಿಳಂಬವಾಗುತ್ತಿದೆ. ಯಾರು ಈ ಹುದ್ದೆಗೇರಬೇಕು ಎಂಬ ಬಗ್ಗೆ ಬಿಜೆಪಿ ಮತ್ತು ಅದರ ಮಾತೃಸಂಘಟನೆ ಆರೆಸ್ಸೆಸ್ ನಡುವಿನ ಬಗೆಹರಿಯದ ಬಿಕ್ಕಟ್ಟು ಇದಕ್ಕೆ ಕಾರಣವಾಗಿದೆ ಎಂದು telegraphindia.com ವರದಿ ಮಾಡಿದೆ.
ಮೂಲಗಳು ಸೂಚಿಸಿರುವಂತೆ ಆರೆಸ್ಸೆಸ್ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಅಧ್ಯಕ್ಷ ಹುದ್ದೆಗೆ ಮಾತ್ರ ಸೀಮಿತವಲ್ಲ,ಪಕ್ಷದ ಮೇಲಿನ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಉಕ್ಕಿನ ಹಿಡಿತವನ್ನು ಸಡಿಲಿಸಲು ಬಿಜೆಪಿ ಸಂಘಟನೆಯಲ್ಲಿ ಬದಲಾವಣೆಗಳನ್ನು ಆರೆಸ್ಸೆಸ್ ಸ್ಪಷ್ಟವಾಗಿ ಬಯಸಿದೆ.
ಜು.21ರಂದು ಆರಂಭಗೊಳ್ಳಲಿರುವ ಸಂಸತ್ತಿನ ಮಳೆಗಾಲದ ಅಧಿವೇಶನಕ್ಕೂ ಮುನ್ನ ಪಕ್ಷಕ್ಕೆ ನೂತನ ಅಧ್ಯಕ್ಷರು ಆಯ್ಕೆಯಾಗಲಿದ್ದಾರೆ ಎಂದು ಹಿರಿಯ ಬಿಜೆಪಿ ನಾಯಕರು ಕೆಲವು ವಾರಗಳ ಹಿಂದೆ ಭರವಸೆಯನ್ನು ವ್ಯಕ್ತಪಡಿಸಿದ್ದರು. ಆದರೆ ಅದು ಸದ್ಯೋಭವಿಷ್ಯದಲ್ಲಿ ಸಂಭವಿಸುವ ಲಕ್ಷಣಗಳಿಲ್ಲ ಎಂದು ಮೂಲಗಳು ತಿಳಿಸಿವೆ.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಮತ್ತು ಪರಿಸರ ಸಚಿವ ಭೂಪೇಂದ್ರ ಯಾದವ ಅವರು ಅಧ್ಯಕ್ಷ ಹುದ್ದೆಗೆ ಮೆಚ್ಚಿನ ಅರ್ಭರ್ಥಿಗಳಾಗಿ ಹೊರಹೊಮ್ಮಿದ್ದರು ಮತ್ತು ಪಕ್ಷವು ಈ ತಿಂಗಳ ಆರಂಭದಲ್ಲಿ ಅವರ ಹೆಸರುಗಳನ್ನು ಅನುಮೋದನೆಗಾಗಿ ಆರೆಸ್ಸೆಸ್ ನಾಯಕತ್ವಕ್ಕೆ ಕಳುಹಿಸಿತ್ತು. ಇಬ್ಬರ ಪೈಕಿ ಯಾರದೇ ಹೆಸರನ್ನು ಆರೆಸ್ಸೆಸ್ ಈವರೆಗೆ ಅನುಮೋದಿಸಿಲ್ಲ. ಆರೆಸ್ಸೆಸ್ ಮತ್ತು ಬಿಜೆಪಿ ನಡುವೆ ಇನ್ನಷ್ಟು ಮಾತುಕತೆಗಳು ಮತ್ತು ಚರ್ಚೆಗಳನ್ನು ನಿರೀಕ್ಷಿಸಲಾಗಿದೆ ಎಂದು ಬಿಜೆಪಿಯೊಳಗಿನ ಮೂಲಗಳು ತಿಳಿಸಿವೆ ಎಂದು telegraphindia.com ವರದಿ ಮಾಡಿದೆ.
ಮೋದಿ ಮತ್ತು ಶಾ ಅವರ ರಬ್ಬರ್ ಸ್ಟ್ಯಾಂಪ್ ಆಗಿರುವ ಬದಲು ಪ್ರಬಲ ಸಂಘಟನಾತ್ಮಕ ನಾಯಕ ಪಕ್ಷದ ಅಧ್ಯಕ್ಷನಾಗಬೇಕು ಎನ್ನುವುದು ಸಂಘದ ಆಗ್ರಹವಾಗಿದೆ ಎನ್ನಲಾಗಿದೆ. ಆದರೆ ಮೂರು ಸುತ್ತಿನ ಮಾತುಕತೆಗಳು ನಡೆದಿದ್ದರೂ ಬಿಕ್ಕಟ್ಟು ಬಗೆಹರಿದಿಲ್ಲ.
ಈ ಬಿಕ್ಕಟ್ಟಿನ ನಡುವೆಯೇ ತಾನು ಪಕ್ಕಕ್ಕೆ ಸರಿದು ತಲೆಮಾರು ಬದಲಾವಣೆಗೆ ಅವಕಾಶ ಕಲ್ಪಿಸುವ ಬಗ್ಗೆ ಸ್ವತಃ ಮೋದಿಯವರು ಆಲೋಚಿಸಬೇಕು ಎಂದು ಆರೆಸ್ಸೆಸ್ ಬಯಸಬಹುದು ಎಂಬ ಸೂಚನೆಗಳು ಕಂಡು ಬಂದಿವೆ.
ಕಳೆದ ವಾರ ಆರೆಸ್ಸೆಸ್ ಮುಖ್ಯಸ್ಥ ಮೋಹನ ಭಾಗವತ್ ಅವರು, ನಾಯಕರು ನಿರ್ದಿಷ್ಟ ವಯಸ್ಸನ್ನು ತಲುಪಿದ ಬಳಿಕ ಗೌರವಪೂರ್ವಕವಾಗಿ ಕೆಳಗಿಳಿಯಬೇಕು ಮತ್ತು ಹೊಸ ಪೀಳಿಗೆಗೆ ಅವಕಾಶ ಕಲ್ಪಿಸಬೇಕು ಎಂದು ಸಲಹೆ ನೀಡಿದ್ದು, ಇದು ಅವರು ಮೋದಿಯವರ ನಿವೃತ್ತಿಗೆ ಒತ್ತಡ ಹೇರುತ್ತಿದ್ದಾರೆಯೇ ಎಂಬ ಊಹಾಪೋಹಗಳಿಗೆ ಇಂಬು ನೀಡಿದೆ.
ಬಿಜೆಪಿಯ ಅನಧಿಕೃತ ನಿವೃತ್ತಿ ವಯಸ್ಸು 75 ವರ್ಷಗಳಾಗಿದ್ದು,ಮೋದಿಯವರು ಈ ವರ್ಷದ ಸೆ.17ರಂದು 75 ವರ್ಷಗಳನ್ನು ಪೂರೈಸಲಿದ್ದಾರೆ. ಆದರೆ ಪಕ್ಷದ ನಾಯಕರು ಇಂತಹ ಯಾವುದೇ ವಯೋನಿರ್ಬಂಧವನ್ನು ಅಥವಾ ಅದನ್ನು ಪ್ರಧಾನಿಯವರಿಗೆ ಅನ್ವಯಿಸುವುದನ್ನು ತಳ್ಳಿಹಾಕಿದ್ದಾರೆ.
2029ರ ನಂತರ ಬ್ರ್ಯಾಂಡ್ ಮೋದಿ ಬಿಜೆಪಿಯನ್ನು ಮುನ್ನಡೆಸಲು ಲಭ್ಯವಿರದಿರಬಹುದಾದ ಸಮಯದಲ್ಲಿ ಪಕ್ಷವನ್ನು ಸಜ್ಜುಗೊಳಿಸಲು ಆರೆಸ್ಸೆಸ್ ಬಯಸಿದೆ ಎಂದು ಸಂಘದೊಳಗಿನ ಮೂಲಗಳು ತಿಳಿಸಿವೆ.
2029ರ ನಂತರದ ಅವಧಿಗೆ ಬಿಜೆಪಿಯನ್ನು ಸಜ್ಜುಗೊಳಿಸುವ ಹೊಣೆಗಾರಿಕೆ ನೂತನ ಅಧ್ಯಕ್ಷರ ಮೇಲಿರಲಿದೆ, ಹೀಗಾಗಿ ಹೆಸರು ಅಂತಿಮಗೊಳಿಸುವಲ್ಲಿ ವಿಳಂಬವಾಗುತ್ತಿದೆ. ಕೇಂದ್ರ ಸರಕಾರದಲ್ಲಿ ಮತ್ತು ಕೆಲವು ಬಿಜೆಪಿ ಆಡಳಿತದ ಸರಕಾರಗಳಲ್ಲಿಯೂ ಬದಲಾವಣೆಗಳನ್ನು ಯೋಜಿಸಲಾಗುತ್ತಿದೆ. ಇವೆಲ್ಲದಕ್ಕೂ ಸಮಯ ತೆಗೆದುಕೊಳ್ಳುತ್ತದೆ ಎಂದು ಆರೆಸ್ಸೆಸ್ ನಾಯಕರೋರ್ವರು telegraphindia.com ಗೆ ತಿಳಿಸಿದ್ದಾರೆ.
ಮುಂದಿನ ಬಿಜೆಪಿ ಅಧ್ಯಕ್ಷರು ಪಕ್ಷವನ್ನು ಮೋದಿ-ಶಾ ಜೋಡಿಯ ’ಕಡಿವಾಣವಿಲ್ಲದ ನಿಯಂತ್ರಣ’ದಿಂದ ಮುಕ್ತಗೊಳಿಸಬೇಕು ಮತ್ತು ಮೋದಿ ನಂತರದ ಭವಿಷ್ಯಕ್ಕಾಗಿ ಯುವನಾಯಕರನ್ನು ಉತ್ತೇಜಿಸಬೇಕು ಎಂದು ಸಂಘದ ನಾಯಕತ್ವವು ಬಯಸಿದೆ ಎಂದು ಹಿರಿಯ ಆರೆಸ್ಸೆಸ್ ಮುಖಂಡರೋರ್ವರು ತಿಳಿಸಿದರು.







