ರೂಪಾಯಿ ದುರ್ಬಲ: ಅತಿದೊಡ್ಡ ಆರ್ಥಿಕತೆ ಪಟ್ಟಿಯಲ್ಲಿ ಆರನೇ ಸ್ಥಾನಕ್ಕೆ ಕುಸಿದ ಭಾರತ

ಸಾಂದರ್ಭಿಕ ಚಿತ್ರ (AI)
ಹೊಸದಿಲ್ಲಿ: ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆ ಎಂಬ ಹೆಗ್ಗಳಿಕೆ ಹೊಂದಿದ್ದ ಭಾರತ, ರೂಪಾಯಿ ಮೌಲ್ಯ ಕುಸಿತದ ಕಾರಣದಿಂದ ಒಂದು ಸ್ಥಾನ ಕುಸಿದು ಆರನೇ ಸ್ಥಾನಕ್ಕೆ ಬಂದಿದೆ. ಜತೆಗೆ ಜಿಡಿಪಿಯ ಮೂಲ ವರ್ಷ ಬದಲಾವಣೆಯಾಗಿರುವುದು ಕೂಡ ಭಾರತಕ್ಕೆ ಪ್ರತಿಕೂಲ ಪರಿಣಾಮ ಬೀರಿದ್ದು, 2025ರಲ್ಲಿ ಭಾರತದ ಸ್ಥಾನ ಆರಕ್ಕೆ ಕುಸಿದಿದೆ ಎಂದು ಐಎಂಎಫ್ ಬಿಡುಗಡೆ ಮಾಡಿದ ಇತ್ತೀಚಿನ ಅಂಕಿ ಅಂಶಗಳಿಂದ ತಿಳಿದುಬಂದಿದೆ.
ಐಎಂಎಫ್ ಅಂಕಿ ಅಂಶಗಳ ಪ್ರಕಾರ ಭಾರತ 2024ರಲ್ಲಿ ಅತಿದೊಡ್ಡ ಆರ್ಥಿಕತೆಗಳ ಪೈಕಿ ಐದನೇ ಸ್ಥಾನದಲ್ಲಿತ್ತು. ಪ್ರಸ್ತುತ ಬೆಲೆಗಳಲ್ಲಿ ಜಿಡಿಪಿ 3.76 ಟ್ರಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದ್ದು, ಬ್ರಿಟನ್ 3.7 ಟ್ರಿಲಿಯನ್ ಡಾಲರ್ ಜಿಡಿಪಿ ಹೊಂದಿತ್ತು. ಆದರೆ ಈ ವರ್ಷ ಭಾರತದ ಜಿಡಿಪಿ 3.92 ಟ್ರಿಲಿಯನ್ ಡಾಲರ್ಗೆ ಏರಿದ್ದು, ಬ್ರಿಟನ್ನ ಜಿಡಿಪಿ 4 ಟ್ರಿಲಿಯನ್ ಡಾಲರ್ಗೆ ಏರಿ ಭಾರತವನ್ನು ಹಿಂದಿಕ್ಕಿದೆ.
ಪ್ರಮುಖ ಆರ್ಥಿಕತೆಗಳಲ್ಲಿ ಅತಿವೇಗವಾಗಿ ಬೆಳೆಯುತ್ತಿರುವ ದೇಶವಾಗಿ ಭಾರತ ತನ್ನ ಸ್ಥಾನ ಉಳಿಸಿಕೊಂಡಿದ್ದರೂ, ಇತ್ತೀಚಿನ ದಿನಗಳಲ್ಲಿ ರೂಪಾಯಿ ಮೌಲ್ಯ ಡಾಲರ್ ಎದುರು ಕುಸಿಯುತ್ತಿದೆ. ಪ್ರಸ್ತುತ ಬೆಲೆಗಳಲ್ಲಿ 2024ರಲ್ಲಿ ಭಾರತದ ಜಿಡಿಪಿ 318 ಲಕ್ಷ ಕೋಟಿ ರೂಪಾಯಿ ಆಗಿದ್ದು, ಇದು ಶೇಕಡ 9ರಷ್ಟು ಏರಿಕೆ ಕಂಡು, ಕಳೆದ ವರ್ಷ 347 ಲಕ್ಷ ಕೋಟಿ ರೂಪಾಯಿಗೆ ಏರಿದೆ. ಇದು 2026ರಲ್ಲಿ ಶೇಕಡ 11ರಷ್ಟು ಏರಿಕೆ ಕಂಡು 385 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗುವ ನಿರೀಕ್ಷೆ ಇದೆ.
ಅಮೆರಿಕ, ಚೀನಾ, ಜರ್ಮನಿ, ಜಪಾನ್ ಹಾಗೂ ಬ್ರಿಟನ್ ಭಾರತಕ್ಕಿಂತ ಮೇಲಿನ ಸ್ಥಾನಗಳಲ್ಲಿವೆ. ಅಮೆರಿಕ ಪ್ರಸ್ತುತ 30.8 ಟ್ರಿಲಿಯನ್ ಡಾಲರ್ ಜಿಡಿಪಿ ಹೊಂದಿದ್ದು, ಚೀನಾ 19.6 ಟ್ರಿಲಿಯನ್ ಡಾಲರ್ನೊಂದಿಗೆ ಎರಡನೇ ಸ್ಥಾನದಲ್ಲಿದೆ. ಜರ್ಮನಿ, ಜಪಾನ್ ಹಾಗೂ ಬ್ರಿಟನ್ ಕ್ರಮವಾಗಿ 5, 4.44 ಹಾಗೂ 4 ಟ್ರಿಲಿಯನ್ ಡಾಲರ್ ಜಿಡಿಪಿ ಹೊಂದಿವೆ.






