ಒಂದು ಡಾಲರ್ ಗೆ 95 ರೂಪಾಯಿ ಆಗಲು 10 ಪೈಸೆ ಮಾತ್ರ ಬಾಕಿ; ಮತ್ತೆ ಕುಸಿದ ರೂಪಾಯಿ ಮೌಲ್ಯ!

ಹೊಸದಿಲ್ಲಿ: ಅಮೆರಿಕದ ಶಾಂತಿ ಪ್ರಸ್ತಾವನೆಗೆ ಇರಾನ್ ನೀಡಿದ ಪ್ರತಿಕ್ರಿಯೆಯನ್ನು ಸೋಮವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಳ್ಳಿ ಹಾಕಿದ್ದರಿಂದ ಮತ್ತೆ ಕಚ್ಚಾ ತೈಲ ಬೆಲೆ ಕ್ಷಿಪ್ರವಾಗಿ ಏರಿಕೆಯಾಗಿದ್ದು, ಅದರ ಪರಿಣಾಮವಾಗಿ ವಿದೇಶಿ ವಿನಿಮಯ ಮಾರುಕಟ್ಟೆಯ ಆರಂಭಿಕ ವಹಿವಾಟಿನಲ್ಲಿ ರೂಪಾಯಿ ಮೌಲ್ಯವು 139 ಪೈಸೆ ನಷ್ಟ ಅನುಭವಿಸಿ ಪ್ರತಿ ಡಾಲರ್ ಎದುರು 94.90 ರೂ.ಗೆ ಕುಸಿಯಿತು.
ವಿದೇಶಿ ವಿನಿಮಯ ವ್ಯಾಪಾರಿಗಳ ಪ್ರಕಾರ, ಅಮೆರಿಕ ಡಾಲರ್ ಬಲವರ್ಧನೆಗೊಂಡಿರುವುದು ಹಾಗೂ ವಿದೇಶಿ ಹೂಡಿಕೆಯ ಹೊರಹರವಿನಿಂದ ರೂಪಾಯಿ ಮೇಲೆ ಮತ್ತಷ್ಟು ಒತ್ತಡ ಸೃಷ್ಟಿಯಾಗಿದೆ.
ಅಂತರ ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಇಂದು ಬೆಳಿಗ್ಗೆ ಅಮೆರಿಕ ಡಾಲರ್ ಎದುರು 94.97 ರೂ.ನಲ್ಲಿ ರೂಪಾಯಿ ಮೌಲ್ಯ ಆರಂಭಗೊಂಡಿತು. ಬಳಿಕ ಕೊಂಚ ಚೇತರಿಕೆ ಕಂಡು 94.90 ರೂ.ಗೆ ತಲುಪಿತು. ಹೀಗಿದ್ದೂ, ಹಿಂದಿನ ದಿನದ ವಹಿವಾಟಿಗೆ ಹೋಲಿಸಿದರೆ 139 ಪೈಸೆಯಷ್ಟು ನಷ್ಟ ಅನುಭವಿಸಿತು.
ಶುಕ್ರವಾರದ ವಹಿವಾಟಿನಲ್ಲಿ ಪ್ರತಿ ಡಾಲರ್ ಎದುರು 71 ಪೈಸೆಯಷ್ಟು ತೀಕ್ಷ್ಣ ಏರಿಕೆ ಕಂಡಿದ್ದ ಭಾರತದ ರೂಪಾಯಿ ಮೌಲ್ಯ, ಪ್ರತಿ ಡಾಲರ್ ಗೆ 93.51 ರೂ.ಗೆ ಅಂತ್ಯಗೊಂಡಿತ್ತು.




