ಪಶ್ಚಿಮ ಬಂಗಾಳ | SIR ಕರ್ತವ್ಯದಲ್ಲಿದ್ದ ಅಧಿಕಾರಿಗಳನ್ನು ಒತ್ತಾಯಾಳಾಗಿಟ್ಟ ಗುಂಪು: ಸುಪ್ರೀಂಕೋರ್ಟ್ ಕಳವಳ

Photo credit: PTI
ಹೊಸದಿಲ್ಲಿ: ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಮತದಾರರ ಪಟ್ಟಿಯಿಂದ ತಮ್ಮ ಹೆಸರನ್ನು ತೆಗೆದುಹಾಕಲಾಗಿದೆ ಎಂದು ಆರೋಪಿಸಿ ಮತದಾರರ ಗುಂಪೊಂದು ನ್ಯಾಯಾಂಗ ಅಧಿಕಾರಿಗಳನ್ನು 9 ಗಂಟೆಗಳಿಗೂ ಹೆಚ್ಚು ಕಾಲ ಒತ್ತೆಯಾಳಾಗಿಟ್ಟಿರುವ ಘಟನೆಗೆ ಸಂಬಂಧಿಸಿ ಸುಪ್ರೀಂಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಅವರ ಸುರಕ್ಷತೆಗಾಗಿ ಕೇಂದ್ರೀಯ ಪಡೆಗಳನ್ನು ನಿಯೋಜಿಸುವಂತೆ ನಿರ್ದೇಶಿಸಿದೆ.
ಪಶ್ಚಿಮ ಬಂಗಾಳವನ್ನು "ಅತ್ಯಂತ ಧ್ರುವೀಕೃತ ರಾಜ್ಯ" ಎಂದು ಕರೆದ ಸುಪ್ರೀಂ ಕೋರ್ಟ್, ಈ ಘಟನೆಯನ್ನು ಪೂರ್ವ ಯೋಜಿತ ಮತ್ತು SIR ಪ್ರಕ್ರಿಯೆಯನ್ನು ಹಳಿತಪ್ಪಿಸಲು ಮಾಡಲಾಗಿದೆ ಎಂದು ಹೇಳಿದರು.
ಎಸ್ಐಆರ್ ಸಮಯದಲ್ಲಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಲಾಗಿದೆ ಎಂದು ಆರೋಪಿಸಿ ಕಲಿಯಾಚಕ್ II ಬಿಡಿಒ ಕಚೇರಿ ಹೊರಗೆ ಬೃಹತ್ ಪ್ರತಿಭಟನೆ ನಡೆದಿತ್ತು. ಪ್ರತಿಭಟನಾಕಾರರು ಅಧಿಕಾರಿಗಳೊಂದಿಗೆ ಸಭೆ ನಡೆಸಲು ಪ್ರಯತ್ನಿಸಿದರು. ಆದರೆ, ಅವರ ವಿನಂತಿಯನ್ನು ನಿರಾಕರಿಸಲಾಗಿತ್ತು. ಸಂಜೆ 4 ಗಂಟೆ ಸುಮಾರಿಗೆ ಅವರು ಬಿಡಿಒ ಕಚೇರಿಗೆ ಮುತ್ತಿಗೆ ಹಾಕಿ, ಮೂವರು ಮಹಿಳೆಯರು ಸೇರಿದಂತೆ ಏಳು ನ್ಯಾಯಾಂಗ ಅಧಿಕಾರಿಗಳನ್ನು ಒತ್ತೆಯಾಳಾಗಿ ಇಟ್ಟುಕೊಂಡಿದ್ದರು.





