ಅಸ್ಸಾಂ | ನಕಲಿ ಎನ್ ಕೌಂಟರ್ ಗಳ ತನಿಖೆಗೆ ಮಾನವ ಹಕ್ಕುಗಳ ಆಯೋಗಕ್ಕೆ ಸುಪ್ರೀಂ ಕೋರ್ಟ್ ಸೂಚನೆ

Supreme Court (PTI file image)
ಗುವಾಹಟಿ: ಅಸ್ಸಾಂನಲ್ಲಿ ಪೊಲೀಸರು 171 ನಕಲಿ ಎನ್ ಕೌಂಟರ್ ನಡೆಸಿದ್ದಾರೆ ಎಂದು ಆರೋಪಿಸಿರುವ ಪ್ರಕರಣಗಳ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ಅಸ್ಸಾಂ ಮಾನವ ಹಕ್ಕುಗಳ ಆಯೋಗಕ್ಕೆ ನಿರ್ದೇಶನ ನೀಡಿದೆ.
ಎನ್ ಕೌಂಟರ್ ಗಳ ಬಗ್ಗೆ ಸ್ವತಂತ್ರ ತನಿಖೆಗೆ ಆದೇಶಿಸಲು ಗುವಾಹಟಿ ಹೈಕೋರ್ಟ್ ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ವಕೀಲ ಆರಿಫ್ ಯಾಸಿನ್ ಜ್ವಾಡರ್ ಅವರು ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು.
ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಎನ್. ಕೋಟೀಶ್ವರ್ ಸಿಂಗ್ ಅವರಿದ್ದ ಪೀಠ, ಆರೋಪವು ಗಂಭೀರವಾಗಿದೆ ಎಂದು ಪರಿಗಣಿಸಿತು. ಎನ್ ಕೌಂಟರ್ ನಿಂದ ಸಂತ್ರಸ್ತರ ಕುಟುಂಬಗಳು ಮುಂದೆ ಬರುವಂತೆ ಸಾರ್ವಜನಿಕ ನೋಟಿಸ್ ಜಾರಿ ಮಾಡುವಂತೆ ಆಯೋಗಕ್ಕೆ ನಿರ್ದೇಶನ ನೀಡಿದೆ. ಸಂತ್ರಸ್ತರ ಮೇಲೆ ಸರಕಾರಿ ಅಧಿಕಾರಿಗಳು ಅತಿಯಾದ ಅಥವಾ ಕಾನೂನುಬಾಹಿರ ಬಲಪ್ರಯೋಗ ಮಾಡುವುದನ್ನು ಕಾನೂನುಬದ್ಧಗೊಳಿಸಲಾಗುವುದಿಲ್ಲ ಎಂದು ಹೇಳಿದೆ.
"ಈ ಘಟನೆಗಳಲ್ಲಿ ಕೆಲವು ನಕಲಿ ಎನ್ ಕೌಂಟರ್ ಗಳನ್ನು ಒಳಗೊಂಡಿರಬಹುದು ಎಂಬ ಆರೋಪ ನಿಜಕ್ಕೂ ಗಂಭೀರವಾಗಿದೆ. ಒಂದು ವೇಳೆ ಅದು ಸಾಬೀತಾದರೆ, ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ಬದುಕುವ ಹಕ್ಕಿನ ಗಂಭೀರ ಉಲ್ಲಂಘನೆಯಾಗುತ್ತದೆ. ನಿಷ್ಪಕ್ಷಪಾತ ತನಿಖೆಯ ನಂತರ ಈ ಪ್ರಕರಣಗಳಲ್ಲಿ ಸತ್ಯಾಂಶ ಹೊರಬರಬಹುದು" ಎಂದು ಪೀಠವು ಹೇಳಿದೆ.
ಅಸ್ಸಾಂನಲ್ಲಿ ನಕಲಿ ಎನ್ ಕೌಂಟರ್ ಗಳ ಬಗ್ಗೆ ಸಲ್ಲಿಸಲಾದ ಅರ್ಜಿಯ ಬಗ್ಗೆ ಸುಪ್ರೀಂ ಕೋರ್ಟ್ನ ಕಳವಳ ವ್ಯಕ್ತಪಡಿಸಿತು. ಆರೋಪಿ ಪೊಲೀಸ್ ಸಿಬ್ಬಂದಿಯ ವಿರುದ್ಧ ಕೊಲೆ ಅಪರಾಧಕ್ಕಾಗಿ ಎಫ್ಐಆರ್ ನೋಂದಾಯಿಸುವಂತೆ ಕೋರಿತು.
ನಕಲಿ ಎನ್ ಕೌಂಟರ್ ಪ್ರಕರಣದ ವಿಚಾರಣೆಯ ಸಂದರ್ಭ ಸಂತ್ರಸ್ತರ ಕುಟುಂಬ ಸದಸ್ಯರು ಭಾಗವಹಿಸಲು ಅವಕಾಶ ಮಾಡಿಕೊಡಬೇಕು. ಈ ನಿಟ್ಟಿನಲ್ಲಿ, ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಸಾರ್ವಜನಿಕ ಸೂಚನೆಯನ್ನು ನೀಡಬೇಕೆಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿತು. ಒಂದು ವೇಳೆ ಹೆಚ್ಚಿನ ತನಿಖೆ ಅಗತ್ಯ ಎಂದು ಕಂಡುಬಂದರೆ ಆಯೋಗವು ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳಲು ಸಂಪೂರ್ಣ ಸ್ವಾತಂತ್ರ್ಯ ಹೊಂದಿರುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಅಸ್ಸಾಂ ಸರಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ತನಿಖೆಗೆ ಆದೇಶ ನೀಡುವುದರಿಂದ ಭಯೋತ್ಪಾದಕ ದಾಳಿಗಳು ಮತ್ತು ಉಗ್ರಗಾಮಿತ್ವದಿಂದ ರಾಷ್ಟ್ರವನ್ನು ರಕ್ಷಿಸಲು ತಮ್ಮ ಪ್ರಾಣವನ್ನು ಪಣಕ್ಕಿಟ್ಟ ಭದ್ರತಾ ಸಿಬ್ಬಂದಿಯ ಮನೋಸ್ಥೈರ್ಯವನ್ನು ಕುಗ್ಗಿಸುತ್ತದೆ ಎಂದು ವಾದಿಸಿದರು







