ಸಂಭಾಲ್ ಮಸೀದಿ ಸರ್ವೇಕ್ಷಣೆ ಸಂದರ್ಭ ಜನರು ಹಿಂಸಾತ್ಮಕವಾಗಿ ವರ್ತಿಸಿರಲಿಲ್ಲ: ನಾಗರಿಕ ಹಕ್ಕುಗಳ ಸಂಘಟನೆ ವರದಿ ಬಹಿರಂಗ!

PC : PTI
ಹೊಸದಿಲ್ಲಿ: ಉತ್ತರಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ಶಾಹಿ ಜಾಮಾ ಮಸೀದಿಯ ಸರ್ವೇಕ್ಷಣೆಯನ್ನು ನಡೆಸಿದ ಸಂದರ್ಭ ಪ್ರತಿಭಟನೆ ನಡೆಸುತ್ತಿದ್ದ ಜನರು ಹಿಂಸಾತ್ಮಕವಾಗಿ ವರ್ತಿಸಿರಲಿಲ್ಲವೆಂದು ಪ್ರತ್ಯಕ್ಷದರ್ಶಿಗಳು ಹೇಳಿಕೆಗಳು ಹಾಗೂ ವೀಡಿಯೊಗಳು ದೃಢಪಡಿಸಿವೆ.
ಕಳೆದ ನವೆಂಬರ್ನಲ್ಲಿ ಸಂಭಾಲ್ನ ಜಾಮಾ ಮಸೀದಿಯ ಸರ್ವೇಕ್ಷಣೆ ವೇಳೆ ಪ್ರತಿಭಟನಕಾರರು ಹಿಂಸಾಚಾರಕ್ಕಿಳಿದಿದ್ದರೆಂದು ಉತ್ತರಪ್ರದೇಶದ ಸರಕಾರ ನೀಡಿದ್ದ ಅಧಿಕೃತ ಹೇಳಿಕೆಗಿಂತ ಇದು ತೀರಾ ವ್ಯತಿರಿಕ್ತವಾಗಿದೆ.
ಎನ್ಜಿಓ ಸಂಸ್ಥೆ ‘ನಾಗರಿಕ ಹಕ್ಕುಗಳು ಹಾಗೂ ಏಕತೆಯ ರಕ್ಷಣಾ ಸಂಘ ಹಾಗೂ ಏಕತಾ ಅಭಿಯಾನ ‘ಕಾರವಾನೆ ಮೊಹಬ್ಬತ್’ ಈ ವರದಿಯನ್ನು ಬಿಡುಗಡೆಗೊಳಿಸಿದೆ. ಮನೆಗಳಿಗೆ ಅಕ್ರಮ ಪ್ರವೇಶ, ಆಸ್ತಿ ನಾಶ ಹಾಗೂ ಥಳಿತ ಸೇರಿದಂತೆ ಸಂಭಾಲ್ನಲ್ಲಿ ಪೊಲೀಸರು ಅತಿರೇಕದ ಬಲಪ್ರಯೋಗ ಮಾಡಿದ್ದಾರೆಂದು ವರದಿ ತಿಳಿಸಿದೆ.
ನ್ಯಾಯಾಲಯದ ಆದೇಶದಂತೆ ಕಳೆದ ವರ್ಷದ ನವೆಂಬರ್ ನಲ್ಲಿ ಚಂದೌಸಿ ಪಟ್ಟಣದಲ್ಲಿರುವ ಶಾಹಿ ಜಾಮಾ ಮಸೀದಿಯ ಸಮೀಕ್ಷೆ ನಡೆಸುವುದನ್ನು ಸ್ಥಳೀಯ ಮುಸ್ಲಿಮರು ವಿರೋಧಿಸಿದ ಬಳಿಕ ಸ್ಥಳದಲ್ಲಿ ಗಲಭೆ ಭುಗಿಲೆದ್ದಿತು.
ಮಂಗಳವಾರ ಬಿಡುಗಡೆಗೊಳಿಸಲಾದ ಈ ವರದಿಯು ಮಸೀದಿಯ ಸರ್ವೇಕ್ಷಣೆ ಪ್ರಕ್ರಿಯೆ ಹಾಗೂ ಆನಂತರ ನಡೆದ ಘಟನಾವಳಿಗಳ ಬಗ್ಗೆ ಪರಾಮರ್ಶೆ ನಡೆಸಿದೆ. ಸಂಭಾಲ್ ಪುರದ ಜಾಮಾ ಮಸೀದಿಯು ವಾಸ್ತವಿಕವಾಗಿ ಒಂದು ದೇಗಲವಾಗಿತ್ತೆಂದು ಪ್ರತಿಪಾದಿಸಿ, ನವೆಂಬರ್ 19ರಂದು ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಲಾಗಿತ್ತು . ಆ ಬಳಿಕ ನ್ಯಾಯಾಲಯವು ಮಸೀದಿಯ ಸರ್ವೇಕ್ಷಣೆ ನಡೆಸಲು ಆದೇಶಿಸಿತ್ತು ಎಂದು ವರದಿ ತಿಳಿಸಿದೆ.
‘‘ ವಿಚಾರಣಾ ನ್ಯಾಯಾಲಯದಲ್ಲಿ ಉತ್ತರ ಪ್ರದೇಶ ಸರಕಾರವು ಈ ಬಗ್ಗೆ ಯಾವುದೇ ಆಕ್ಷೇಪಗಳನ್ನು ವ್ಯಕ್ತಪಡಿಸಿಲ್ಲ. ಮಸೀದಿಯ ಪ್ರತಿನಿಧಿಗಳ ಅಹವಾಲನ್ನು ಆಲಿಸದೆಯೇ ತೀರ್ಪನ್ನು ನೀಡಲಾಗಿದೆ. ಆನಂತರ ಕೆಲವೇ ತಾಸುಗಳಲ್ಲಿ ಸರ್ವೇಕ್ಷಣೆಯು ಆರಂಭಗೊಂಡಿತು’’ ಎಂದು ವರದಿ ತಿಳಿಸಿದೆ.
ಇದರಿಂದಾಗಿ ಮುಸ್ಲಿಂ ನಿವಾಸಿಗಳಲ್ಲಿ ಸಂದೇಹ ಹಾಗೂ ಅಸಮಾಧಾನ ಮೊಳಕೆಯೊಡೆಯಿತು. ಶಾಂತಿ ಸಮಿತಿ ರಚನೆ ಮತ್ತಿತರ ಪ್ರಮಾಣಿತ ಮುನ್ನೆಚ್ಚರಿಕಾ ನಿಯಾಮವಳಿಗಳನ್ನು ಕೈಗೊಳ್ಳದೆ ಇದ್ದುದು ಉದ್ವಿಗ್ನತೆ ಉಲ್ಬಣಕ್ಕೆ ಕಾರಣವಾಯಿತೆಂದು ವರದಿ ತಿಳಿಸಿದೆ.
ಮಸೀದಿಯಲ್ಲಿದ್ದ ನೀರಿನ ಕೊಳವನ್ನು ಬತ್ತಿಸಿದ್ದುದು, ಅಪಾವಿತ್ರ್ಯದ ಕೃತ್ಯವೆಂದೇ ಹಲವಾರು ಪ್ರತಿಭಟನಕಾರರು ಪರಿಗಣಿಸಿದ್ದರು.
ನವೆಂಬರ್ 24ರಂದು ಪ್ರತಿಭಟನನಿರತರ ಘೋಷಣೆಗಳ ನಡುವೆಯೇ ನಡೆಸಲಾದ ಎರಡನೇ ಸಮೀಕ್ಷೆಯು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿತು.
‘‘ಎರಡನೇ ಸಮೀಕ್ಷೆಯನ್ನು ನ್ಯಾಯಾಲಯದ ಹೊಸ ಆದೇಶವಿಲ್ಲದೆ ನಡೆಸಿದ್ದುದು ಪ್ರಚೋದನಕಾರಿಯಾಗಿತ್ತು ಹಾಗೂ ಭಾರೀ ದೊಡ್ಡ ಮಟ್ಟದಲ್ಲಿ ಪ್ರತಿಭಟನೆಯನ್ನು ಭುಗಿಲೆಬ್ಬಿಸಿತು ’’ ಎಂದು ವರದಿ ಹೇಳಿದೆ.







