SBIನ 3,897 ಗ್ರಾಹಕರ ಮಾಹಿತಿ ಡಾರ್ಕ್ ವೆಬ್ ಗೆ ಸೋರಿಕೆ | ಕೋರ್ ಬ್ಯಾಂಕಿಂಗ್ ಕಾರ್ಯಾಚರಣೆಗೆ ಅಡ್ಡಿಯಾಗಿಲ್ಲ: ಸ್ಟಾಕ್ ಎಕ್ಸ್ಚೇಂಜ್ ಗೆ ತಿಳಿಸಿದ ಬ್ಯಾಂಕ್
ಮೊಬೈಲ್ ಸಂಖ್ಯೆ, ಜನ್ಮ ದಿನಾಂಕ, ಇಮೇಲ್, ವಿಳಾಸ ಬಹಿರಂಗ; 3.75 ಲಕ್ಷ ದಾಖಲೆಗಳ ಪರಿಶೀಲನೆ ವೇಳೆ ಮಾಹಿತಿ ಪತ್ತೆ

Photo: The Wire
ಹೊಸದಿಲ್ಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಗ್ರಾಹಕರ ಮಾಹಿತಿಗೆ ಸಂಬಂಧಿಸಿದ ಸೈಬರ್ ಸುರಕ್ಷತಾ ಉಲ್ಲಂಘನೆಯನ್ನು ದೃಢಪಡಿಸಿದ್ದು, ಡಾರ್ಕ್ ವೆಬ್ ನಲ್ಲಿ 3,897 ಗ್ರಾಹಕರ ವೈಯಕ್ತಿಕ ಮಾಹಿತಿ ಬಹಿರಂಗಗೊಂಡಿರುವ ಶಂಕೆ ಇದೆ ಎಂದು ತಿಳಿಸಿದೆ.
ಸ್ಟಾಕ್ ಎಕ್ಸ್ಚೇಂಜ್ ಗಳಿಗೆ ಸಲ್ಲಿಸಿರುವ ಮಾಹಿತಿಯಲ್ಲಿ, ಈ ಘಟನೆಯಿಂದ ಬ್ಯಾಂಕಿನ ಪ್ರಮುಖ ಕಾರ್ಯಾಚರಣೆಗಳು, ಆರ್ಥಿಕ ಕಾರ್ಯಕ್ಷಮತೆ ಅಥವಾ ವ್ಯವಹಾರದ ನಿರಂತರತೆಯ ಮೇಲೆ ಯಾವುದೇ ಪರಿಣಾಮವಾಗಿಲ್ಲ ಎಂದು SBI ಸ್ಪಷ್ಟಪಡಿಸಿದೆ.
ಅಕ್ಟೋಬರ್ 16ರಂದು ಬೆದರಿಕೆ ಗುಪ್ತಚರ ಸೇವಾ ಪೂರೈಕೆದಾರರು, ರಕ್ಷಣಾ ಸೈಬರ್ ಸಂಸ್ಥೆ ಹಾಗೂ ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (CERT-In) ಗ್ರಾಹಕರ ದತ್ತಾಂಶ ಸೋರಿಕೆಯ ಶಂಕೆ ಕುರಿತು ಎಚ್ಚರಿಕೆ ನೀಡಿದ್ದವು ಎಂದು ಬ್ಯಾಂಕ್ ತಿಳಿಸಿದೆ.
ಡಾರ್ಕ್ ವೆಬ್ ನಲ್ಲಿ ಪತ್ತೆಯಾದ ಸುಮಾರು 3.75 ಲಕ್ಷ ದಾಖಲೆಗಳ ಪ್ರಾಥಮಿಕ ವಿಶ್ಲೇಷಣೆ ನಡೆಸಿದಾಗ, ವೈಯಕ್ತಿಕವಾಗಿ ಗುರುತಿಸಬಹುದಾದ ಮಾಹಿತಿ (PII) ಹೊಂದಿರುವ 3,897 ಗ್ರಾಹಕರ ದಾಖಲೆಗಳು ಪತ್ತೆಯಾಗಿವೆ. ಈ ದಾಖಲೆಗಳಲ್ಲಿ ಗ್ರಾಹಕರ ನೋಂದಾಯಿತ ಮೊಬೈಲ್ ಸಂಖ್ಯೆಗಳು, ಜನ್ಮ ದಿನಾಂಕಗಳು, ಹೆಸರುಗಳು, ಲಿಂಗ, ಇಮೇಲ್ ವಿಳಾಸಗಳು ಮತ್ತು ವಿಳಾಸಗಳು ಸೇರಿವೆ ಎಂದು ಬ್ಯಾಂಕ್ ತಿಳಿಸಿದೆ.
ಇದಲ್ಲದೆ, ಶಾಖೆ ಮತ್ತು ಗ್ರಾಹಕರ ಮಾಹಿತಿ ಫೈಲ್ ಗಳ ಗುರುತಿನ ಸಂಖ್ಯೆಗಳು, ಲೀಡ್ ಐಡಿಗಳು, ಸಾಲದ ದಾಖಲೆಗಳು ಹಾಗೂ ಇತರ ಸಂಬಂಧಿತ ಫೈಲ್ಗಳಿಗೆ ಸಂಪರ್ಕ ಕಲ್ಪಿಸುವ ಮೆಟಾಡೇಟಾ ಕೂಡ ಸೋರಿಕೆಯಾಗಿರುವ ದಾಖಲೆಗಳಲ್ಲಿದೆ ಎಂದು ಫೈಲಿಂಗ್ ನಲ್ಲಿ ಉಲ್ಲೇಖಿಸಲಾಗಿದೆ.
ಎಸ್ಬಿಐನಲ್ಲಿ ಸಂಭವಿಸಿರಬಹುದಾದ ದತ್ತಾಂಶ ಸೋರಿಕೆಯನ್ನು 'ಇಂಡಿಯಾ ಟುಡೇ ಟೆಕ್' ಅಕ್ಟೋಬರ್ 19ರಂದು ಮೊದಲ ಬಾರಿಗೆ ವರದಿ ಮಾಡಿತ್ತು.
ಕೋರ್ ಬ್ಯಾಂಕಿಂಗ್ ಗೆ ಅಡ್ಡಿಯಾಗಿಲ್ಲ
ಗ್ರಾಹಕರ ಮಾಹಿತಿ ಬಹಿರಂಗಗೊಂಡಿರುವ ಶಂಕೆಯಿದ್ದರೂ, ಬ್ಯಾಂಕಿನ ಪ್ರಮುಖ ಕಾರ್ಯಾಚರಣೆಗಳ ಮೇಲೆ ಯಾವುದೇ ಪರಿಣಾಮವಾಗಿಲ್ಲ ಎಂದು ಎಸ್ಬಿಐ ಹೇಳಿದೆ. ಬ್ಯಾಂಕಿನ ಪ್ರಮುಖ ವ್ಯವಹಾರ ಚಟುವಟಿಕೆಗಳು ಯಾವುದೇ ಅಡಚಣೆಯಿಲ್ಲದೆ ಎಂದಿನಂತೆ ನಡೆಯುತ್ತಿವೆ. ಘಟನೆಯ ಕುರಿತು ಮಾಹಿತಿ ದೊರೆತ ತಕ್ಷಣ ಸೈಬರ್ ಘಟನೆ ಪ್ರತಿಕ್ರಿಯೆ ಮತ್ತು ನಿಯಂತ್ರಣ ಕ್ರಮಗಳನ್ನು ಜಾರಿಗೆ ತರಲಾಗಿದೆ ಎಂದು ಬ್ಯಾಂಕ್ ತಿಳಿಸಿದೆ.
ಬಹಿರಂಗಗೊಂಡಿರುವ ಮಾಹಿತಿಯ ಸತ್ಯಾಸತ್ಯತೆ ಮತ್ತು ಸಂಪೂರ್ಣತೆಯನ್ನು ಪರಿಶೀಲಿಸುವುದು, ಸೋರಿಕೆಯ ಸಂಭಾವ್ಯ ಮೂಲವನ್ನು ಪತ್ತೆಹಚ್ಚುವುದು, ಅದರ ವ್ಯಾಪ್ತಿಯನ್ನು ನಿರ್ಧರಿಸುವುದು ಹಾಗೂ ಗ್ರಾಹಕರು ಮತ್ತು ಬ್ಯಾಂಕಿಗೆ ಎದುರಾಗಬಹುದಾದ ಅಪಾಯಗಳನ್ನು ಅಂದಾಜಿಸುವುದು ಅಗತ್ಯವಾಗಿದೆ ಎಂದು ಎಸ್ಬಿಐ ಹೇಳಿದೆ.
3,897 ಗ್ರಾಹಕರ ದಾಖಲೆಗಳಿಗೆ ಸಂಬಂಧಿಸಿದ ತನಿಖೆ ಮುಂದುವರಿದಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಅನ್ವಯವಾಗುವ ನಿಯಂತ್ರಕ ನಿಯಮಗಳ ಪ್ರಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಬ್ಯಾಂಕ್ ತಿಳಿಸಿದೆ.
3.75 ಲಕ್ಷ ಗ್ರಾಹಕರ ಮಾಹಿತಿ ಪಡೆದಿರುವುದಾಗಿ ಹ್ಯಾಕರ್ ಗಳ ಹೇಳಿಕೆ
'ಸಿರಿಯಸ್ಇಮ್' (Siriusim) ಎಂಬ ಹೆಸರಿನಲ್ಲಿ ಗುರುತಿಸಿಕೊಂಡಿರುವ ಅನಾಮಧೇಯ ಹ್ಯಾಕರ್ ಗುಂಪೊಂದು, SBIನ ಸುಮಾರು 3.75 ಲಕ್ಷ ಗ್ರಾಹಕರಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆದಿರುವುದಾಗಿ ಡಾರ್ಕ್ ವೆಬ್ ನ 'ಬ್ರೀಚ್ಫೋರಮ್ಸ್' (BreachForums) ವೇದಿಕೆಯಲ್ಲಿ ಹೇಳಿಕೊಂಡಿದೆ ಎಂದು 'ಇಂಡಿಯಾ ಟುಡೇ ಟೆಕ್' ವರದಿ ಮಾಡಿತ್ತು. ಆದರೆ, ಈ ಘಟನೆಯಲ್ಲಿ ಭಾಗಿಯಾಗಿರುವ ಹ್ಯಾಕರ್ ಗುಂಪಿನ ಹೆಸರನ್ನು SBI ಅಧಿಕೃತವಾಗಿ ಬಹಿರಂಗಪಡಿಸಿಲ್ಲ.
ಬ್ಯಾಂಕಿಂಗ್ ವಲಯದಲ್ಲಿ ಸೈಬರ್ ಸುರಕ್ಷತೆ ಕುರಿತು ನಿಯಂತ್ರಕ ಸಂಸ್ಥೆಗಳ ನಿಗಾ ಹೆಚ್ಚುತ್ತಿರುವ ಸಂದರ್ಭದಲ್ಲೇ ಈ ಘಟನೆ ನಡೆದಿದೆ. ಜುಲೈನಲ್ಲಿ ಬ್ಯಾಂಕ್ ಆಫ್ ಬರೋಡಾ ತನ್ನ ಗ್ರಾಹಕರಿಗೆ ಸಂಬಂಧಿಸಿದ 1 ಟೆರಾಬೈಟ್ (TB) ದತ್ತಾಂಶ ಸೋರಿಕೆಯಾಗಿರುವುದನ್ನು ದೃಢಪಡಿಸಿತ್ತು.






