ಕೇಂದ್ರ ಸರಕಾರದ ಸಂಸ್ಕೃತಿ ಸಚಿವಾಲಯದಿಂದ ಸನಾತನ ರಾಷ್ಟ್ರ ಮಹೋತ್ಸವ

ಹೊಸದಿಲ್ಲಿ: ಇತ್ತೀಚಿನ ದಿನಗಳಲ್ಲಿ ಬಲಪಂಥೀಯ ಹಿಂದುತ್ವವಾದಿಗಳ ಗುಂಪು ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಕರೆ ನೀಡುವುದು, ಅಲ್ಪಸಂಖ್ಯಾತ ಸಮುದಾಯಗಳಿಗೆ ನೇರವಾಗಿ ಬೆದರಿಕೆ ಒಡ್ಡುವುದು ಭಾರತದಲ್ಲಿ ಸಾಮಾನ್ಯವಾಗುತ್ತಿದೆ. ಆದರೆ, ಖುದ್ದು ಕೇಂದ್ರ ಸರಕಾರವೇ ದಿಲ್ಲಿಯ ಭಾರತ್ ಮಂಟಪಂನಲ್ಲಿ ಆಯೋಜಿಸಲಾಗಿದ್ದ 'ಸನಾತನ ರಾಷ್ಟ್ರ ಶಂಖನಾದ' ಮಹೋತ್ಸವ ಕಾರ್ಯಕ್ರಮಕ್ಕೆ ಸಹಪ್ರಾಯೋಜಕತ್ವ ವಹಿಸಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಡಿಸೆಂಬರ್ 13 ಹಾಗೂ 14ರಂದು ನಡೆದ ಈ ಕಾರ್ಯಕ್ರಮದಲ್ಲಿ ಹಿಂದೂ ರಾಷ್ಟ್ರ ನಿರ್ಮಾಣ, ಮುಸ್ಲಿಮರನ್ನು ದೊಡ್ಡ ಮಟ್ಟದಲ್ಲಿ ಗಡೀಪಾರು ಮಾಡುವುದು, ಅವರನ್ನು ಮತಾಂತರಗೊಳಿಸುವುದು ಹಾಗೂ ಹಿಂದೂ ರಾಷ್ಟ್ರವನ್ನು ಅಧಿಕೃತವಾಗಿ ಘೋಷಿಸಲು ಭಾರತದ ಸಂವಿಧಾನಕ್ಕೆ ತಿದ್ದುಪಡಿ ತರಬೇಕು ಎಂಬಂತಹ ವಿವಿಧ ಆಗ್ರಹಗಳನ್ನು ಮಂಡಿಸಲಾಯಿತು. ಈ ಕಾರ್ಯಕ್ರಮವನ್ನು ಕೇಂದ್ರ ಸಂಸ್ಕೃತಿ ಸಚಿವಾಲಯ ಮತ್ತು ದಿಲ್ಲಿ ಪ್ರವಾಸೋದ್ಯಮ ಸಚಿವಾಲಯಗಳ ಜಂಟಿ ಸಹಯೋಗದಲ್ಲಿ ‘ಸೇವ್ ಕಲ್ಚರ್ ಸೇವ್ ಭಾರತ್ ಫೌಂಡೇಶನ್’ ಹಾಗೂ ‘ಸನಾತನ ಸಂಸ್ಥೆ’ ಎಂಬ ಎರಡು ಸಂಘಟನೆಗಳು ಆಯೋಜಿಸಿದ್ದವು.
ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದಲ್ಲಿ ಬಲಪಂಥೀಯ ಚಿಂತಕರೊಂದಿಗೆ ಕೇಂದ್ರ ಸಚಿವರಾದ ಗಜೇಂದ್ರ ಸಿಂಗ್ ಶೆಖಾವತ್, ಶ್ರೀಪಾದ್ ನಾಯಕ್, ಸಂಜಯ್ ಸೇಠ್ ಹಾಗೂ ದಿಲ್ಲಿ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಕಪಿಲ್ ಮಿಶ್ರ ಅವರು ಭಾಷಣ ಮಾಡಿದರು. ಸಚಿವರು ಹಾಗೂ ಸರಕಾರವೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕಾರಣ, ಕೆಲವು ಭಾಷಣಕಾರರು ಭಾರತ ಗಣರಾಜ್ಯದ ಮೂಲ ಜಾತ್ಯತೀತ ಬುನಾದಿಗೆ ಸವಾಲೆಸೆಯುವ ಮಾತುಗಳನ್ನು ಬಹಿರಂಗವಾಗಿ ಹೇಳುವಂತಾಯಿತು. ಕಾರ್ಯಕ್ರಮದ ಎಲ್ಲ ಬ್ಯಾನರ್‌ಗಳು ಹಾಗೂ ಪ್ರಚಾರ ಸಾಮಗ್ರಿಗಳಲ್ಲೂ ಕೇಂದ್ರ ಸರಕಾರ ಮತ್ತು ದಿಲ್ಲಿ ಸರಕಾರದ ಹೆಸರು ಹಾಗೂ ಚಿಹ್ನೆಗಳು ಕಾಣಿಸಿಕೊಂಡಿದ್ದವು.
ಡಿ.8ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಸಂಘಟಕರು ಇದರ ಉದ್ದೇಶ ಹಾಗೂ ಧ್ವನಿಯನ್ನು ಬಹಿರಂಗಪಡಿಸಿದ್ದರು. ಈ ಕಾರ್ಯಕ್ರಮವು ಸನಾತನ ರಾಷ್ಟ್ರದ ಪರಿಕಲ್ಪನೆಯನ್ನು ಆವಿಷ್ಕರಿಸುವ ಗುರಿ ಹೊಂದಿರುವ ಎರಡು ದಿನಗಳ ‘ಜ್ಞಾನಗಂಗೆ’ಯಾಗಿದೆ ಎಂದು ಅವರು ಹೇಳಿದ್ದರು.
“ಸನಾತನ ರಾಷ್ಟ್ರ ಕೇವಲ ಒಂದು ಪರಿಕಲ್ಪನೆಯಲ್ಲ; ಅದು ನಮ್ಮ ದೇಶದ ಆತ್ಮ” ಎಂದು ಸನಾತನ ಸಂಸ್ಥೆಯ ಅಧ್ಯಕ್ಷ ಅಭಯ್ ವರ್ಧಕ್ ತಿಳಿಸಿದ್ದರು. ಹಿಂದೂ ರಾಷ್ಟ್ರದ ಪರಿಕಲ್ಪನೆಯನ್ನು ಪ್ರಚಾರ ಮಾಡುವುದು ಹಾಗೂ ಮುಘಲರನ್ನು ದೇಶ ತೊರೆಯುವಂತೆ ಮಾಡಿದ ಮರಾಠ ದೊರೆಗಳ ವೈಭವ ಮತ್ತು ಶೌರ್ಯವನ್ನು ಸಭಿಕರಿಗೆ ಮನವರಿಕೆ ಮಾಡುವುದು ಈ ಕಾರ್ಯಕ್ರಮದ ಉದ್ದೇಶವೆಂದು ಸಂಘಟಕರು ಪ್ರತಿಪಾದಿಸಿದ್ದರು.
ದೇಶಾದ್ಯಂತ ಇರುವ 800ಕ್ಕೂ ಹೆಚ್ಚು ಹಿಂದೂ ಸಂಘಟನೆಗಳ 3,000ಕ್ಕೂ ಅಧಿಕ ನಿಯೋಗದ ಸದಸ್ಯರು ಹಾಗೂ ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಸನಾತನ ಸಂಸ್ಥೆ ತಿಳಿಸಿತ್ತು.
ಸನಾತನ ಸಂಸ್ಥೆಯನ್ನು 1999ರಲ್ಲಿ ಗೋವಾದಲ್ಲಿ ವಶೀಕರಣ ತಜ್ಞ ಜಯಂತ್ ಬಾಲಾಜಿ ಅಠಾವಳೆ ಸ್ಥಾಪಿಸಿದ್ದರು. ಗೌರಿ ಲಂಕೇಶ್ ಹಾಗೂ ಎಂ.ಎಂ. ಕಲಬುರ್ಗಿ ಹತ್ಯೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಸನಾತನ ಸಂಸ್ಥೆಯ ಪಾತ್ರವನ್ನು ಕರ್ನಾಟಕ ಪೊಲೀಸರು ಸದ್ಯ ತನಿಖೆ ನಡೆಸುತ್ತಿದ್ದಾರೆ. ಆದರೆ, ಈ ಹತ್ಯೆಗಳಲ್ಲಿ ತನ್ನ ಯಾವುದೇ ಪಾತ್ರವಿಲ್ಲ ಎಂದು ಈ ಸಂಘಟನೆ ನಿರಂತರವಾಗಿ ನಿರಾಕರಿಸುತ್ತಾ ಬಂದಿದೆ.
ಸಾವರ್ಕರ್ ಹಿಂದುತ್ವವಾದಿ ಸಿದ್ಧಾಂತದ ಹಿಂಬಾಲಕರಾದ ಉದಯ್ ಮಹುರ್ಕರ್ ‘ಸೇವ್ ಕಲ್ಚರ್ ಸೇವ್ ಭಾರತ್ ಫೌಂಡೇಶನ್’ ಸಂಸ್ಥಾಪಕರಾಗಿದ್ದಾರೆ. ಉದಯ್ ಮಹುರ್ಕರ್ ಲೇಖಕರಾಗಿದ್ದು, ಅವರು ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ಹಾಗೂ ಸಾವರ್ಕರ್ ಕುರಿತು ಎರಡು ಕೃತಿಗಳನ್ನು ರಚಿಸಿದ್ದಾರೆ. ಈ ಸಂಘಟನೆ ಭಾರತದ ಸಂಸ್ಕೃತಿಯನ್ನು ಸಂರಕ್ಷಿಸುವ ಹೆಸರಿನಲ್ಲಿ ಒಟಿಟಿ ವೇದಿಕೆಗಳು, ಸಾಮಾಜಿಕ ಮಾಧ್ಯಮಗಳು ಹಾಗೂ ಚಲನಚಿತ್ರಗಳಲ್ಲಿ ಅಶ್ಲೀಲ, ಅಸಭ್ಯ ಮತ್ತು ಲೈಂಗಿಕ ಪ್ರಚೋದಕ ವಿಷಯಗಳ ವಿರುದ್ಧ ಕಟ್ಟುನಿಟ್ಟಿನ ಕಾನೂನು ರಚಿಸಬೇಕು ಎಂದು ಆಗ್ರಹಿಸುತ್ತಾ ಬಂದಿದೆ. ದೇಶದ ಸಂಸ್ಕೃತಿಯನ್ನು ರಕ್ಷಿಸುವ ಹೆಸರಿನಲ್ಲಿ ಭಾರತದಲ್ಲಿ ವಯಸ್ಕ ಚಿತ್ರಗಳನ್ನು ನಿಷೇಧಿಸಬೇಕು ಎಂಬ ಗುರಿಯನ್ನೂ ಈ ಸಂಘಟನೆ ಹೊಂದಿದೆ.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೆಖಾವತ್, “ದೇಶವು ಸಾಂಸ್ಕೃತಿಕ ಪುನರುತ್ಥಾನದ ಯುಗವನ್ನು ಹಾದು ಹೋಗುತ್ತಿದೆ. ರಾಮ ಮಂದಿರವನ್ನು ನೆಲಸಮಗೊಳಿಸಿದ ಶತಮಾನಗಳ ಸಾಂಸ್ಕೃತಿಕ ಕರಾಳತೆಯ ನಂತರ, ಭಾರತದ ಸಂಸ್ಕೃತಿಯ ಸೂರ್ಯ ಮತ್ತೆ ಉದಯಿಸಿದ್ದಾನೆ. ಅದನ್ನು ಈಗ ಮರುನಿರ್ಮಿಸಬೇಕಿದೆ. ಇಡೀ ದೇಶಾದ್ಯಂತ ಭಾರತದ ಸಾಂಸ್ಕೃತಿಕ ಪರಂಪರೆಯ ವೈಭವ ಮತ್ತೆ ಗೋಚರಿಸಲು ಆರಂಭವಾಗಿದೆ” ಎಂದು ಹೇಳಿದರು.
“ರಾಮ ಮಂದಿರದ ನಿರ್ಮಾಣದೊಂದಿಗೆ ಭಾರತದ ನೆಲದಿಂದ ಉದ್ಭವವಾದ ಸಂಸ್ಕೃತಿ, ಅದರ ಮೌಲ್ಯಗಳು ಹಾಗೂ ಜ್ಞಾನವು ಇಡೀ ವಿಶ್ವದಲ್ಲಿ ಹೊಸ ಗೌರವ ಮತ್ತು ಸ್ವೀಕಾರದೊಂದಿಗೆ ಮರುಗುರುತಿಸಲ್ಪಟ್ಟಿವೆ. ನಮ್ಮ ದೇಶವು ಸಾಂಸ್ಕೃತಿಕ ಪುನರುತ್ಥಾನದ ಯುಗವನ್ನು ಹಾದು ಹೋಗುತ್ತಿದೆ” ಎಂದೂ ಅವರು ಹೇಳಿದರು.
ಸಾಂಸ್ಕೃತಿಕ ಪುನರುತ್ಥಾನದ ಸಂಕೇತವಾಗಿ ಪರಿಗಣಿಸಲಾಗಿರುವ ಸನಾತನ ಶಂಖನಾದ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ಅವರು ಸನಾತನ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು.
ಸೌಜನ್ಯ: altnews.in







