ಸಫೀನಾ ಹುಸೇನ್ ರಿಂದ ಸ್ಥಾಪಿತ, ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸುತ್ತಿರುವ ಭಾರತದ 'Educate Girls'ಗೆ ಮ್ಯಾಗ್ಸೆಸೆ ಪ್ರಶಸ್ತಿಯ ಗರಿ

ಸಫೀನಾ ಹುಸೇನ್ (Photo credit: lidji.org)
ಮನಿಲಾ,ಆ.31: ಕುಗ್ರಾಮಗಳಲ್ಲಿ ಶಾಲೆಯಿಂದ ಹೊರಗುಳಿದಿರುವ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸುತ್ತಿರುವ ಭಾರತದ ಲಾಭರಹಿತ ಸಂಸ್ಥೆ 'Educate Girls'ಗೆ 2025ನೇ ಸಾಲಿನ ಪ್ರತಿಷ್ಠಿತ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿಯು ಲಭಿಸಿದೆ.
Educate Girls ರೇಮನ್ ಮ್ಯಾಗ್ಸೆಸೆ ಪ್ರಶಸ್ತಿಗೆ ಆಯ್ಕೆಯಾದ ಮೊದಲ ಭಾರತೀಯ ಸಂಸ್ಥೆಯಾಗಿ ಇತಿಹಾಸವನ್ನು ನಿರ್ಮಿಸಿದೆ ಎಂದು ರೇಮನ್ ಮ್ಯಾಗ್ಸೆಸೆ ಪ್ರಶಸ್ತಿ ಪ್ರತಿಷ್ಠಾನ(ಆರ್ಎಂಎಎಫ್) ರವಿವಾರ ಇಲ್ಲಿ ಹೇಳಿಕೆಯಲ್ಲಿ ತಿಳಿಸಿದೆ.
ನೊಬೆಲ್ ಪ್ರಶಸ್ತಿಗೆ ಏಶ್ಯಾದ ಸಮಾನವೆಂದು ಪರಿಗಣಿಸಲಾಗಿರುವ ರೇಮನ್ ಮ್ಯಾಗ್ಸೆಸೆ ಪ್ರಶಸ್ತಿಯನ್ನು ಏಶ್ಯಾದ ಜನರಿಗೆ ನಿಸ್ವಾರ್ಥ ಸೇವೆಯನ್ನು ಗುರುತಿಸಿ ನೀಡಲಾಗುತ್ತದೆ.
ಮಾಲ್ದೀವ್ಸ್ ನ ಶಾಹಿನಾ ಅಲಿ ಅವರು ತನ್ನ ಪರಿಸರ ಕಾರ್ಯಕ್ಕಾಗಿ ಮತ್ತು ಫಿಲಿಪ್ಪೀನ್ಸ್ ನ ಧರ್ಮಗುರು ಫ್ಲಾವಿಯಾನೊ ಆ್ಯಂಟೊನಿಯೊ ಎಲ್ ವಿಲ್ಲಾನುಯೆವಾ ಅವರು ಮ್ಯಾಗ್ಸೆಸೆ ಪ್ರಶಸ್ತಿಗೆ ಭಾಜನರಾಗಿರುವ ಇತರ ಇಬ್ಬರಲ್ಲಿ ಸೇರಿದ್ದಾರೆ.
ಪ್ರಶಸ್ತಿ ಪುರಸ್ಕೃತರು ಅಧ್ಯಕ್ಷ ರೇಮನ್ ಮ್ಯಾಗ್ಸೆಸೆ ಅವರ ಚಿತ್ರವಿರುವ ಪದಕ, ತಮ್ಮ ಉಲ್ಲೇಖದೊಂದಿಗೆ ಪ್ರಮಾಣಪತ್ರ ಮತ್ತು ನಗದು ಬಹುಮಾನವನ್ನು ಸ್ವೀಕರಿಸಲಿದ್ದಾರೆ ಎಂದು ಹೇಳಿಕೆಯು ತಿಳಿಸಿದೆ.
67ನೇ ರೇಮನ್ ಮ್ಯಾಗ್ಸೆಸೆ ಪ್ರಶಸ್ತಿ ಪ್ರದಾನ ಸಮಾರಂಭವು ನ.7ರಂದು ಮನಿಲಾದ ಮೆಟ್ರೋಪಾಲಿಟನ್ ಥಿಯೇಟರ್ ನಲ್ಲಿ ನಡೆಯಲಿದೆ.
ಸಫೀನಾ ಹುಸೇನ್ ಅವರಿಂದ ಸ್ಥಾಪಿತ Educate Girlsನ್ನು ಬಾಲಕಿಯರು ಮತ್ತು ಯುವತಿಯರಿಗೆ ಶಿಕ್ಷಣದ ಮೂಲಕ ಸಾಂಸ್ಕೃತಿಕ ಏಕತಾನತೆಯನ್ನು ನಿವಾರಿಸಲು,ಅನಕ್ಷರತೆಯ ಬಂಧನದಿಂದ ಅವರನ್ನು ಮುಕ್ತಗೊಳಿಸಲು ಹಾಗೂ ಅವರ ಸಂಪೂರ್ಣ ಮಾನವ ಸಾಮರ್ಥ್ಯವನ್ನು ಸಾಧಿಸಲು ಅವರಲ್ಲಿ ಕೌಶಲ್ಯ,ಧೈರ್ಯ ಮತ್ತು ಕರ್ತೃತ್ವವನ್ನು ಮೈಗೂಡಿಸಲು ಅದರ ಬದ್ಧತೆಗಾಗಿ ಏಶ್ಯಾದ ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕ ಮಾಡಲಾಗಿದೆ ಎಂದು ಆರ್ಎಂಎಎಫ್ ಹೇಳಿಕೆಯಲ್ಲಿ ತಿಳಿಸಿದೆ.
ಲಂಡನ್ ಸ್ಕೂಲ್ ಆಫ್ ಇಕನಾಮಿಕ್ಸ್ ನಲ್ಲಿ ಪದವಿ ಪಡೆದ ಬಳಿಕ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಕೆಲಸ ಮಾಡಿದ್ದ ಸಫೀನಾ ಹುಸೇನ್, ಮಹಿಳಾ ಅನಕ್ಷರತೆಯ ಸವಾಲನ್ನು ಎದುರಿಸುವ ನಿರ್ಧಾರದೊಂದಿಗೆ ಭಾರತಕ್ಕೆ ಮರಳಿದ್ದರು. 2007ರಲ್ಲಿ Educate Girlsನ್ನು ಸ್ಥಾಪಿಸಿದ್ದರು.
ರಾಜಸ್ಥಾನದಲ್ಲಿ ಆರಂಭಗೊಂಡಿದ್ದ Educate Girls ಬಾಲಕಿಯರ ಶಿಕ್ಷಣದ ವಿಷಯದಲ್ಲಿ ಅತ್ಯಂತ ಹಿಂದುಳಿದಿದ್ದ ಸಮುದಾಯಗಳನ್ನು ಗುರುತಿಸಿ, ಶಾಲೆಯಿಂದ ಹೊರಗುಳಿದ ಹೆಣ್ಣುಮಕ್ಕಳನ್ನು ತರಗತಿ ಕೋಣೆಗೆ ಕರೆತಂದಿತು. ಅವರು ಉನ್ನತ ಶಿಕ್ಷಣ ಮತ್ತು ಲಾಭದಾಯಕ ಉದ್ಯೋಗಕ್ಕಾಗಿ ಅರ್ಹತೆಗಳನ್ನು ಪಡೆಯುವವರೆಗೆ ಅವರನ್ನು ಅಲ್ಲಿಯೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಶ್ರಮಿಸಿತ್ತು ಎಂದು ಆರ್ಎಂಎಎಫ್ ಹೇಳಿಕೆಯಲ್ಲಿ ತಿಳಿಸಿದೆ.
ಪ್ರಶಸ್ತಿಯನ್ನು Educate Girls ಮತ್ತು ಭಾರತಕ್ಕೆ ಐತಿಹಾಸಿಕ ಕ್ಷಣ ಎಂದು ಬಣ್ಣಿಸಿದ ಸಫೀನಾ ಹುಸೇನ್, ಈ ಮಾನ್ಯತೆಯು ಭಾರತದ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಕುಗ್ರಾಮದಲ್ಲಿಯ ಓರ್ವ ಬಾಲಕಿಯೊಂದಿಗೆ ಆರಂಭಗೊಂಡಿದ್ದ ಜನಚಾಲಿತ ಆಂದೋಲನದತ್ತ ಜಾಗತಿಕ ಗಮನವನ್ನು ಸೆಳೆಯುತ್ತದೆ ಎಂದು ಹೇಳಿದರು.
ಈ ಹಿಂದೆ ಮ್ಯಾಗ್ಸೆಸೆ ಪ್ರಶಸ್ತಿ ಪಡೆದ ಭಾರತೀಯರಲ್ಲಿ ಸಾಮಾಜಿಕ ಕಾರ್ಯಕರ್ತೆ ಮದರ ಥೆರೆಸಾ(1962), ರಾಜಕಾರಣಿ ಜಯಪ್ರಕಾಶ್ ನಾರಾಯಣ್ (1965), ಚಲನಚಿತ್ರ ನಿರ್ದೇಶಕ ಸತ್ಯಜಿತ್ ರೇ(1967),ಪತ್ರಕರ್ತ ರವೀಶ್ ಕುಮಾರ(2019), ಪರಿಸರ ಕಾರ್ಯಕರ್ತ ಸೋನಮ್ ವಾಂಗ್ಚುಕ್(2018), ರಾಜಕಾರಣಿ ಅರವಿಂದ ಕೇಜ್ರಿವಾಲ್(2006), ಆರ್ಟಿಐ ಕಾರ್ಯಕರ್ತೆ ಆರುಣಾ ರಾಯ್(2000), ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿ(1994) ಮತ್ತು ಪತ್ರಕರ್ತ ಅರುಣ್ ಶೌರಿ(1982) ಸೇರಿದ್ದಾರೆ.







