“ಅವರು ಇನ್ನೂ ಪಾಠ ಕಲಿತಿಲ್ಲ”: NEET-UG ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಎನ್ಟಿಎಗೆ ಸುಪ್ರೀಂ ಕೋರ್ಟ್ ತರಾಟೆ

Photo credit: PTI
ಹೊಸದಿಲ್ಲಿ: ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿ ಎನ್ಟಿಎ(ರಾಷ್ಟ್ರೀಯ ಪರೀಕ್ಷಾ ಸಂಸ್ಥೆ)ಯನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದ್ದು, “ದುಃಖಕರವೆಂದರೆ, ಅವರು ಇನ್ನೂ ಪಾಠ ಕಲಿತಿಲ್ಲ” ಎಂದು ಹೇಳಿದೆ.
ಈ ವರ್ಷ ಸುಮಾರು 23 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದ NEET ಪರೀಕ್ಷೆಗೆ ಸಂಬಂಧಿಸಿದ ವಿವಾದಗಳ ಬಳಿಕ ಶಿಫಾರಸು ಮಾಡಲಾಗಿದ್ದ ಸುಧಾರಣೆಗಳನ್ನು ಹೇಗೆ ಜಾರಿಗೆ ತರಲಾಗಿದೆ ಎಂಬ ಬಗ್ಗೆ ಸುಪ್ರೀಂ ಕೋರ್ಟ್ ಇದೇ ವೇಳೆ ತೀಕ್ಷ್ಣವಾಗಿ ಪ್ರಶ್ನಿಸಿದೆ.
ಅರ್ಜಿದಾರರ ಪರವಾಗಿ ಹಾಜರಾದ ವಕೀಲೆ ತನ್ವಿ ದುಬೆ, ಈ ವಿಷಯದ ತುರ್ತು ವಿಚಾರಣೆಯ ಅಗತ್ಯತೆ ಬಗ್ಗೆ ಹೇಳಿದರು.
ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ನ್ಯಾಯಪೀಠ, ಬಹಳ ವಿಷಾದಕರ ಸಂಗತಿ, ಅವರು ಯಾವುದೇ ಪಾಠ ಕಲಿತಿಲ್ಲ. ನಾವು ಸಮಿತಿಯೊಂದನ್ನು ರಚಿಸಿದ್ದೆವು ಎಂದು ಹೇಳಿದೆ. ಈ ಹಿಂದೆ ಜಾರಿಗೆ ತರಲಾಗಿದ್ದ ಮೇಲ್ವಿಚಾರಣೆ ಮತ್ತು ಸುಧಾರಣಾ ವ್ಯವಸ್ಥೆಗಳ ಬಗ್ಗೆ ಉಲ್ಲೇಖಿಸಿದ ನ್ಯಾಯಾಲಯ, ಅವುಗಳ ಅನುಷ್ಠಾನಕ್ಕೆ ಸಂಬಂಧಿಸಿ ಹೊಣೆಗಾರಿಕೆಯನ್ನು ಪ್ರಶ್ನಿಸಿತು.
ನವೆಂಬರ್ 14ರಂದು ರಚಿಸಲಾದ ಮೇಲ್ವಿಚಾರಣಾ ಸಮಿತಿಯ ಸ್ಥಿತಿಗತಿಗಳ ವಿವರಗಳನ್ನು ಒಳಗೊಂಡ ಪ್ರಮಾಣಪತ್ರವನ್ನು ಸಲ್ಲಿಸುವಂತೆ ಎನ್ಟಿಎಗೆ ನಿರ್ದೇಶಿಸಿದ ನ್ಯಾಯಾಲಯ ಪರೀಕ್ಷಾ ಭದ್ರತೆಯನ್ನು ಬಲಪಡಿಸಲು ಈ ಹಿಂದೆ ರಚಿಸಲಾಗಿದ್ದ ಉನ್ನತ ಮಟ್ಟದ ಸಮಿತಿಯ ಶಿಫಾರಸುಗಳನ್ನು ಜಾರಿಗೆ ತರಲು ಕೈಗೊಂಡ ಕ್ರಮಗಳ ವಿವರವನ್ನು ದಾಖಲೆಗಳಲ್ಲಿ ಸಲ್ಲಿಸುವಂತೆ ಜೆ ರಾಧಾಕೃಷ್ಣ ಅವರಿಗೆ ಸೂಚಿಸಿದೆ. ಈ ಎರಡೂ ಅಫಿಡವಿಟ್ಗಳನ್ನು ಮೂರು ದಿನಗಳಲ್ಲಿ ಸಲ್ಲಿಸುವಂತೆ ನಿರ್ದೇಶಿಸಲಾಗಿದೆ.






