ಸನಾತನ ಧರ್ಮ ‘ವಿಕೃತ ಸಿದ್ಧಾಂತ’, ಅದು ದೇಶವನ್ನು ನಾಶ ಮಾಡಿದೆ: ಮಹಾರಾಷ್ಟ್ರ ಶಾಸಕ ಜಿತೇಂದ್ರ ಆವ್ಹಾಡ್

Photo Credit: X/@Awhadspeaks
ಮುಂಬೈ,ಆ.3: ಸನಾತನ ಧರ್ಮವು ‘ಭಾರತವನ್ನು ನಾಶಗೊಳಿಸಿದೆ’ ಎಂದು ಪ್ರತಿಪಾದಿಸಿರುವ ಎನ್ಸಿಪಿ(ಶರದ್ ಪವಾರ್) ಶಾಸಕ ಜಿತೇಂದ್ರ ಆವ್ಹಾಡ್ ಅವರು,ಅದನ್ನು ‘ವಿಕೃತ ಸಿದ್ಧಾಂತ’ ಎಂದು ಬಣ್ಣಿಸಿದ್ದಾರೆ. ಇದು ಮಹಾರಾಷ್ಟ್ರದಲ್ಲಿ ರಾಜಕೀಯ ವಿವಾದವನ್ನು ಹುಟ್ಟುಹಾಕಿದೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಆವ್ಹಾಡ್, 2008ರ ಮಾಲೆಗಾಂವ ಸ್ಫೋಟ ಪ್ರಕರಣದಲ್ಲಿ ಬಿಜೆಪಿ ನಾಯಕಿ ಪ್ರಜ್ಞಾ ಠಾಕೂರ್ ಮತ್ತು ಲೆ.ಕ.ಪ್ರಸಾದ ಪುರೋಹಿತ ಸೇರಿದಂತೆ ಏಳು ಜನರನ್ನು ಖುಲಾಸೆಗೊಳಿಸಿರುವ ವಿಶೇಷ ನ್ಯಾಯಾಲಯದ ತೀರ್ಪಿಗೆ ಪ್ರತಿಕ್ರಿಯಿಸಿದರು.
‘ಸನಾತನ ಧರ್ಮವು ಭಾರತವನ್ನು ನಾಶ ಮಾಡಿದೆ. ಸನಾತನ ಹೆಸರಿನ ಯಾವುದೇ ಧರ್ಮ ಎಂದಿಗೂ ಇರಲಿಲ್ಲ. ನಾವು ಹಿಂದು ಧರ್ಮದ ಅನುಯಾಯಿಗಳು. ನಮ್ಮ ಛತ್ರಪತಿ ಶಿವಾಜಿ ಮಹಾರಾಜರಿಗೆ ಪಟ್ಟಭಿಷೇಕವನ್ನು ನಿರಾಕರಿಸಿದ್ದು ಇದೇ ಸನಾತನ ಧರ್ಮ. ಇದೇ ಸನಾತನ ಧರ್ಮವು ನಮ್ಮ ಛತ್ರಪತಿ ಸಂಭಾಜಿ ಮಹಾರಾಜರನ್ನು ಅವಮಾನಿಸಿತ್ತು’ ಎಂದು ಹೇಳಿದ ಆವ್ಹಾಡ್, ಈ ಸನಾತನ ಧರ್ಮದ ಅನುಯಾಯಿಗಳು ಜಾತಿವಿರೋಧಿ ಕಾರ್ಯಕರ್ತ ಜ್ಯೋತಿರಾವ್ ಫುಲೆ ಅವರ ಹತ್ಯೆಗೆ ಯತ್ನಿಸಿದ್ದರು. ಸಾವಿತ್ರಿಬಾಯಿ ಫುಲೆ ಅವರ ಮೇಲೆ ಸೆಗಣಿ ಮತ್ತು ಹೊಲಸನ್ನು ಎರಚಿದ್ದರು. ಈ ಸನಾತನ ಧರ್ಮವೇ ಶಾಹು ಮಹಾರಾಜರನ್ನು ಕೊಲ್ಲಲು ಸಂಚು ರೂಪಿಸಿತ್ತು. ಅದು ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ನೀರು ಕುಡಿಯಲು ಅಥವಾ ಶಾಲೆಗೆ ಹೋಗಲೂ ಅವಕಾಶವನ್ನು ನೀಡಿರಲಿಲ್ಲ ಎಂದು ಹೇಳಿದರು.
ಅಂಬೇಡ್ಕರ್ ಸನಾತನ ಧರ್ಮದ ವಿರುದ್ಧ ಬಂಡೆದಿದ್ದರು, ಮನುಸ್ಮತಿಯನ್ನು ಸುಟ್ಟುಹಾಕಿದ್ದರು ಮತ್ತು ಅದರ ದಬ್ಬಾಳಿಕೆಯ ಸಂಪ್ರದಾಯಗಳನ್ನು ತಿರಸ್ಕರಿಸಿದ್ದರು. ಸನಾತನ ಧರ್ಮ ಮತ್ತು ಅದರ ಸನಾತನಿ ಸಿದ್ಧಾಂತದ ವಿಕೃತವಾಗಿದೆ ಎಂದು ಬಹಿರಂಗವಾಗಿ ಹೇಳಲು ಯಾರೂ ಭಯಪಡಬಾರದು ಎಂದರು.
► ಸತ್ಯಕ್ಕೆ ಅವಮಾನ: ಬಿಜೆಪಿ
ರವಿವಾರ ಸುದ್ದಿಗಾರರೊಂದಿಗೆ ಮಾತನಾಡುತ್ತ ಆವ್ಹಾಡ್ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಬಿಜೆಪಿ ಸಂಸದ ಸಂಬಿತ ಪಾತ್ರಾ ಅವರು, ಎನ್ಸಿಪಿ(ಎಸ್ಪಿ) ಶಾಸಕರು ಸನಾತನ ಧರ್ಮದ ವಿರುದ್ಧ ಅವಹೇಳನಕಾರಿ ಭಾಷೆಯನ್ನು ಬಳಸಿದ್ದಾರೆ. ಸನಾತನ ಧರ್ಮವು ಭಾರತವನ್ನು ನಾಶಗೊಳಿಸಿದೆ ಮತ್ತು ಸನಾತನ ಧರ್ಮ ಎನ್ನುವುದು ಎಂದಿಗೂ ಇರಲೇ ಇಲ್ಲ ಎಂದು ಆವ್ಹಾಡ್ ಹೇಳಿದ್ದಾರೆ. ಅವರು ಸತ್ಯವನ್ನು ಅವಮಾನಿಸಿದ್ದಾರೆ, ಅವರು ಶಿವ(ಹಿಂದು ದೇವತೆ)ನ ವಿರುದ್ಧ ಮಾತನಾಡಿದ್ದಾರೆ ಮತ್ತು ಭಾರತದ ಸೌಂದರ್ಯವನ್ನು ವಿರೋಧಿಸಿದ್ದಾರೆ. ಎಲ್ಲರನ್ನೂ ಗೌರವಿಸುವುದರಲ್ಲಿ ಭಾರತದ ಸೌಂದರ್ಯ ಅಡಗಿದೆ ಎಂದು ಹೇಳಿದರು.
‘ಇದು ನಿಮ್ಮ ಪಕ್ಷದ ಅಧಿಕೃತ ನಿಲುವೇ ಅಥವಾ ಕೇವಲ ಆವ್ಹಾಡ್ ಅವರ ವೈಯಕ್ತಿಕ ಅಭಿಪ್ರಾಯವೇ ಎಂದು ನಾನಿಂದು ಎಸ್ಪಿ ಅಧ್ಯಕ್ಷ ಶರದ್ ಪವಾರ್ ಮತ್ತು ಅವರ ಪುತ್ರಿ, ಸಂಸದೆಯೂ ಆಗಿರುವ ಸುಪ್ರಿಯಾ ಸುಳೆ ಅವರನ್ನು ಕೇಳಬಯಸುತ್ತೇನೆ’ ಎಂದರು.







