ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಹ್ವಾನ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂ ಕೋರ್ಟ್ನಲ್ಲಿ ವಜಾ

ಬಾನು ಮುಷ್ತಾಕ್ (Photo credit: AP)
ಹೊಸದಿಲ್ಲಿ: ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಡೆಯಲಿರುವ ದಸರಾ ಉತ್ಸವದ ಉದ್ಘಾಟನೆಗೆ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಹಾಗೂ ಸಂದೀಪ್ ಮೆಹ್ತಾ ಅವರಿದ್ದ ಪೀಠವು ಅರ್ಜಿದಾರರ ವಾದವನ್ನು ಆಲಿಸಿದ ಬಳಿಕ ಯಾವುದೇ ವಿಚಾರಣೆಗೆ ಅಗತ್ಯವಿಲ್ಲವೆಂದು ಹೇಳಿ ಅರ್ಜಿಯನ್ನು ತಳ್ಳಿಹಾಕಿತು.
ಅರ್ಜಿದಾರರ ಪರ ಹಿರಿಯ ವಕೀಲ ಪಿ.ಬಿ. ಸುರೇಶ್, “ಹಿಂದೂಯೇತರರಿಗೆ ದೇವಾಲಯದೊಳಗೆ ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗವಹಿಸಲು ಅವಕಾಶ ಇಲ್ಲ” ಎಂದು ವಾದಿಸಿದರು. ಆದರೆ ನ್ಯಾಯಮೂರ್ತಿಗಳು ಮೂರು ಬಾರಿ ಸ್ಪಷ್ಟವಾಗಿ “ವಜಾಗೊಳಿಸಲಾಗಿದೆ” ಎಂದು ಘೋಷಿಸಿದರು. “ನಾವು ಮೂರೂ ಸಲ ವಜಾ ಎಂದಿದ್ದೇವೆ, ಇನ್ನೇನು ಬೇಕು?” ಎಂದು ನ್ಯಾಯಮೂರ್ತಿ ನಾಥ್ ಟೀಕಿಸಿದರು.
ಇದಕ್ಕೂ ಮೊದಲು, ಸೆಪ್ಟೆಂಬರ್ 15ರಂದು, ಕರ್ನಾಟಕ ಹೈಕೋರ್ಟ್ ಕೂಡ ಅರ್ಜಿಯನ್ನು ವಜಾ ಮಾಡಿತ್ತು.
ಹೈಕೋರ್ಟ್ ತೀರ್ಪಿನಲ್ಲಿ, ಬಾನು ಮುಷ್ತಾಕ್ ಒಬ್ಬ ಸಾಧನೆಗೈದ ಲೇಖಕಿ, ವಕೀಲೆ ಮತ್ತು ಸಾಮಾಜಿಕ ಕಾರ್ಯಕರ್ತೆ. ಅವರ ಹಾರ್ಟ್ ಲ್ಯಾಂಪ್ ಸಂಕಲನವು ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ಪಡೆದಿದೆ. ಧರ್ಮ ಬೇರೆ ಇದ್ದರೂ ಸಾರ್ವಜನಿಕ ಹಬ್ಬಗಳಲ್ಲಿ ಪಾಲ್ಗೊಳ್ಳುವುದರಿಂದ ಸಾಂವಿಧಾನಿಕ ಹಕ್ಕು ಉಲ್ಲಂಘನೆ ಆಗುವುದಿಲ್ಲ ಎಂದು ಹೇಳಲಾಗಿತ್ತು.
ರಾಜ್ಯ ಸರ್ಕಾರದ ವಾದವನ್ನು ಅಂಗೀಕರಿಸಿದ ಹೈಕೋರ್ಟ್, ದಸರಾ ಉತ್ಸವವನ್ನು ಸರ್ಕಾರವೇ ಆಯೋಜಿಸುತ್ತಿದ್ದು, ಇದು ಧಾರ್ಮಿಕ ಸಂಸ್ಥೆಯ ಕಾರ್ಯಕ್ರಮವಲ್ಲವೆಂದು ಸ್ಪಷ್ಟಪಡಿಸಿತ್ತು.
ಪ್ರತಿ ವರ್ಷ ಸಾಧನೆಗೈದ ವಿಜ್ಞಾನಿಗಳು, ಶಿಕ್ಷಣ ತಜ್ಞರು, ಲೇಖಕರು ಮತ್ತು ಸ್ವಾತಂತ್ರ್ಯ ಹೋರಾಟಗಾರರನ್ನು ಆಹ್ವಾನಿಸುವುದು ಸಂಪ್ರದಾಯವಾಗಿದೆ ಎಂದು ಕೋರ್ಟ್ ಉಲ್ಲೇಖಿಸಿತ್ತು.
ಈ ಹಿನ್ನೆಲೆಯಲ್ಲಿ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸುವ ರಾಜ್ಯ ಸರ್ಕಾರದ ನಿರ್ಧಾರದಲ್ಲಿ ಯಾವುದೇ ಕಾನೂನು ಅಥವಾ ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆ ಇಲ್ಲವೆಂದು ಸುಪ್ರೀಂ ಕೋರ್ಟ್ ಅಂತಿಮವಾಗಿ ತೀರ್ಮಾನಿಸಿದೆ.
ಅರ್ಜಿದಾರರ ಪರ ಹಿರಿಯ ವಕೀಲ ಪಿ ಬಿ ಸುರೇಶ್, ನಿಧಿ ಸಹಾಯ್ ಹಾಗೂ ವಕೀಲರಾದ ವಿಪಿನ್ ನಾಯರ್, ಸುಘೋಷ್ ಸುಬ್ರಮಣ್ಯಂ, ದೀಕ್ಷಾ ಗುಪ್ತಾ, ಪುಷ್ಪಿತಾ ಬಸಕ್, ಎಂ.ಬಿ. ರಮ್ಯಾ ಮತ್ತು ಆದಿತ್ಯ ನರೇಂದ್ರನಾಥ್ ಉಪಸ್ಥಿತರಿದ್ದರು.







