ಪಾಕ್ ಜೊತೆ ನಂಟು ಹೊಂದಿರುವ ಆರೋಪ; ಪುರಾವೆ ತೋರಿಸಲು ಹಿಮಂತ ಬಿಸ್ವ ಶರ್ಮಾ ವಿಫಲ: ಕಾಂಗ್ರೆಸ್ ಸಂಸದ ಗೊಗೊಯ್ ವಾಗ್ದಾಳಿ
“ಐಟಿ ಸೆಲ್ನ ಟ್ರೋಲ್ ಹಾಗೂ ಸಿಎಂ ಹೇಳಿಕೆಯ ನಡುವೆ ಭಿನ್ನತೆಯಿರಬೇಕು”

ಗೌರವ್ ಗೊಗೋಯಿ | PTI
ಗುವಾಹಟಿ: ನನಗೆ ಪಾಕಿಸ್ತಾನದ ಸಂಪರ್ಕವಿದೆ ಎಂದು ಆರೋಪ ಮಾಡಿದ್ದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ, ಅದಕ್ಕೆ ಸಾಕ್ಷ್ಯಾಧಾರ ಒದಗಿಸಲು ವಿಫಲವಾಗಿರುವುದು ಅವರ ಅಮರ್ಥತತೆಯಾಗಿದೆ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಉಪ ನಾಯಕರಾಗಿರುವ ಕಾಂಗ್ರೆಸ್ ಸಂಸದ ಗೌರವ್ ಗೊಗೋಯಿ ವಾಗ್ದಾಳಿ ನಡೆಸಿದ್ದಾರೆ.
ಆದರೆ, ತಾವು ನೆರೆಯ ಪಾಕಿಸ್ತಾನಕ್ಕೆ ನೀಡಿದ್ದ ಭೇಟಿಯ ಕುರಿತು ಯಾವುದೇ ಸ್ಪಷ್ಟೀಕರಣ ನೀಡಲು ನಿರಾಕರಿಸಿದ ಗೌರವ್ ಗೊಗೋಯಿ, ಬಾಕ್ಸಿಂಗ್ ಪಂದ್ಯದ ಅಂತ್ಯದಲ್ಲಿ ದೊರೆಯಲಿರುವ ನಾಕೌಟ್ ಪಂಚ್ ಬಗ್ಗೆ ಜನರು ಸಹನೆಯಿಂದ ಕಾಯಬೇಕು ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
"ರಾಜಕೀಯದಲ್ಲಿ ನನ್ನ ಮೇಲೆ ಬಿಜೆಪಿಯ ಐಟಿ ಸೆಲ್ ನಿರಾಧಾರ ಆರೋಪಗಳನ್ನು ಮಾಡುತ್ತಿರುವುದು ಇದೇನು ಹೊಸತಲ್ಲ. ಆದರೆ, ಒಂದು ರಾಜ್ಯದ ಮುಖ್ಯಮಂತ್ರಿ ಏನಾದರೂ ಅಂತಹ ಆರೋಪಗಳನ್ನು ಮಾಡಿದಾಗ, ನಾವು ಸಾಕ್ಷ್ಯಾಧಾರಗಳಿಗಾಗಿ ಕಾಯುತ್ತೇವೆ. ಐಟಿ ಸೆಲ್ನ ಟ್ರೋಲ್ ಹಾಗೂ ಮುಖ್ಯಮಂತ್ರಿಯೊಬ್ಬರ ಹೇಳಿಕೆಯ ನಡುವೆ ಒಂದಿಷ್ಟಾದರೂ ಭಿನ್ನತೆಯಿರಬೇಕು" ಎಂದು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.
ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಉಪ ನಾಯಕರಾಗಿರುವ ಗೌರವ್ ಗೊಗೋಯಿ ವಿರುದ್ಧ ಮುಗಿಬಿದ್ದಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಹಾಗೂ ಬಿಜೆಪಿ, ಗೌರವ್ ಗೊಗೋಯಿ ಅವರ ಪತ್ನಿ ಬ್ರಿಟಿಷ್ ಪ್ರಜೆಯಾಗಿದ್ದು, ಅವರಿಗೆ ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐಎಸ್ಐನೊಂದಿಗೆ ಸಂಪರ್ಕವಿದೆ ಎಂದು ಆರೋಪಿಸಿತ್ತು.







