ಬಜೆಟ್ ಅಧಿವೇಶನದಲ್ಲಿ ಸಂಸತ್ ಭವನಕ್ಕೆ ಸರ್ಪಗಾವಲು ; 140 ಸಿ ಐ ಎಸ್ ಎಫ್ ಸಿಬ್ಬಂದಿ ನಿಯೋಜನೆ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ : ಸಂಸತ್ನ ಬಜೆಟ್ ಅಧಿವೇಶನ ಜನವರಿ 31ರಂದು ಆರಂಭಗೊಳ್ಳಲಿದ್ದು, ಸಂದರ್ಶಕರ ತಪಾಸಣೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಲಾಗಿದೆ. ಕೇಂದ್ರೀಯ ಕೈಗಾರಿಕಾ ಪಡೆ (ಸಿಐಎಸ್ಎಫ್)ಯ 140 ಸಿಬ್ಬಂದಿಯ ತುಕಡಿಯನ್ನು ಸಂಸತ್ ಭವನ ಸಂಕೀರ್ಣದಲ್ಲಿ ನಿಯೋಜಿಸಲಾಗಿದೆ.
ಕಳೆದ ವರ್ಷದ ಡಿಸೆಂಬರ್ 13ರಂದು ಚಳಿಗಾಲದ ಅಧಿವೇಶನದ ಸಂದರ್ಭ ಲೋಕಸಭೆಯ ಪ್ರೇಕ್ಷಕರ ಗ್ಯಾಲರಿಯಿಂದ ಜಿಗಿದ ಇಬ್ಬರು ಯುವಕರು ಸದನದಲ್ಲಿ ಹೊಗೆಬಾಂಬ್ ಸಿಡಿಸಿದ ಘಟನೆಯ ಹಿನ್ನೆಲೆಯಲ್ಲಿ ಸಂಸತ್ ಭವನ ಸಂಕೀರ್ಣದ ಭದ್ರತಾ ವ್ಯವಸ್ಥೆಯಲ್ಲಿ ಸಮಗ್ರವಾಗಿ ಪುನಾರಚಿಸಲು ಕೇಂದ್ರ ಗೃಹ ಸಚಿವಾಲಯ ಅನುಮತಿ ನೀಡಿತ್ತು.
ಸಂಸತ್ ಭವನದಲ್ಲಿ ಸೋಮವಾರದಿಂದ ನಿಯೋಜಿತರಾಗಿರುವ ಸಿಐಎಸ್ಎಫ್ ಸಿಬ್ಬಂದಿ ಸಂದರ್ಶಕರು ಹಾಗೂ ಅವರ ಸಾಮಾಗ್ರಿಗಳ ಕೂಲಂಕಶ ತಪಾಸಣೆ ನಡೆಸಲಿದ್ದಾರೆ ಹಾಗೂ ಕಟ್ಟಡಕ್ಕೆ ಅಗ್ನಿ ಸುರಕ್ಷತೆಯನ್ನೂ ಒದಗಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.
ಸಿಐಎಸ್ಎಫ್ ತುಕಡಿಯು ಈಗಾಗಲೇ ಅಲ್ಲಿ ನಿಯೋಜಿತರಾಗಿರುವ ಇತರ ಭದ್ರತಾ ಏಜೆನ್ಸಿಗಳೊಂದಿಗೆ ಸಂಸತ್ ಭವನದ ಸಂಕೀರ್ಣದ ಸಮಗ್ರ ಪರಿಚಯವನ್ನು ಮಾಡಿಕೊಳ್ಳಲಿದೆ. ಜನವರಿ 31ರಂದು
ಬಜೆಟ್ ಅಧಿವೇಶನ ಆರಂಭಗೊಳ್ಳುವಾಗ ಕರ್ತವ್ಯ ನಿರ್ವಹಣೆಗೆ ಅವರು ಸರ್ವಸನ್ನದ್ಧರಾಗಲಿದ್ದಾರೆಂದು ಅವು ತಿಳಿಸಿವೆ.
ಸಂಸತ್ ಭವನದಲ್ಲಿ ಇನ್ನು ಮುಂದೆ ವಿಮಾನನಿಲ್ದಾಣ ಮಾದರಿಯ ಭದ್ರತಾ ತಪಾಸಣೆ ವ್ಯವಸ್ಥೆಯಿರುವುದು. ಸಂಸತ್ ಭವನಕ್ಕೆ ಆಗಮಿಸುವ ವ್ಯಕ್ತಿಗಳನ್ನು ದೈಹಿಕವಾಗಿ ಪರಿಶೋಧಿಸಲಾಗುವುದು ಹಾಗೂ ಎಕ್ಸ್ರೇ ಯಂತ್ರಗಳು, ಡಿಟೆಕ್ಟರ್ಗಳ ಮೂಲಕ ಅವರ ಸೊತ್ತುಗಳನ್ನು ತಪಾಸಣೆ ನಡೆಸಲಾಗುವುದು ಎಂದು ಮೂಲಗಳು ತಿಳಿಸಿವೆ.







