"ನಾವು ಸಂಸದರನ್ನಾಗಿ ಮಾಡಿದ್ದರಿಂದ ನಿಮ್ಮ ವಿವಾಹ ನಡೆದಿದೆ": ರಾಘವ್ ಛಡ್ಡಾ ವಿರುದ್ಧ ಆಪ್ ನಾಯಕ ಸೌರಭ್ ಭಾರದ್ವಾಜ್ ವಾಗ್ದಾಳಿ

ರಾಘವ್ ಛಡ್ಡಾ / ಸೌರಭ್ ಭಾರದ್ವಾಜ್ (Photo credit: PTI)
ಹೊಸದಿಲ್ಲಿ: ಬಿಜೆಪಿ ಸೇರ್ಪಡೆ ಹಿನ್ನೆಲೆ ರಾಜ್ಯಸಭಾ ಸಂಸದ ರಾಘವ್ ಛಡ್ಡಾ ವಿರುದ್ಧ ಆಪ್ ಪಕ್ಷದ ದಿಲ್ಲಿ ಘಟಕದ ಮುಖ್ಯಸ್ಥ ಸೌರಭ್ ಭಾರದ್ವಾಜ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಾವು ನಿಮ್ಮನ್ನು ಸಂಸದರನ್ನಾಗಿ ಮಾಡಿದ್ದರಿಂದ ನೀವು ವಿವಾಹವಾಗಿದ್ದೀರಿ ಎಂದು ಹೇಳಿದ್ದಾರೆ.
ಛಡ್ಡಾ ಮತ್ತು ಇತರ ಆರು ಸಂಸದರು ಆಫ್ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದರು.
ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿ, ಆಪ್ ಪಕ್ಷದ ಕಾರ್ಯಪದ್ದತಿಯನ್ನು ‘ಟಾಕ್ಸಿಕ್ ವರ್ಕ್ ಪ್ಲೇಸ್’ಗೆ ಹೋಲಿಕೆ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಆಪ್ ದಿಲ್ಲಿ ಘಟಕದ ಮುಖ್ಯಸ್ಥ ಸೌರಭ್ ಭಾರದ್ವಾಜ್, ಒಬ್ಬ ಉದ್ಯೋಗಿ ಕಂಪೆನಿಯನ್ನು ತೊರೆಯುವಾಗ ಮೂರು ತಿಂಗಳ ನೋಟಿಸ್ ಅವಧಿಯಲ್ಲಿ ಸೇವೆ ಸಲ್ಲಿಸುತ್ತಾನೆ. ಆ ಅವಧಿಯಲ್ಲಿ ಕಂಪೆನಿಯಲ್ಲಿ ಕಲಿತ ಕೆಲಸಗಳನ್ನು ಸರಿಯಾಗಿ ನಿರ್ವಹಿಸಲು ಅವಕಾಶ ಸಿಗುತ್ತದೆ ಎಂದು ಹೇಳಿದ್ದಾರೆ.
"ರಾಘವ್ ಛಡ್ಡಾ ಪಕ್ಷ ಬದಲಾಯಿಸುವುದು ಒಂದು ಕಂಪೆನಿಯಿಂದ ಇನ್ನೊಂದು ಕಂಪೆನಿಗೆ ಕೆಲಸ ಬದಲಾಯಿಸಿದಂತಿದೆ ಎಂದು ಹೇಳುತ್ತಾರೆ. ಉದ್ಯೋಗ ಬದಲಾವಣೆ ಮಾಡುವುದು ಸಹಜ. ಆದರೆ, ಹೊಸ ಉದ್ಯೋಗಕ್ಕೆ ಹೋಗುವಾಗ ಹಳೆಯ ಕಂಪೆನಿಯ ವಿರುದ್ಧ ಸಂಚು ರೂಪಿಸುವುದಿಲ್ಲ" ಎಂದು ಹೇಳಿದ್ದಾರೆ.
ರಾಘವ್ ಛಡ್ಡಾ ಬಿಜೆಪಿ ಜೊತೆ ಸೇರಿ ಪಿತೂರಿ ನಡೆಸಿ ಆಪ್ ಪಕ್ಷದ ವರ್ಚಸ್ಸಿಗೆ ಹಾನಿ ಮಾಡಿದ್ದಾರೆ. AAP ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಿದ್ದರಿಂದಲೇ ಪರಿಣಿತಿ ಚೋಪ್ರಾ ಅವರೊಂದಿಗೆ ಅವರ ವಿವಾಹವಾಯಿತು ಎಂದು ಭಾರದ್ವಾಜ್ ಹೇಳಿದರು.
ರಾಘವ್ ಛಡ್ಡಾ ಮತ್ತು ಪರಿಣಿತಿ ಚೋಪ್ರಾ 2023ರ ಸೆಪ್ಟೆಂಬರ್ ನಲ್ಲಿ ಉದಯಪುರದ ತಾಜ್ ಲೇಕ್ ಪ್ಯಾಲೇಸ್ನಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ವಿವಾಹವಾದರು. ಅವರ ವಿವಾಹದಲ್ಲಿ ದಿಲ್ಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಕೂಡ ಭಾಗವಹಿಸಿದ್ದರು.






