ರಾಮ ಮಂದಿರ ಪ್ರತಿಷ್ಠಾಪನಾ ಸಮಾರಂಭಕ್ಕೆ ಅಂಬಾನಿ, ಅದಾನಿ, ಸಚಿನ್ ತೆಂಡುಲ್ಕರ್, ಅಮಿತಾಭ್ ಬಚ್ಚನ್ ಸಹಿತ 7000 ಗಣ್ಯರಿಗೆ ಆಹ್ವಾನ

ಸಾಂದರ್ಭಿಕ ಚಿತ್ರ (PTI)
ಅಯ್ಯೋಧ್ಯೆ: ಅಯ್ಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಜವಾಬ್ದಾರಿ ಹೊತ್ತಿರುವ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್, ಜನವರಿ 22, 2024ರಂದು ನಡೆಯಲಿರುವ ಶ್ರೀ ರಾಮ ಮಂದಿರ ಪ್ರತಿಷ್ಠಾಪನಾ ಸಮಾರಂಭಕ್ಕೆ 7000 ಗಣ್ಯರಿಗೆ ಆಮಂತ್ರಣ ನೀಡಿದೆ. ಈ ಗಣ್ಯರಲ್ಲಿ ಕ್ರಿಕೆಟಿಗರಾದ ಸಚಿನ್ ತೆಂಡುಲ್ಕರ್, ವಿರಾಟ್ ಕೊಹ್ಲಿ, ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್, ಉದ್ಯಮಿಗಳಾದ ಮುಕೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಸೇರಿದ್ದಾರೆ.
ಜನಪ್ರಿಯ ಟಿವಿ ಧಾರಾವಾಹಿ ʼರಾಮಾಯಣʼದ ರಾಮ ಮತ್ತು ಸೀತೆ ಪಾತ್ರಧಾರಿಗಳಾದ ಅರುಣ್ ಗೋವಿಲ್ ಮತ್ತು ದೀಪಿಕಾ ಚಿಖ್ಲಿಯಾ ಅವರನ್ನೂ ಆಮಂತ್ರಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯನ್ನು ಟ್ರಸ್ಟ್ ಈಗಾಗಲೇ ಈ ಸಮಾರಂಭಕ್ಕೆ ಆಹ್ವಾನಿಸಿದೆ.
ಟ್ರಸ್ಟ್ ಆಹ್ವಾನ ಕಳಿಸಿರುವ 7000 ಜನರಲ್ಲಿ 3000 ವಿಐಪಿಗಳಿರಲಿದ್ದಾರೆ. ಅಯ್ಯೋಧ್ಯೆಯಲ್ಲಿ ನಡೆದ ಪೊಲೀಸ್ ಗೋಲಿಬಾರಿನಲ್ಲಿ ಮೃತಪಟ್ಟ ಕರಸೇವಕರ ಕುಟುಂಬಗಳನ್ನೂ ಆಹ್ವಾನಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಆಹ್ವಾನಿಸಲ್ಪಟ್ಟಿರುವ ವಿವಿಐಪಿಗಳಲ್ಲಿ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್, ಯೋಗ ಗುರು ರಾಮದೇವ್ ಮತ್ತು ಟಾಟಾ ಸಂಸ್ಥೆಯ ರತನ್ ಟಾಟಾ ಸೇರಿದ್ದಾರೆ.
ದೇಶದ ವಿವಿಧೆಡೆಗಳಿಂದ 4000 ಸಂತರನ್ನೂ ಟ್ರಸ್ಟ್ ಆಹ್ವಾನಿಸಿದೆ.
ಐವತ್ತು ದೇಶಗಳಿಂದ ತಲಾ ಒಬ್ಬ ಪ್ರತಿನಿಧಿಯನ್ನು ಸಮಾರಂಭಕ್ಕೆ ಆಹ್ವಾನಿಸಲೂ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹೇಳಿದ್ದಾರೆ. ನ್ಯಾಯಾಧೀಶರು, ವಿಜ್ಞಾನಿಗಳು, ಸಾಹಿತಿಗಳು ಮತ್ತು ಕವಿಗಳಿಗೂ ಆಹ್ವಾನ ಕಳಿಸಲಾಗಿದೆ. ಸಂತರು, ಅರ್ಚಕರು, ಧಾರ್ಮಿಕ ಮುಖಂಡರು, ಮಾಜಿ ಅಧಿಕಾರಿಗಳು, ನಿವೃತ್ತ ಸೇನಾಧಿಕಾರಿಗಳು, ವಕೀಲರು, ಸಂಗೀತಗಾರರು, ಪದ್ಮ ಶ್ರೀ ಮತ್ತು ಪದ್ಮ ಭೂಷಣ ಪ್ರಶಸ್ತಿ ವಿಜೇತರಿಗೂ ಆಹ್ವಾನ ಕಳಿಸಲಾಗಿದೆ.
ರಾಮ ಮಂದಿರ ಅಭಿಯಾನಕ್ಕೆ ತಮ್ಮ ಪತ್ರಿಕೆಗಳ ಮೂಲಕ ಬೆಂಬಲಿಸಿದ ಪತ್ರಕರ್ತರಿಗೂ ಆಹ್ವಾನ ಕಳಿಸಲಾಗಿದೆ ಎಂದು ವಿಹಿಂಪ ವಕ್ತಾರ ಶರದ್ ಶರ್ಮ ಹೇಳಿದ್ದಾರೆ.
ಒಟ್ಟು 7000 ಆಹ್ವಾನಿತರಲ್ಲಿ, 4000 ಮಂದಿ ಧಾರ್ಮಿಕ ಮುಖಂಡರಿದ್ದಾರೆ. ಕಾರ್ಯಕ್ರಮಕ್ಕೆ ಮುನ್ನ ಆಹ್ವಾನಿತರಿಗೆ ರಿಜಿಸ್ಟ್ರೇಷನ್ ಲಿಂಕ್ ಕಳಿಸಲಾಗುವುದು. ಅವರು ನೋಂದಾಯಿಸಿದ ನಂತರ ಬಾರ್ ಕೋಡ್ ರಚಿಸಲಾಗುವುದು ಹಾಗೂ ಇದನ್ನು ಎಂಟ್ರಿ ಪಾಸ್ ಎಂದು ಪರಿಗಣಿಸಲಾಗುವುದು ಎಂದು ಶರ್ಮ ಹೇಳಿದ್ದಾರೆ.
ಈ ಮಂದಿರದಲ್ಲಿ ಪ್ರತಿಷ್ಠಾಪಿಸಲಾಗುವ ರಾಮ ಲಲ್ಲಾನ ಮೂರ್ತಿ ತಯಾರಿ ಕೆಲಸ ಶೇ 90 ಮುಗಿದಿದೆ, ಅಂತಿಮ ಸ್ಪರ್ಶ ನೀಡಲಾಗುತ್ತಿದೆ. ಮೂರು ಮೂರ್ತಿಗಳನ್ನು ತಯಾರಿಸಲಾಗುತ್ತಿದ್ದು ಇದಕ್ಕಾಗಿ ಕರ್ನಾಟಕ ಮತ್ತು ರಾಜಸ್ಥಾನದ ಶಿಲೆಗಳನ್ನು ಬಳಸಲಾಗುತ್ತಿದೆ. ಈ ಮೂರು ಮೂರ್ತಿಗಳಲ್ಲಿ ಅತ್ಯುತ್ತಮವಾಗಿ ಹೊರಹೊಮ್ಮಿದ ಮೂರ್ತಿಯನ್ನು ಪ್ರತಿಷ್ಠಾಪನೆಗೆ ಬಳಸಲಾಗುವುದು ಎಂದು ಚಂಪತ್ ರಾಯ್ ಹೇಳಿದರು.