ದಾವೂದ್ ಇಬ್ರಾಹಿಂ ಆಪ್ತ ಸಲೀಂ ಡೋಲಾ ಭಾರತಕ್ಕೆ ಗಡಿಪಾರು: ದಿಲ್ಲಿ ವಿಮಾನ ನಿಲ್ದಾಣದಲ್ಲಿ ಬಂಧನ

Photo Credit: Interpol
ಹೊಸದಿಲ್ಲಿ,ಎ.28: ಭೂಗತ ಪಾತಕಿ ದಾವೂದ್ ಇಬ್ರಾಹಿಂ ನಿಕಟವರ್ತಿ ಸಲೀಂ ಡೋಲಾನನ್ನು ಭಾರತಕ್ಕೆ ಗಡಿಪಾರು ಮಾಡಲಾಗಿದ್ದು,ಮಂಗಳವಾರ ಬೆಳಗಿನ ಜಾವ ಆತ ದಿಲ್ಲಿ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಲೇ ಗುಪ್ತಚರ ಅಧಿಕಾರಿಗಳು ಬಂಧಿಸಿದ್ದಾರೆ. ಇದರೊಂದಿಗೆ ಭಾರತೀಯ ಭದ್ರತಾ ಮತ್ತು ಗುಪ್ತಚರ ಸಂಸ್ಥೆಗಳು ಮಹತ್ವದ ಯಶಸ್ಸನ್ನು ಸಾಧಿಸಿವೆ.
ಭಾರತೀಯ ಮತ್ತು ಅಂತರರಾಷ್ಟ್ರೀಯ ಗುಪ್ತಚರ ಏಜೆನ್ಸಿಗಳ ಸಮನ್ವಯ ಕಾರ್ಯಾಚರಣೆಯ ಬಳಿಕ ಡೋಲಾನನ್ನು ಇತ್ತೀಚಿಗೆ ತುರ್ಕಿಯದ ರಾಜಧಾನಿ ಇಸ್ತಾಂಬುಲ್ನಲ್ಲಿ ಬಂಧಿಸಲಾಗಿತ್ತು. ಡೋಲಾನನ್ನು ಭಾರೀ ಭದ್ರತೆಯೊಂದಿಗೆ ವಿಶೇಷ ವಿಮಾನದಲ್ಲಿ ದಿಲ್ಲಿಗೆ ಕರೆತರಲಾಗಿತ್ತು.
ಡೋಲಾ ಭೂಗತ ಜಗತ್ತಿನ ಮಾದಕ ದ್ರವ್ಯ ವ್ಯಾಪಾರದಲ್ಲಿ ಮುಖ್ಯ ವ್ಯಕ್ತಿಯಾಗಿದ್ದು, ಅಂದಾಜು 5,000 ಕೋ.ರೂ.ಗೂ ಅಧಿಕ ಮೌಲ್ಯದ ಅಂತರರಾಷ್ಟ್ರೀಯ ಸಿಂಥೆಟಿಕ್ ಡ್ರಗ್ ಸಾಮ್ರಾಜ್ಯವನ್ನು ನಡೆಸುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದರು.
ಡೋಲಾ ಗಡಿಪಾರು ಸುರ್ಧೀ ಕಾಲದಿಂದಲೂ ಮಾದಕ ದ್ರವ್ಯ ನಿಯಂತ್ರಣ ಘಟಕ (ಎನ್ಸಿಬಿ) ಮತ್ತು ಮುಂಬೈ ಪೋಲಿಸರು ನಿಗಾಯಿರಿಸಿದ್ದ ಡಿ-ಕಂಪನಿಯ ಜಾಗತಿಕ ವಿತರಣಾ ಜಾಲವನ್ನು ನಾಶಗೊಳಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ.
ಸದ್ಯ ಅಜ್ಞಾತ ಸ್ಥಳದಲ್ಲಿ ಡೋಲಾನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.
ಮಾದಕ ದ್ರವ್ಯ ಕಳ್ಳಸಾಗಾಣಿಕೆ ಮತ್ತು ಅಕ್ರಮ ಹಣ ವರ್ಗಾವಣೆಯ ಹಲವಾರು ಬಾಕಿಯಿರುವ ಪ್ರಕರಣಗಳಲ್ಲಿ ಮುಂದಿನ ಕಾನೂನು ಕ್ರಮಕ್ಕಾಗಿ ಡೋಲಾನನ್ನು ಶೀಘ್ರವೇ ಎನ್ಸಿಬಿ ಅಥವಾ ಮುಂಬೈ ಪೋಲಿಸರಿಗೆ ಹಸ್ತಾಂತರಿಸುವ ನಿರೀಕ್ಷೆಯಿದೆ.






