Goa| ಎರಡು ಪ್ರತ್ಯೇಕ ಘಟನೆಯಲ್ಲಿ ಇಬ್ಬರು ಮಹಿಳೆಯರನ್ನು ಕತ್ತು ಸೀಳಿ ಕೊಲೆಗೈದ ರಶ್ಯಾ ಪ್ರಜೆ

Photo| indiatoday
ಪಣಜಿ: ಉತ್ತರ ಗೋವಾದಲ್ಲಿ ರಶ್ಯಾದ ಇಬ್ಬರು ಪ್ರಜೆಗಳನ್ನು ಪ್ರತ್ಯೇಕ ಘಟನೆಗಳಲ್ಲಿ ಹತ್ಯೆ ಮಾಡಿದ ಆರೋಪದಲ್ಲಿ ರಶ್ಯಾದ ಪ್ರಜೆಯೋರ್ವನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಲೆಕ್ಸಿ ಲಿಯೊನೊವ್ ಬಂಧಿತ ಆರೋಪಿ. ಈತ ಗುರುವಾರ ರಾತ್ರಿ ಅರಾಂಬೋಲ್ನ ಬಾಡಿಗೆ ಮನೆಯಲ್ಲಿ ಗೆಳತಿ ಎಲೆನಾ ಕಸ್ತನೋವಾ (37) ಎಂಬಾಕೆಯನ್ನು ಕತ್ತು ಸೀಳಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ತನಿಖಾಧಿಕಾರಿಗಳ ಪ್ರಕಾರ, ಲಿಯೊನೊವ್ ಕಸ್ತನೋವಾಳ ಕೈಕಾಲುಗಳನ್ನು ಕಟ್ಟಿ ಕೊಠಡಿಯಲ್ಲಿ ಕೂಡಿ ಹಾಕಲು ಪ್ರಯತ್ನಿಸಿದನು. ಅವಳು ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ, ಅವಳ ಕತ್ತು ಸೀಳಿ ಹತ್ಯೆ ಮಾಡಿದ್ದಾನೆ.
ಘಟನೆ ಬಗ್ಗೆ ಮನೆ ಮಾಲಕ ಉತ್ತಮ್ ನಾಯಕ್ ಗೋವಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದೀಗ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸಕ್ಷೆನ್ಗಳಡಿಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಇದಕ್ಕೆ ಒಂದು ದಿನದ ಹಿಂದೆ ಲಿಯೊನೊವ್ ಮತ್ತೊಬ್ಬ ರಷ್ಯಾದ ಮಹಿಳೆ ಎಲೆನಾ ವನೀವಾ (37) ಅವರನ್ನು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ. ಮೊರ್ಜಿಮ್ನಲ್ಲಿ ಬಾಡಿಗೆ ಮನೆಯ ಕೊಠಡಿಯಲ್ಲಿ ಚಾಕುವಿನಿಂದ ವನೀವಾ ಅವರ ಕತ್ತು ಸೀಳಿ ಹತ್ಯೆ ಮಾಡಲಾಗಿತ್ತು.
ಮೊದಲ ಹತ್ಯೆಯ ನಂತರ, ಲಿಯೊನೊವ್ ಜನವರಿ 15ರ ಸಂಜೆ ಸುಮಾರು ಎಂಟು ಕಿಲೋಮೀಟರ್ ದೂರದಲ್ಲಿರುವ ಅರಂಬೋಲ್ಗೆ ತೆರಳಿ ಕಸ್ತನೋವಾಳನ್ನು ಕೊಲೆ ಮಾಡಿದ್ದಾನೆ. ಪೊಲೀಸರು ಎರಡು ಮೃತದೇಹಗಳನ್ನು ಶುಕ್ರವಾರ ವಶಪಡಿಸಿಕೊಂಡಿದ್ದಾರೆ.
ಮಾಂಡ್ರೆಮ್ ಪೊಲೀಸರು ಆರೋಪಿ ಲಿಯೊನೊವ್ನನ್ನು ಬಂಧಿಸಿದ್ದು, ಜೋಡಿ ಹತ್ಯೆ ಬಗ್ಗೆ ತನಿಖೆಯನ್ನು ನಡೆಸುತ್ತಿದ್ದಾರೆ.







