"ಟ್ರೋಫಿ ಸ್ವೀಕರಿಸಲು ನಿರಾಕರಿಸಿರುವುದು ‘ನಾಟಕ’": ಸೂರ್ಯಕುಮಾರ್–ನಖ್ವಿ ಕೈಕುಲುವ ವೀಡಿಯೊ ಹಂಚಿಕೊಂಡ ಸಂಜಯ್ ರಾವತ್

Screengrab:X/@rautsanjay61
ಹೊಸದಿಲ್ಲಿ: ಏಷ್ಯಾ ಕಪ್ ಫೈನಲ್ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಜಯಗಳಿಸಿದ ಬಳಿಕ, ಎಸಿಸಿ ಮುಖ್ಯಸ್ಥ ಮೊಹ್ಸಿನ್ ನಖ್ವಿಯಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿದ ಭಾರತೀಯ ಕ್ರಿಕೆಟ್ ತಂಡದ ಕ್ರಮವನ್ನು ಶಿವಸೇನಾ ಸಂಸದ ಸಂಜಯ್ ರಾವತ್ ಸೋಮವಾರ ಟೀಕಿಸಿದರು.
ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ರಾವತ್, ಸರಣಿಯ ಆರಂಭದಲ್ಲಿ ಭಾರತದ ನಾಯಕ ಸೂರ್ಯಕುಮಾರ್ ಯಾದವ್ ನಖ್ವಿಯೊಂದಿಗೆ ಕೈಕುಲುಕುತ್ತಿರುವುದು, ಸಂಭಾಷಣೆ ನಡೆಸುತ್ತಿರುವುದು ಮತ್ತು ಫೋಟೋಗೆ ಪೋಸ್ ನೀಡುತ್ತಿರುವ ದೃಶ್ಯವಿರುವ ವೀಡಿಯೊ ಹಂಚಿಕೊಂಡರು.
“ಕೆಲವು ದಿನಗಳ ಹಿಂದೆ ಪಾಕಿಸ್ತಾನದ ಸಚಿವರೊಂದಿಗೆ ಕೈಕುಲುಕಿ ಫೋಟೋ ತೆಗೆಸಿಕೊಂಡವರು, ಇಂದು ದೇಶಭಕ್ತಿಯ ಹೆಸರಿನಲ್ಲಿ ನಾಟಕ ಮಾಡುತ್ತಿದ್ದಾರೆ. ನಿಜವಾದ ದೇಶಭಕ್ತಿ ಇದ್ದಿದ್ದರೆ, ಪಾಕಿಸ್ತಾನದ ವಿರುದ್ಧ ಮೈದಾನಕ್ಕೇ ಇಳಿಯಬಾರದು” ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.
ನಂತರ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ರಾವತ್, “ಟ್ರೋಫಿ ಸ್ವೀಕರಿಸದಿರುವುದು ಕೇವಲ ನಾಟಕ. ನಾನು ಹಂಚಿದ ವೀಡಿಯೊದಲ್ಲಿ ಕೈಕುಲುಕು, ಚಹಾ ಕುಡಿಯುವುದು, ಫೋಟೋ ತೆಗೆಸಿಕೊಳ್ಳುವುದು ಎಲ್ಲವೂ ಸ್ಪಷ್ಟವಾಗಿದೆ. ಜನರನ್ನು ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ” ಎಂದರು.
ಅವರು ಭಾರತ–ಪಾಕಿಸ್ತಾನ ಪಂದ್ಯವನ್ನು ಸೇನೆ ಮತ್ತು ಪಹಲ್ಗಾಂ ದಾಳಿಯ ಹುತಾತ್ಮರ ಅವಮಾನವೆಂದು ಕರೆದರು. “ಪ್ರಶ್ನೆ ಒಂದೇ – ಪಾಕಿಸ್ತಾನದ ವಿರುದ್ಧ ಆಟವಾಡುವುದೇಕೆ? ಹುತಾತ್ಮ ಸೈನಿಕರ ತ್ಯಾಗವನ್ನು ಗೌರವಿಸುವುದಾದರೆ, ಇಂತಹ ಪ್ರದರ್ಶನ ಬೇಡ” ಎಂದು ಹೇಳಿದರು.
ಈ ಕುರಿತಂತೆ ಆಮ್ ಆದ್ಮಿ ಪಕ್ಷದ ಹಿರಿಯ ನಾಯಕ ಸೌರಭ್ ಭಾರದ್ವಾಜ್ ಕೂಡ ಪ್ರತಿಕ್ರಿಯಿಸಿದ್ದು, “ಸರಣಿಯ ಆರಂಭದಲ್ಲಿ ಪಾಕಿಸ್ತಾನದ ಸಚಿವರೊಂದಿಗೆ ಕೈಕುಲುಕಿ ಫೋಟೋ ತೆಗೆಸಿಕೊಂಡಿದ್ದರು. ಆದರೆ ಭಾರತದಲ್ಲಿ ವಿರೋಧ ವ್ಯಕ್ತವಾದ ಬಳಿಕ ಆಟಗಾರರಿಗೆ ಪ್ರಚಾರಕ್ಕಾಗಿ ಹೊಸ ಸ್ಕ್ರಿಪ್ಟ್ ನೀಡಲಾಗಿದೆ” ಎಂದು ಟೀಕಿಸಿದರು.







